ಕುಶಾಲನಗರ : ಕಾವೇರಿದ ಎಪಿಸಿಎಂಎಸ್ ಚುನಾವಣೆ, ಅಭ್ಯರ್ಥಿಗಳಿಂದ ಬಿರುಸಿನ ಮತಯಾಚನೆ
ಕುಶಾಲನಗರ : ತಾಲ್ಲೂಕಿನ ಪ್ರತಿಷ್ಠಿತ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರಿಗೆ ಆ.31 ರಂದು ಶುಕ್ರವಾರ ಚುನಾವಣೆ ನಡೆಯಲಿದ್ದು, ಚುನಾವಣಾ ಕಾವು ರಂಗೇರಿದೆ.
ಸಂಘದ ಕುಶಾಲನಗರ, ನಂಜರಾಯಪಟ್ಟಣ ಹಾಗೂ ಹೆಬ್ಬಾಲೆ ವಿಭಾಗದಿಂದ ಒಟ್ಟು 12 ನಿರ್ದೇಶಕ ಆಯ್ಕೆ ನಡೆಯಲಿದ್ದು,ಈಗಾಗಲೇ ಸುಂಟಿಕೊಪ್ಪ ವಿಭಾಗದಿಂದ 4 ಮಂದಿ ನಿರ್ದೇಶಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಂಜರಾಯಪಟ್ಟಣ ಹಾಗೂ ಹೆಬ್ಬಾಲೆ ವಿಭಾಗದಿಂದ 8 ಮಂದಿ ನಿರ್ದೇಶಕರಿಗೆ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ.
ಹೆಬ್ಬಾಲೆ ವಿಭಾಗದಿಂದ ಹಿಂದುಳಿದ ವರ್ಗ(ಬಿಸಿಎಂ ಎ) ಮೀಸಲು ಕ್ಷೇತ್ರದಿಂದ ಅಭ್ಯರ್ಥಿ ಎಚ್.ಟಿ.ದಿನೇಶ್ ಹಾಗೂ ಸಾಮಾನ್ಯ ಕ್ಷೇತ್ರದಿಂದ ಎಂ.ಜಿ.ಕುಮಾರಸ್ವಾಮಿ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಟಿ.ಎಲ್.ಗಂಗಮ್ಮ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕಣದಲ್ಲಿದ್ದು, ಬಿರುಸಿನ ಮತಯಾಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೆಬ್ಬಾಲೆ, ತೊರೆನೂರು, ಶಿರಂಗಾಲ ಹಾಗೂ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮತದಾರರ ಮನೆಗಳಿಗೆ ಬೆಂಬಲಿತರೊಂದಿಗೆ ತೆರಳಿ ಮತದಾರರ ಮನವೊಲಿಸುವ ಮೂಲಕ ಮತ ಬೇಟೆಯ ತಲ್ಲಿನರಾಗಿದ್ದಾರೆ.
ಈ ಸಂದರ್ಭ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಅರುಣ್ ರಾವ್, ಹೆಗ್ಗಡಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುನೀಲ್ ರಾವ್, ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಕೆ.ಎಸ್.ಕೃಷ್ಣೇಗೌಡ, ಮೂರ್ತಿ ಅಳುವಾರ,ಮುಖಂಡರಾದ ಎಚ್.ಪಿ.ಮಂಜುನಾಥ್ ಹಳಗೋಟೆ, ಟಿ.ಜಿ.ಲೋಕೇಶ್ ತೊರೆನೂರು, ರವಿಚಂದ್ರ, ಪ್ರದೀಪ್ ರೆಡ್ಡಿ, ಚಿಂದಂಬರ್, ಅನಿಲ್,ರಂಗ,ಮಲ್ಲೇಶ್,ಮೂರ್ತಿ, ವೀರಭದ್ರ,ಹರ್ಷ ಮತ್ತಿತರರು ಪಾಲ್ಗೊಂಡಿದ್ದರು.