Kodagu

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಬೃಹತ್ ಜನಾಕ್ರೋಶ ಪ್ರತಿಭಟನಾ ಸಭೆ

admincoorgdaily

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಬೃಹತ್ ಜನಾಕ್ರೋಶ ಪ್ರತಿಭಟನಾ ಸಭೆ

ಮಡಿಕೇರಿ: ಕಾಡಾನೆ-ಮಾನವ ಸಂಘರ್ಷ ನಿಯಂತ್ರಿಸಲು ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಸೋಮವಾರ ಮಡಿಕೇರಿಯಲ್ಲಿ ಬೃಹತ್ ಜನಾಕ್ರೋಶ ಪ್ರತಿಭಟನಾ ಸಭೆ ನಡೆಯಿತು. ಭಾಗಮಂಡಲ, ಸೋಮವಾರಪೇಟೆ, ಕುಟ್ಟ ಸೇರಿ ಜಿಲ್ಲೆಯ ವಿವಿಧೆಡೆಯಿಂದ ೫೦೦ಕ್ಕೂ ಅಧಿಕ ರೈತರು, ಕಾರ್ಯಕರ್ತರು ವಾಹನ ಜಾಥಾದಲ್ಲಿ ಭಾಗವಹಿಸಿ ಗಾಂಧಿ ಮೈದಾನದಲ್ಲಿ ಸೇರಿದರು. ಸಂಸದ ಯದುವೀರ್ ಒಡೆಯರ್, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್‌ಸಿ ಸುಜಾಕುಶಾಲಪ್ಪ ನೇತೃತ್ವ ವಹಿಸಿದ್ದರು.

ಸಂಸದ ಯದುವೀರ್ ಒಡೆಯರ್ ಮಾತನಾಡಿ, ಕೇಂದ್ರ ಸರ್ಕಾರ ವನ್ಯಜೀವಿ ಉಪಟಳಕ್ಕೆ ೩೫೦ ಕೋಟಿ ಅನುದಾನ ನೀಡಿದೆ. ಆದರೆ ಅದನ್ನು ಬಳಸುವ ಇಚ್ಛೆ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಆರೋಪಿಸಿದ ಅವರು, ಮದೆನಾಡು, ತಿತಿಮತಿಯಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅರಣ್ಯ ಸಚಿವರೇ ಇಲ್ಲ ಎಂದು ಟೀಕಿಸಿದರು.

 ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ೧೨೦ ಕೋಟಿ ಅನುದಾನ ಘೋಷಿಸಿದರೂ ಆನೆ ಕಂದಕ, ಬ್ಯಾರಿಕೇಡ್ ಕೆಲಸ ಆಗಿಲ್ಲ ಎಂದರು. ಮಾಜಿ ಶಾಸಕ ಅಪ್ಪಚ್ಚು ರಂಜನ್, ಸಿ ಮತ್ತು ಡಿ ಲ್ಯಾಂಡ್ ಆದೇಶದಿಂದ ೫೦೦೦ ಕುಟುಂಬಗಳು ಸಂಕಷ್ಟದಲ್ಲಿವೆ ಎಂದು ಹೇಳಿದರು. ಪ್ರತಿಭಟನಾ ಸಭೆಯಲ್ಲಿ ಎಂಎಲ್‌ಸಿ ಸುಜಾಕುಶಾಲಪ್ಪ, ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾಂಪಡ ರವಿಕಾಳಪ್ಪ, ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ವಿ.ಕೆ.ಲೋಕೇಶ್, ಮಹೇಶ್ ಜೈನಿ, ಚಲನ್ ಕುಮಾರ್, ವಕ್ತಾರ ಅರುಣ್ ಕುಮಾರ್ ಇತರರಿದ್ದರು. ೫೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಮತ್ತು ಕೃಷಿಕರು, ರೈತರು ಪಾಲ್ಗೊಂಡಿದ್ದರು.