ಕುಶಾಲನಗರ : ಕೊಡಗು ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭ; ಕಾರ್ಯಕರ್ತ ಸಂಘಟಿತ ಫಲದಿಂದ ಬಿಜೆಪಿ ನಂಬರ್ ಒನ್ ಪಕ್ಷವಾಗಿ ಬೆಳದು ನಿಂತಿದೆ : ನಳಿನ್ ಕುಮಾರ್ ಕಟೀಲ್
ಕುಶಾಲನಗರ : ಕಡಿಮೆ ಅವಧಿಯಲ್ಲಿ ಪಕ್ಷಗಳನ್ನು ಸ್ಥಾಪಿಸಿಕೊಂಡು ಅಧಿಕಾರಕ್ಕೆ ಬರುವ ಪಕ್ಷಗಳು ಬಹುಬೇಗ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ ಎಂದು ಮಾಜಿ ಸಂಸದ, ರಾಜ್ಯ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರಿನ ಕೂರ್ಗ್ ನೇಚರ್ ಬ್ಲಿಫ್ ರೆಸಾರ್ಟ್ ಸಭಾಂಗಣದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026 ರ ಅಂಗವಾಗಿ ಏರ್ಪಡಿಸಿದ್ದ
ಕೊಡಗು ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲಕ್ಷಾಂತರ ಕಾರ್ಯಕರ್ತರ ಸಂಘಟಿತ ಹೋರಾಟದ ಫಲವಾಗಿ ಶೂನ್ಯದಿಂದ ಆಕಾಶದ ಎತ್ತರಕ್ಕೆ ಬೆಳೆದು ಬಂದ ದೇಶದ ನಂ ಒನ್ ಪಕ್ಷವಾಗಿ ಬೆಳೆದ ಭಾರತೀಯ ಜನತಾ ಪಕ್ಷ ಎಲ್ಲ ಪಕ್ಷಗಳಿಗಿಂತ ಭಿನ್ನವಾಗಿದೆ ಎಂದರು.
ವ್ಯಕ್ತಿಗಿಂತ ಪಕ್ಷ ಶ್ರೇಷ್ಠ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಘೋಷವಾಕ್ಯವನ್ನು ಆಧರಿಸಿ ಅವರ ವಿಚಾರಧಾರೆಯ ಮೇಲೆ ಪಕ್ಷವನ್ನು ಗಟ್ಟಿಯಾಗಿ ಕಟ್ಟುವ ಪ್ರಯತ್ನಕ್ಕೆ ಇಂತ ಶಿಬಿರಗಳು ಸಹಕಾರಿಯಾಗಿವೆ.
ದೇಶದಾದ್ಯಂತ ನಿರಂತರವಾಗಿ ನಡೆಯುತ್ತಿರುವ ಇಂತಹ ಶಿಬಿರಗಳಿಂದ ಭಾರತೀಯ ಜನತಾ ಪಕ್ಷ ತನ್ನ ಕದಂಬ ಹಸ್ತಗಳನ್ನು ಚಾಚಿ ಬೆಳೆದು ನಿಂತಿದೆ. ಪಕ್ಷದಲ್ಲಿ ನಾಯಕರು ಮಾಜಿಗಳಾಗುತ್ತಾರೆ, ಆದರೆ ಕಾರ್ಯಕರ್ತರು ಎಂದಿಗೂ ಚಿರಂತನವಾಗಿರುತ್ತಾರೆ. ಆ ಹಿನ್ನೆಲೆಯಲ್ಲಿ ಈ ಪ್ರಶಿಕ್ಷಣ ಶಿಬಿರದಲ್ಲಿ ಕಲಿತಂತವರು ತಮ್ಮ ಪರಿದಿಯಲ್ಲಿ ಬರುವ ಕಾರ್ಯಕರ್ತರಿಗೆ ಸಂಘಟನೆಯ ವಿಚಾರಗಳನ್ನು ತಿಳಿಸುವ ಪಕ್ಷದ ಬೆಳವಣಿಗೆಗೆ ಕಾರಣಿಭೂತರಾಗಬೇಕು ಎಂದರು.
ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಚಿಂತನೆ ಮತ್ತು ಆಶಯದಂತೆ ಕಾಶ್ಮೀರದಲ್ಲಿ 370 ನೇ ವಿಧಿಯನ್ನು ತೆಗೆದು ಹಾಕುವ ಪ್ರಯತ್ನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಚುನಾವಣಾ ಪೂರ್ವ ಆಶಯಗಳು ಯಶಸ್ವಿಯಾಗಲು ಕಾರಣವಾಗಿವೆ ಎಂದರು. ಸರ್ಕಾರವನ್ನು ಯಾರು ಬೇಕಾದರೂ ನಡೆಸಬಹುದು. ಆದರೆ ಸರ್ಕಾರದ ಮೂಲಕ ಸಮಾಜ ಪರಿವರ್ತನೆ ತರುವುದು ಅಷ್ಟು ಸುಲಭವಲ್ಲ. ನೂರಾರು ವರ್ಷಗಳ ಕಾಲದ ಸಮಸ್ಯೆಗಳನ್ನು ಬಗೆಹರಿಸಿ, ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಹಾಗೂ ಕಾಶ್ಮೀರಕ್ಕೆ ಹಾಕಿದ್ದ ಹಿಂದಿನ ಸರ್ಕಾರದ 370ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಒಂದು ದೇಶ. ಒಂದು ಸಂವಿಧಾನ ಎಂಬುದನ್ನು ಸ್ಥಾಪಿಸಿ ಭಾರತೀಯ ಜನತಾ ಪಕ್ಷದ ಯಶಸ್ವಿ ಸರ್ಕಾರ ಎನಿಸಿದೆ. ವಿದೇಶಗಳಲ್ಲೂ ನಮ್ಮ ಭಾರತೀಯ ಸನಾತನ ಸಂಸ್ಕೃತಿಯ ಹೆಜ್ಜೆಗಳನ್ನು ಮೂಡಿಸುವ ಪ್ರಯತ್ನದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಯಶಸ್ವಿಯಾಗಿದೆ.
ಕೊಡಗು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಎರಡು ದಿನಗಳ ಕಾಲ ನಡೆದ ರಾಜ್ಯದಲ್ಲಿಯೇ ಮೊದಲ ಈ ಪ್ರಶಿಕ್ಷಣ ಶಿಬಿರದಲ್ಲಿ 102 ಅಪೇಕ್ಷಿತ ನಾಯಕರು ಭಾಗವಹಿಸುವ ಮೂಲಕ ಶೇ 90ರಷ್ಟು ಸದಸ್ಯರು ಹಾಜರಿಯಾಗಿ ಎರಡು ದಿನಗಳಲ್ಲಿ 13 ಅವಧಿಗಳನ್ನು, 32 ಗಂಟೆಗಳವರೆಗೆ ಉತ್ತಮ ಉಪನ್ಯಾಸಗಳ ಮೂಲಕ ಪಕ್ಷ ಸಂಘಟನೆಗೆ ಸಹಕಾರಿಯಾಗುವ ಅಂಶಗಳನ್ನು ಆಸಕ್ತಿಯಿಂದ ಪ್ರತಿಯೊಬ್ಬರು ಕಲಿಯಲು ಸಾಧ್ಯವಾಗಿದೆ. ಎಂದರು.
ವೇದಿಕೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಸುಜಾ ಕುಶಲಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮನು ಮುತ್ತಪ್ಪ, ರವಿ ಕುಶಾಲಪ್ಪ, ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಬಿ.ಬಿ. ಭಾರತೀಶ್, ಕೊಡಗು ಜಿಲ್ಲಾ ಉಸ್ತುವಾರಿ ಮೈಸೂರಿನ ರಾಜೇಶ್, ಲಿಂಗರಾಜಗೌಡ ಇದ್ದರು.
ಸಭೆಯ ಕಾರ್ಯನಿರ್ವಹಣೆಯನ್ನು ಬಿಜೆಪಿಯ ಜಿಲ್ಲಾ ಸಮಿತಿಯ ವಿಕೆ ಲೋಕೇಶ್, ಮಹೇಶ್ ಜೈನಿ, ಮತ್ತು ಅರುಣ್ ಕುಮಾರ್ ಪಾಲ್ಗೊಂಡಿದ್ದರು.
ಕುಶಾಲನಗರ ಸಮೀಪದ ಚಿಕ್ಕತ್ತೂರು ಖಾಸಗಿ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಕೊಡಗು ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದ, ರಾಜ್ಯ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.
