ಕುಶಾಲನಗರ: ಸೆಪ್ಟೆಂಬರ್ 6 ರಂದು ಬೃಹತ್ ಗ್ರಾಹಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ
ಕುಶಾಲನಗರ:ಬ್ಯಾಂಕ್ ಗಳು, ಕಾರು, ಬೈಕು, ಹೋಮ್ ಅಪ್ಲೈನ್ಸ್, ಆಹಾರ ಇನ್ನಿತರ ಜನರ ಅವಶ್ಯಗಳನ್ನು ಪೂರೈಸುವ ಕಂಪೆನಿಗಳನ್ನು ಒಂದೇ ವೇದಿಕೆಯಡಿ ಸೇರಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಜೊತೆಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ಮೆಚ್ಚುವಂತದ್ದು ಎಂದು ಕುಶಾಲನಗರ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಸತೀಶ್ ತಿಳಿಸಿದರು.
ಕುಶಾಲನಗರದ ಗಣಪತಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಸೆಪ್ಟೆಂಬರ್ 6 ರಂದು ನಡೆಯುವ ಬೃಹತ್ ಗ್ರಾಹಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಎಸ್.ಕೆ.ಸತೀಶ್, ದೊಡ್ಡ ದೊಡ್ಡ ಕಂಪೆನಿಗಳ ಜೊತೆಗೆ ಸ್ಥಳೀಯರಿಗೂ ಅವಕಾಶ ನೀಡಿರುವುದು ಶ್ಲಾಘನೀಯ. ಇದರಿಂದ ಕೊಡಗು ಜಿಲ್ಲೆಯ ವ್ಯಾಪಾರ ವಹಿವಾಟು ಹೆಚ್ಚಳವಾಗುತ್ತೆ. ಮಾರುಕಟ್ಟೆ ವಿಸ್ತರಣೆಗಾಗಿ ಇಂತಹ ಮೇಳಗಳು ಸಹಕಾರಿ. ಅದರಲ್ಲೂ ಕುಶಾಲನಗರದ ಹೆಸರು ರಾಜ್ಯದ ಮೂಲೆ ಮೂಲೆಗೆ ತಲುಪುವ ಮೂಲಕ ನಮ್ಮ ಮಾರುಕಟ್ಟೆಯ ಶಕ್ತಿ ಗೊತ್ತಾಗಲಿದೆ ಎಂದರು.
ಚೇಂಬರ್ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಯಾವುದೇ ಸಂಘಟನೆ ಸಕ್ರಿಯವಾಗಿರಬೇಕು. ಸದಾ ಕಾರ್ಯ ಚಟುವಟಿಕೆ ನಡೆಸುತ್ತಿದ್ದರೆ ಸದಸ್ಯರಿಗೂ ಗೌರವ ಬರುತ್ತದೆ. ಕೊಡಗು ಜಿಲ್ಲೆಯಲ್ಲಿ ಇಂತಹ ಒಂದು ಮೇಳ ಮೊದಲ ಬಾರಿಗೆ ಕುಶಾಲನಗರದಲ್ಲಿ ನಡೆಯುತ್ತಿದೆ ಎನ್ನುವುದೇ ಹೆಮ್ಮೆಯ ವಿಚಾರ. ಜಿಲ್ಲೆಯ ಮೂಲೆ ಮೂಲೆಯಿಂದ ಜನರು ಆಗಮಿಸುವ ಮೂಲಕ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಈಗ ನಡೆಯುವ ಮೇಳದಿಂದ ಮಾರುಕಟ್ಟೆ ವಿಸ್ತಾರವಾಗುತ್ತೆ ಎಂದು ಉದ್ಯಮಿಗಳು ಹೇಳುವುದನ್ನು ಕೇಳುತ್ತಿದ್ದೇವೆ ಎಂದು ನಾಗೇಶ್ ಹರ್ಷ ವ್ಯಕ್ತಪಡಿಸಿದರು. ಚೇಂಬರ್ ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಚಿ ಎನ್.ವಿ.ಬಾಬು, ನಿರ್ದೇಶಕಿ ಅಶ್ವಿನಿ ರೈ, ಕೋದಂಡರಾಮ, ರಾಜೀವ್, ನಾಗ ಪ್ರವೀಣ್, ಪೂಜಾ, ಸತೀಶ್ ಇತರರು ಉಪಸ್ಥಿತರಿದ್ದರು.