ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ

ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ

ಕುಶಾಲನಗರ, ಅ 14: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.

ಬಸವನಹಳ್ಳಿಯಲ್ಲಿ ಲ್ಯಾಂಪ್ಸ್ ಸೊಸೈಟಿಯಲ್ಲಿ ರೂ 25 ಲಕ್ಷ ವೆಚ್ಚದಲ್ಲಿ ಮಳಿಗೆಗಳ ನಿರ್ಮಾಣ ಕಾಮಗಾರಿ, ದಿಡ್ಡಳ್ಳಿ ಪುನರ್ವಸತಿ ಶಿಬಿರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ರೂ 8 ಲಕ್ಷ ವೆಚ್ಚದಲ್ಲಿ 160 ಮೀ ಕಾಂಕ್ರಿಟ್ ರಸ್ತೆ ನಿರ್ಮಾಣ, ಬೊಳ್ಳೂರಿನಲ್ಲಿ ಮುಖ್ಯಮಂತ್ರಿ ಗ್ರಾಮಸಡಕ್ ಯೋಜನೆಯಡಿ ರೂ 5 ಲಕ್ಷ ವೆಚ್ಚದಲ್ಲಿ ಶ್ರೀ ಬಸವೇಶ್ಚರ ಚೌಡಮ್ಮ ದೇವಾಲಯ ರಸ್ತೆ 80 ಮೀ ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ ಬಸವನಹಳ್ಳಿ ಪ್ರೌಢಶಾಲೆಯಲ್ಲಿ ರೂ 34 ಲಕ್ಷ ವೆಚ್ಚದಲ್ಲಿ ಎರಡು ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಅವರು‌ ಭೂಮಿಪೂಜೆ ನೆರವೇರಿಸಿದರು.

 ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯ ಅಭಿವೃದ್ಧಿಯೊಂದಿಗೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಗೂ ಒತ್ತು ನೀಡುವ ನಿಟ್ಟಿನಲ್ಲಿ ಅಗತ್ಯ ಅನುದಾನ ಒದಗಿಸಲಾಗುತ್ತಿದೆ. ಗ್ರಾಪಂ ಆದಾಯ ಕ್ರೋಡೀಕರಣದೊಂದಿಗೆ ಗ್ರಾಮದಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕಿದೆ. ಬಸವೇಶ್ವರ ಚೌಡಮ್ಮ ದೇವಾಲಯ ಅಭಿವೃದ್ಧಿಗೆ ಕಾಮಗಾರಿಗೆ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದ ಅವರು, ಲ್ಯಾಂಪ್ಸ್ ಮೂಲಕ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯಿಂದ ಸಂಘದ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು. ಅರಣ್ಯ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥಿತ ಸೌಲಭ್ಯವನ್ನು ಸಂಘ ಒದಗಿಸಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ನಾಳೆ ಕೊಡಗಿನಲ್ಲಿ ನಡೆಯಲಿರುವ ಸ್ವಚ್ಚ ಕೊಡಗು ಸುಂದರ ಕೊಡಗು ಅಭಿಯಾನದಲ್ಲಿ ಜಿಲ್ಲೆಯ ವಿವಿಧ ಸಂಘಸಂಸ್ಥೆಗಳು, ಅಧಿಕಾರಿಗಳು, ಸಾರ್ವಜನಿಕರು ಪಕ್ಷಾತೀತವಾಗಿ ಭಾಗಿಯಾಗಿ ಸ್ವಚ್ಚತೆಯ ಅರಿವು ಮೂಡಿಸುವಂತೆ ಶಾಸಕ ಡಾ.ಮಂತರ್ ಗೌಡ ಅವರು ಕರೆ ನೀಡಿದರು. ಸ್ವಚ್ಛತೆ ಒಂದು ದಿನದ ಕಾರ್ಯಕ್ರಮವಾಗದೆ ದಿನನಿತ್ಯ ನಮ್ಮ ಪರಿಸರ ಸಂರಕ್ಷಣೆ, ಸ್ವಚ್ಚತೆ ಕಾಪಾಡುವಲ್ಲಿ ಸಾರ್ವಜನಿಕರು ತಮ್ಮ ಜವಾಬ್ದಾರಿ ತೋರಬೇಕಿದೆ ಎಂದರು.

ಈ ಸಂದರ್ಭ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಲ್ಯಾಂಪ್ಸ್ ಅಧ್ಯಕ್ಷ ಅರುಣ್ ರಾವ್, ಉಪಾಧ್ಯಕ್ಷೆ ಕಾವೇರಿ, ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಪ್ರವೀಣ್, ಪಿಡಿಒ ಸುಮೇಶ್ ಸೇರಿದಂತೆ ಸದಸ್ಯರುಗಳು, ಆರ್.ಎಫ್.ಒ.ರಕ್ಷಿತ್, ಸಹಕಾರ ಯೂನಿಯನ್ ನಿರ್ದೇಶಕ ಸುನಿಲ್ ರಾವ್, ದೇವಾಲಯ ಸಮಿತಿ ಪ್ರಮುಖರು, ಪಕ್ಷದ ಮುಖಂಡರು, ಗ್ರಾಮಸ್ಥರು ಇದ್ದರು.