ರಾಜಾಸೀಟ್‌ನಲ್ಲಿ ಗ್ಲಾಸ್‌ಬ್ರಿಡ್ಜ್ ನಿರ್ಮಾಣ ಮಾಡಿದ್ದಲ್ಲಿ ಕಾನೂನು ಹೋರಾಟ:ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ

ರಾಜಾಸೀಟ್‌ನಲ್ಲಿ ಗ್ಲಾಸ್‌ಬ್ರಿಡ್ಜ್ ನಿರ್ಮಾಣ ಮಾಡಿದ್ದಲ್ಲಿ ಕಾನೂನು ಹೋರಾಟ:ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ

ಮಡಿಕೇರಿ: ಪ್ರವಾಸಿಗರ ಹಾಟ್‌ಸ್ಪಾಟ್ ಎಂದೇ ಪ್ರಸಿದ್ಧಿ ಪಡೆದಿರುವ ರಾಜಾಸೀಟ್‌ನಲ್ಲಿ ಗ್ಲಾಸ್‌ಬ್ರಿಡ್ಜ್ ನಿರ್ಮಾಣ ಮಾಡಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಎಚ್ಚರಿಸಿದ್ದಾರೆ. ಮಡಿಕೇರಿಯ ಪ್ರಖ್ಯಾತ ವಾಯುವಿಹಾರ ಹಾಗೂ ಪ್ರಕೃತಿ ವೀಕ್ಷಣಾ ಉದ್ಯಾನವನ ಈಗ ವಾಣಿಜ್ಯಕರಣವಾಗಿ ಪರಿವರ್ತನೆಯಾಗುತ್ತಿದೆ. ಈಗಾಗಲೇ ಗ್ರೇಟರ್ ರಾಜಾಸೀಟ್ ಮಾಡಿ ಸಾಕಷ್ಟು ಸಮಸ್ಯೆಗಳು ಎದುರಾಗಿದೆ. ವಾಹನನಿಲುಗಡೆ, ಸ್ಥಳೀಯರಿಗೆ ಇಲ್ಲಿ ವಿಹಾರಿಸಲು ಅವಕಾಶವಿಲ್ಲ. ಹತ್ತಿರದಲ್ಲೇ ಇರುವ ದೇವಾಲಯಕ್ಕೆ ಬರುವ ಭಕ್ತರಿಗೆ ಬಹಳ ತೊಂದರೆಗಳು ಆಗುತ್ತಿದೆ. ಆದರೆ, ಈಗ ಇಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಮಾಡಲು ಹೊರಟಿರುವ ಕ್ರಮವನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ, ಬರೆಕುಸಿತ ಇಂತಹ ದುರ್ಘಟನೆಗಳು ನಡೆದಿದೆ. ರಾಜಾಸೀಟ್ ಅಕ್ಕಪಕ್ಕದ ಚಾಮುಂಡೇಶ್ವರಿನಗರ, ಇಂದಿರಾನಗರ, ಜ್ಯೋತಿನಗರಗಳು ಪ್ರಕೃತಿ ವಿಕೋಪಕ್ಕೆ ಈ ಹಿಂದೆ ತುತ್ತಾಗಿರುವುದು ಅನುಭವಿದೆ. ಕಣ್ಣು ಮುಂದೆ ಇಂತಹ ಘಟನೆಗಳು ಇರುವಾಗಲೇ ಈ ಯೋಜನೆ ಅನುಷ್ಠಾನ ಸಮಂಜಸವಲ್ಲ. ಆದುದ್ದರಿಂದ ಈ ಕೂಡಲೇ ಈ ಗ್ಲಾಸ್ ಬ್ರಿಡ್ಜ್ ಯೋಜನೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದ ಅವರು, ಈ ಯೋಜನೆಯ ರೂಪುರೇಷೆ ಹಾಗೂ ಯೋಜನೆ ಬಗ್ಗೆ ನಗರಸಭೆಯ ಗಮನಕ್ಕೆ ಬರದೆ ಚರ್ಚೆಯೂ ಆಗಿರುವುದಿಲ್ಲ. ಈ ಗ್ಲಾಸ್ ಬ್ರಿಡ್ಜ್‌ನ ಬಗ್ಗೆ ಸ್ಥಳೀಯ ಯಾವುದೇ ಪ್ರತಿಕೆಗಳಲ್ಲಿ ಟೆಂಡರ್ ಆಹ್ವಾನ ಪ್ರಕಟನೆ ನೀಡಲಿಲ್ಲ. ಪಿ.ಪಿ.ಪಿ ವ್ಯವಸ್ಥೆಯಡಿಯಲ್ಲಿ ಕೆಲವರು ಒಳಗಿಂದೊಳಗೆ ವ್ಯವಹರಿಸುತ್ತಿದ್ದು, ಇದು ಎಲ್ಲರ ಸಂಶಯಕ್ಕೆ ಎಡೆಮಾಡಿದೆ. ಇದರ ಅನುಷ್ಠಾನಕ್ಕೆ ಮುಂದಾದರೆ ಬಿಜೆಪಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ ಅವರು, ಈಗಾಗಲೇ ಪ್ರವಾಸೋದ್ಯಮ ಇಲಾಖೆ ಗುರುತು ಮಾಡಿರುವ ಪಟ್ಟಿಯಿಂದ ಭಾಗಮಂಡಲ ತಲಕಾವೇರಿಯನ್ನು ಕೈಬಿಟ್ಟು ಧಾರ್ಮಿಕ ಸ್ಥಳವಾಗಿ ಮುಂದುವರಿಸಬೇಕೆಂದು ಆಗ್ರಹಿಸಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಧಿಕಾರದಿಂದ ಕೆಲವು ವಾಣಿಜ್ಯ ಮತ್ತು ವಸತಿಪರಿವರ್ತನೆಗೆ ಸಾಕಷ್ಟು ತೊಂದರೆಗಳು ಆಗುತ್ತಿದ್ದು, ಒಂದು ಎಕರೆ ಪರಿವರ್ತನೆಗೆ ಲಕ್ಷಾನುಗಟ್ಟಲೇ ಹಣ ತೆರಬೇಕಾಗಿದೆ. ಇದು ಸ್ಥಳೀಯರಿಂದ ಹಾಗೂ ರೈತರಿಂದ ಸಾಧ್ಯವಾಗುತ್ತಿಲ್ಲ. ಇದರ ಹಿಂದೆ ಬ್ರೋಕರ್‌ಗಳು ಹಾಗೂ ಭೂ ಮಾಫಿಯ ಕೆಲಸ ಮಾಡುತ್ತಿದ್ದು, ಇದೊಂದು ದೊಡ್ಡ ಹಗಲು ದರೋಡೆಯಾಗಿದೆ ಎಂದು ಆರೋಪಿಸಿದರು. ಮುಡಾದ ಅಧೀನಕ್ಕೆ ಒಳಪಡುವ ಅಕ್ಕಪಕ್ಕದ ಗ್ರಾಮಗಳಲ್ಲಿ ಯಾವ ಜಾಗ ಈಗಾಗಲೇ ಎಲ್ಲೋ ಜ್ಹೋನ್ ಆಗಿದೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಲಿ ಅಥವಾ ಯಾವ ಗ್ರಾಮದಲ್ಲಿ ಯಾವ ಸ್ಥಳ ಈ ಪರಿರ್ವತನೆಗೆ ಯೋಗ್ಯವಿದೆ ಎಂಬುದನ್ನು ಪ್ರಕಟಿಸಬೇಕು. ಇದನ್ನು ಹೊರತು ಪಡಿಸಿ ವೈಯುಕ್ತಿವಾಗಿ ಒಬ್ಬೊಬ್ಬರ ಜಾಗವನ್ನು ಲಕ್ಷಗಟ್ಟಲೆ ಹಣಪಡೆದು ಪರಿವರ್ತನೆ ಮಾಡುವುದಾಗಿ ದಂಧೆ ಮಾಡುವುದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಕಿಲನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ವಕ್ತಾರರಾದ ಅರುಣ್ ಕುಮಾರ್, ತಳೂರು ಕಿಶೋರ್ ಇದ್ದರು.