ಕ್ರೀಡಾ ಪರಂಪರೆ ಮುಂದುವರೆಯಲಿ;ಕೊಡಗು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಸಾ.ರಾ. ಮಹೇಶ್
ಮಡಿಕೇರಿ:ಕೊಡವ ಕೌಟುಂಬಿಕ ಬೇತ್ರಿ ಮುಕ್ಕಾಟಿರ ಕ್ರಿಕೆಟ್ ನಮ್ಮೆಯ ಫೈನಲ್ ಪಂದ್ಯಕ್ಕೆ ಮುಖ್ಯ ಅತಿಥಿಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಮೊದಲಿಗೆ ಆಟಗಾರರನ್ನು ಪರಿಚಯಿಸಿಕೊಂಡು ಪಂದ್ಯಾಟಕ್ಕೆ ಶುಭ ಕೋರಿದರು.
ಕೊಡಗು ಜಿಲ್ಲೆ ಹಾಕಿ ಕ್ರೀಡಾ ಪರಂಪರೆಗೆ ಹೆಸರುವಾಸಿಯಾಗಿದೆ. ಇದರ ನಡುವೆಯೇ ಕುಟುಂಬಗಳ ನಡುವೆ ಕ್ರಿಕೆಟ್ ಆಯೋಜನೆ ಮಾಡುತ್ತಿರುವುದು ಮತ್ತೊಂದು ಹೆಮ್ಮೆಯ ಸಂಗತಿ. ನೂರಾರು ಕುಟುಂಬಗಳು ಹಾಕಿ ಮತ್ತು ಕ್ರಿಕೆಟ್ ಕ್ರೀಡೆಯಲ್ಲಿ ಪಾಲ್ಗೊಂಡಿವೆ. ಜಿಲ್ಲೆಯಲ್ಲಿರುವ ಎಲ್ಲಾ ಕುಟುಂಬಗಳು ಕೂಡ ಕ್ರೀಡಾ ಕೂಟಗಳನ್ನು ಅದ್ದೂರಿಯಿಂದ ಆಯೋಜಿಸುವಂತಾಗಲಿ. ಜಿಲ್ಲೆಯ ಈ ಕ್ರೀಡಾ ಪರಂಪರೆ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ಕೊಡಗು ಜಿಲ್ಲೆ ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ನೀರುಣಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ತಾಯಿ ಕಾವೇರಿಯ ಆಶೀರ್ವಾದ ಜಿಲ್ಲೆಯೆ ಮೇಲೆ ಸದಾ ಇರಲಿ ಎಂದು ಹಾರೈಸಿದರು. 2018ರಲ್ಲಿ ಜಿಲ್ಲೆಯಲ್ಲಿ ಘಟಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ತಾವು ಇಲ್ಲಯೇ ವಾಸ್ತವ ಹೂಡಿ, ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರ ಮೂಲಕ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಿದ್ದನ್ನು ಇದೇ ಸಂದರ್ಭ ಸ್ಮರಿಸಿದರು.
ಕೊಡಗಿನ ಕೊಡುಗೆ ಅಪಾರ
ಒಲಂಪಿಕ್ಸ್ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕ್ರೀಡಾ ಕೂಟಗಳಲ್ಲಿ ಕೊಡಗಿನ ಕ್ರೀಡಾಪಟುಗಳು ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕೊಡವ ಸಮುದಾಯ ಚಿಕ್ಕದಾದರೂ ಕೂಡ ಕ್ರೀಡಾ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಇಡೀ ದೇಶದಲ್ಲಿಯೇ ಕೊಡಗು ಮಾತ್ರವೇ ಕ್ರೀಡೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕ್ರೀಡಾಪಟುಗಳನ್ನು ನೀಡಿದೆ ಎಂದು ಅವರು ಹೇಳಿದರು. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಈ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಇಂತಹ ಕ್ರೀಡಾಕೂಟಗಳು ಅವಶ್ಯವಾಗಿವೆ. ಬಾಳುಗೋಡು ಬಳಿ ಕ್ರೀಡಾ ಸಮುಚ್ಚಯ ನಿರ್ಮಾಣದ ಕಾಮಗಾರಿ ಆರಂಭವಾಗಿದೆ. ಮುಂದಿನ 3 ವರ್ಷಗಳಲ್ಲಿ ಇದು ಪೂರ್ಣಗೊಳ್ಳಲಿದ್ದು, ಜಿಲ್ಲೆಗೆ ಕೀರ್ತಿ ತಂದ ಎಲ್ಲಾ ಕ್ರೀಡಾಪಟುಗಳ ಹೆಸರಿಗೆ ಅರ್ಪಿಸಲಾಗುತ್ತದೆ ಎಂದು ಹೇಳಿದರು.
ಬೇತ್ರಿ ಮುಕ್ಕಾಟಿರ ಕ್ರಿಕೆಟ್ ನಮ್ಮೆಯ ಅಧ್ಯಕ್ಷ ಸುರೇಶ್ ಪೆಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಕ್ಕಾಟಿರ ರವಿ ಚೀಯಣ್ಣ ಅತಿಥಿಗಳನ್ನು ಸ್ವಾಗತಿಸಿದರು. ಉದ್ಯಮಿಗಳಾದ ಮಾಚೆಟ್ಟಿರ ಜೆನಿತ್ ಅಯ್ಯಪ್ಪ, ಮಣವಟ್ಟಿರ ಮಧು ಬೋಪಣ್ಣ, ಎಸ್.ಬಾಲಚಂದ್ರ, ಕೊಡವ ಕ್ರಿಕೆಟ್ ಅಕಾಡೆಮಿ ಉಪಾಧ್ಯಕ್ಷ ಚೇರಂಡ ಕಿಶನ್, ಹಿರಿಯ ಆರ್‌ಟಿಓ ಅಧಿಕಾರಿ ನಂದೇಟಿರ ಸುಬ್ಬಯ್ಯ, ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಬೋಪಣ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.