ಬೇರೊಬ್ಬನನ್ನು ಮದುವೆಯಾಗಿದ್ದಕ್ಕೆ ಮಾಜಿ ಪ್ರೇಮಿಯನ್ನು ಕೊಂದ ಯುವಕ ಬಂಧನ

Nov 27, 2025 - 10:48
Nov 27, 2025 - 10:49
 0  736
ಬೇರೊಬ್ಬನನ್ನು ಮದುವೆಯಾಗಿದ್ದಕ್ಕೆ ಮಾಜಿ ಪ್ರೇಮಿಯನ್ನು ಕೊಂದ ಯುವಕ ಬಂಧನ

ಗೋರಖ್‌ಪುರ: ಬೇರೊಬ್ಬರೊಂದಿಗೆ ಮದುವೆಯಾಗಿದ್ದಕ್ಕೆ ಕೋಪಗೊಂಡ ಯುವಕ ತನ್ನ ಮಾಜಿ ಪ್ರೇಯಸಿಯನ್ನು ಹತ್ಯೆ ಮಾಡಿದ ಘಟನೆ ಗೋರಖ್‌ಪುರದಲ್ಲಿ ಬೆಳಕಿಗೆ ಬಂದಿದೆ. ಆರೋಪಿ ವಿನಯ್ ನಿಶಾದ್ ಅಲಿಯಾಸ್ ದೀಪಕ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಜಂಗಲ್ ರಸೂಲ್‌ಪುರ ಗ್ರಾಮದಲ್ಲಿ ನವೆಂಬರ್ 23ರಂದು ನಡೆದಿದೆ. ಮೇ ತಿಂಗಳಲ್ಲಿ ಮದುವೆಯಾದ 20 ವರ್ಷದ ಶಿವಾನಿ, ತನ್ನ ಸೋದರಸಂಬಂಧಿಯ ಮದುವೆಗೆ ತವರು ಮನೆಗೆ ಬಂದಿದ್ದರು. ಇದೇ ವೇಳೆ ಆಕೆಯನ್ನು ಭೇಟಿ ಮಾಡಿದ ಮಾಜಿ ಪ್ರೇಮಿ ವಿನಯ್, ಮಾತುಕತೆ ವೇಳೆ ಜಗಳವಾಡಿದ್ದಾನೆ. ಬಳಿಕ ಸುತ್ತಿಗೆಯಿಂದ ದಾಳಿ ಮಾಡಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಾನಿಯ ಶವ ಬಾತ್‌ರೂಂನಲ್ಲಿ ಪತ್ತೆಯಾಗಿದ್ದು, ಕುತ್ತಿಗೆಯಲ್ಲಿ ಆಳವಾದ ಗಾಯದ ಗುರುತುಗಳು ಕಂಡುಬಂದಿವೆ ಎಂದು ಎಸ್‌ಪಿ ಉತ್ತರ ಜ್ಞಾನೇಂದ್ರ ಪ್ರಸಾದ್ ಮಾಹಿತಿ ನೀಡಿದರು.

ತನಿಖೆಯಲ್ಲಿ ಮದುವೆಯ ವಿಡಿಯೋ ಪ್ರಮುಖ ಸುಳಿವು ಒದಗಿಸಿತು. ವಿಡಿಯೋದಲ್ಲಿ ವಿನಯ್ ವಧುವಿನ ಹತ್ತಿರ ನಿಂತಿರುವುದು ಕಂಡುಬಂದಿದ್ದು, ಬಳಿಕ ಕೆಲ ಹೊತ್ತಿಗೇ ಇಬ್ಬರೂ ಯಾರ ಕಣ್ಣಿಗೆ ಬೀಳದೇ ಹೋದರು. ಇದರಿಂದ ಪೊಲೀಸರಿಗೆ ಅನುಮಾನ ಬಲವಾಯಿತು.

ವಧುವಿನ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿದ್ದ ಆರೋಪಿ ಮನೆಯನ್ನು ಶ್ವಾನ ದಳ ತಲುಪಿ ಸುಳಿವು ತೋರಿದ ನಂತರ, ಪೊಲೀಸರು ವಿನಯ್‌ನನ್ನು ವಶಕ್ಕೆ ಪಡೆದರು. ಫೋನ್‌ ಕಾಲ್ ದಾಖಲೆಗಳಲ್ಲೂ ಹತ್ಯೆಯ ರಾತ್ರಿ ಇಬ್ಬರೂ ಮಾತುಕತೆ ನಡೆಸಿರುವುದು ಬಹಿರಂಗವಾಯಿತು.

ವಿಚಾರಣೆಯಲ್ಲಿ ವಿನಯ್ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಬೆಳಗಿನ 2 ಗಂಟೆಯವರೆಗೆ ಮಾತನಾಡಿ ಬಳಿಕ ಕೋಪದಲ್ಲಿ ಕತ್ತು ಸೀಳಿರುವುದಾಗಿ ಹೇಳಿದ್ದಾನೆ. ಕೊಲೆಗೆ ಬಳಸಿದ ಸುತ್ತಿಗೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0