ಶ್ರೇಷ್ಠ ಅಂಕಗಳಿಂದ ಮಾತ್ರವೇ ಜೀವನವನ್ನು ನಿರ್ಧರಿಸಲು ಸಾಧ್ಯವಿಲ್ಲ;ಲೇಖಕ ಹಾಗೂ ಪ್ರಾಧ್ಯಾಪಕ ಅರ್ಜುನ್ ಮೌರ್ಯ ಅಭಿಪ್ರಾಯ ಉಮ್ಮತ್‌ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಕ್ಷಣ ಮೇಳ, ಪ್ರತಿಭಾ ಪುರಸ್ಕಾರ ಮತ್ತು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಮಡಿಕೇರಿ,ಮೇ.12: ಉಮ್ಮತ್‌ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ಶಿಕ್ಷಣ ಮೇಳ, ಪ್ರತಿಭಾ ಪುರಸ್ಕಾರ ಮತ್ತು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.100ರಷ್ಟು ಸಾಧನೆ ಮಾಡಿದ ಶಾಲಾ ಕಾಲೇಜುಗಳ ಪ್ರಾಂಶುಪಾಲರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಗಣ್ಯರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಲೇಖಕ ಹಾಗೂ ಪ್ರಾಧ್ಯಾಪಕ ಅರ್ಜುನ್ ಮೌರ್ಯ, ಶ್ರೇಷ್ಠ ಅಂಕಗಳಿಂದ ಮಾತ್ರವೇ ಜೀವನವನ್ನು ನಿರ್ಧರಿಸಲು ಸಾಧ್ಯವಿಲ್ಲ. ಇದರ ಹೊರತಾಗಿಯೂ ಒಂದು ಬದುಕಿದೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಜೀವನ ಕೇವಲ ಅಂಕಗಳಿಗೆ ಸೀಮಿತವಾಗಬಾರದು ಎಂದು ಸಲಹೆ ನೀಡಿದರು. ಶಿಕ್ಷಣ ಕ್ಷೇತ್ರದಲ್ಲಿ ಅವಕಾಶಗಳ ಜೊತೆಯಲ್ಲಿಯೇ ಸವಾಲುಗಳಿವೆ. ಅವುಗಳ ಬಗ್ಗೆಯೂ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.
ಶಿಕ್ಷಣ ಮಾತ್ರವೇ ನಿಮ್ಮ ಧರ್ಮವನ್ನು ನಿರ್ಧರಿಸುತ್ತದೆಯೇ ಹೊರತು, ಚೌಕಟ್ಟಿನ ಧರ್ಮ ಶಿಕ್ಷಣವನ್ನು ನಿರ್ಧರಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪೋಷಕರ ನಿರೀಕ್ಷೆಗಳ ಮೇಲೆ ಕಲ್ಲು ಎತ್ತಿ ಹಾಕುವ ಕೆಲಸ ಮಾಡದಂತೆ ಕಿವಿಮಾತು ಹೇಳಿದರು. ಇಂದು ಶಿಕ್ಷಣ ಕ್ಷೇತ್ರ ಕೂಡ ಮಾಫಿಯಾ ಆಗುತ್ತಿದೆ ಎಂದು ವಿಷಾಧಿಸಿದ ಅವರು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬದುಕಿನ ಕುರಿತು ಮಾರ್ಗದರ್ಶನ ಮಾಡುವಲ್ಲಿ ಬೋಧಕ ವರ್ಗ ಕೂಡ ಎಡವುತ್ತಿದ್ದಾರೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಉಮ್ಮತ್ ಒನ್ ಸಂಸ್ಥೆ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೇರಣೆ, ಪ್ರೋತ್ಸಾಹ ನೀಡುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೌಲಭ್ಯ ಬಳಸಿಕೊಳ್ಳಿ:
ಕೊಡ್ಲಿಪೇಟೆಯ ಎಪಿಜೆ ಅಬ್ದುಲ್ ಕಲಾಂ ಶಾಲೆಯ ಪ್ರಾಂಶುಪಾಲ ಡಾ.ಗುರುಸ್ವಾಮಿ ಮಾತನಾಡಿ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಮೂಲಕ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ಹಲವಾರು ಸೌಲಭ್ಯಗಳನ್ನು ಸರಕಾರ ಒದಗಿಸುತ್ತಿದೆ. ಇದರ ಸೌಲಭ್ಯ ಪಡೆದುಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಹೇಳಿದರು. ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ ಹಲವಾರು ಶಾಲಾ ಕಾಲೇಜುಗಳಿದ್ದು, ಬಡ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಾತ್ರವಲ್ಲದೇ ಇದೀಗ ಸಿಬಿಎಸ್‌ಸಿ ಶಿಕ್ಷಣವನ್ನು ಕೂಡ ಜಾರಿಗೆ ತರಲಾಗಿದೆ. ಕುಶಾಲನಗರದಲ್ಲೂ ಅಲ್ಪ ಸಂಖ್ಯಾತ ಸಮುದಾಯ ಮಕ್ಕಳಿಗೆ ಮಹಿಳಾ ಕಾಲೇಜು ಆರಂಭಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು
ನ್ಯಾಯಾಧೀಶೆ ಸಯಿದಾ ಕಶ್ಮೀರ ಸಿಮ್ರಾನ್ ಅವರು ಮಾತನಾಡಿ, ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ಬದುಕು ಕಟ್ಟಿಕೊಳ್ಳಲು ಶಿಕ್ಷಣದಿಂದ ಮಾತ್ರವೇ ಸಾಧ್ಯ. ಅದರಲ್ಲೂ ಹೆಣ್ಣಿಗೆ ಶಿಕ್ಷಣವೇ ಅತೀ ಮುಖ್ಯ ಎಂದು ಪ್ರತಿಪಾಧಿಸಿದರು. ಈ ಕುರಿತು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕೂಡ ಮನವರಿಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಕ್ಕಳನ್ನು ಗಮನಿಸಿ:
ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಮಾತನಾಡಿ, ಇಂದು ಪೋಷಕರು ತಮ್ಮ ಮಕ್ಕಳನ್ನು ದೂರದ ಊರುಗಳ ಪ್ರಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಸೇರ್ಪಡೆ ಮಾಡುತ್ತಿದ್ದಾರೆ. ಇದು ಸಂತೋಷದ ವಿಚಾರವೇ ಆದರೂ ತಮ್ಮ ಮಕ್ಕಳ ದಿನಚರಿಯನ್ನು ಗಮನಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದ ಪೋಷಕರ ನಿರೀಕ್ಷೆಗಳು ಹುಸಿಯಾಗುತ್ತಿವೆ ಎಂದು ಉದಾಹರಣೆಗಳ ಸಹಿತ ವಿವರಿಸಿದರು. ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಯಲ್ಲಿಯೇ ಅವರ ಚಟುವಟಿಕೆಗಳ ಮೇಲೂ ಪೋಷಕರು ಕಣ್ಣಿಡಬೇಕು ಎಂದು ಸಲಹೆ ನೀಡಿದರು.
ಸಾಧಕರಿಗೆ ಸನ್ಮಾನ:
ಇದೇ ಸಂದರ್ಭ ಉಮ್ಮತ್ ಒನ್ ಸಂಸ್ಥೆ ಮೂಲಕ ನ್ಯಾಯಾಧೀಶೆ ಸಯಿದಾ ಕಶ್ಮೀರ ಸಿಮ್ರಾನ್, ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಮೈಸೂರಿನ ಉದ್ಯಮಿ ಸಿದ್ದಿಕ್ ಹಂಸ, ಸಿವಿಲ್ ಇಂಜಿನಿಯರ್ ಅಲ್ಫೀಯ,ಹುಣಸೂರಿನ ಪಿಎಸ್ಐ ತಾಜುದ್ದೀನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶೈಕ್ಷಣಿಕ ಸಾಧನೆಗೆ ಸನ್ಮಾನ:
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದು ಸಾಧನೆ ತೋರಿದ ಜಿಲ್ಲೆಯ 5 ಮಂದಿ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹ ಧನ ವಿತರಿಸಿದರು. ಇದೇ ವೇಳೆ ಜಿಲ್ಲೆಯ 200 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವಿಗೆ ಪ್ರೋತ್ಸಾಗ ಧನ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.100 ಫಲಿತಾಂಶ ಪಡೆಯುವ ಮೂಲಕ ಸಾಧನೆ ಮಾಡಿದ ಜಿಲ್ಲೆಯ ಒಟ್ಟು 47 ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಪ್ರಾಂಶುಪಾಲರನ್ನು ಸನ್ಮಾನಿಸಿ, ನೆನಪಿನ ಕಾಣಿಗೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭ ಪುಣೆಯ ಅನೀಸ್ ಡಿಫೆನ್ಸ್ ಕೆರಿಯರ್ ಇನ್ಸಿಟ್ಯೂಟ್ ಸಂಸ್ಥಾಪಕ ಅನೀಸ್ ಕುಟ್ಟಿ ಹಾಗೂ ವೃತ್ತಿ ಮಾರ್ಗದರ್ಶಕರು ಮತ್ತು ಪ್ರೇರಕ ಭಾಷಣಕಾರ ರಫೀಕ್ ಮಾಸ್ಟರ್ ಅವರುಗಳು ಶೈಕ್ಷಣಿಕ ವಲಯದಲ್ಲಿರುವ ಅವಕಾಶ, ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆಯಾಗುವ ಬಗೆ, ವೃತ್ತಿ ಶಿಕ್ಷಣ, ಸರಕಾರದ ಸೌಲಭ್ಯಗಳು, ಉದ್ಯೋಗಾವಕಾಶ ಮತ್ತಿತ್ತರ ವಿಚಾರಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ ನೀಡಿದರು.
ಉಮ್ಮತ್ ಒನ್ ಸಂಸ್ಥೆಯ ಪ್ರಮುಖರಾದ ಎಂ.ಎಂ. ಹಾರೂನ್, ಸಿಇಓ ತನ್ವೀರ್, ಅಬ್ದುಲ್ ಮಜೀದ್, ಅಬ್ದುಲ್ ಲತೀಫ್, ನಿಸಾರ್ ಅಹಮದ್, ಮತ್ತಿತರರು ಉಪಸ್ಥಿತರಿದ್ದರು.
