ಕಾಡಾನೆ-ಮಾನವ ಸಂಘರ್ಷ, ಬೆಳೆನಾಶ, ಪರಿಹಾರ ವಿತರಣೆ ಕುರಿತಂತೆ ಆ.5ರಂದು ತಿತಿಮತಿಯಲ್ಲಿ ರೈತ ಸಂಘ ಹಾಗೂ ಅರಣ್ಯ ಇಲಾಖಾಧಿಕಾರಿಗಳ ಸಭೆ

ಕಾಡಾನೆ-ಮಾನವ ಸಂಘರ್ಷ, ಬೆಳೆನಾಶ, ಪರಿಹಾರ ವಿತರಣೆ ಕುರಿತಂತೆ ಆ.5ರಂದು ತಿತಿಮತಿಯಲ್ಲಿ ರೈತ ಸಂಘ ಹಾಗೂ ಅರಣ್ಯ ಇಲಾಖಾಧಿಕಾರಿಗಳ ಸಭೆ

ವರದಿ-ಚೆಪ್ಪುಡಿರ ರೋಷನ್, ಪೊನ್ನಂಪೇಟೆ

 ಗೋಣಿಕೊಪ್ಪಲು:ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಬೇಡಿಕೆಯ ಮೇರೆಗೆ ತಿತಿಮತಿ ಅರಣ್ಯ ವಸತಿ ಗೃಹದಲ್ಲಿ ಅರಣ್ಯ ಇಲಾಖಾಧಿಕಾರಿಗಳು ರೈತರ ಸಭೆ ಆಗಸ್ಟ್ 5ರಂದು ಆಯೋಜಿಸಲಾಗಿದ್ದು, ಜಿಲ್ಲೆಯ ಐದು ತಾಲೂಕುಗಳ ರೈತರು, ಬೆಳೆಗಾರರು, ಕಾರ್ಮಿಕರು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಸ್ಯೆಗಳಿಗೆ ಪರಿಹಾರ ಕಾಣುವಂತಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮನವಿ ಮಾಡಿದ್ದಾರೆ.

ವನ್ಯಜೀವಿ ಮಾನವ ಸಂಘರ್ಷ ಇತ್ತೀಚೆಗೆ ಮಿತಿ ಮೀರಿದ್ದು, ಈ ಬಗ್ಗೆ ಉಗ್ರ ಹೋರಾಟ ರೂಪಿಸುವ ಕುರಿತು ಚರ್ಚೆ ಹಾಗೂ ನಿರಂತರ ಮಳೆಯಿಂದಾಗಿ ರೈತರು ಕಾಫಿ, ಅಡಿಕೆ, ಮೆಣಸು ಹಾಗೂ ಇನ್ನಿತರ ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದು, ಬೆಳೆನಷ್ಟ ಪರಿಹಾರ ಈ ಸಾಲಿನಲ್ಲಿ ಕೊಡಲೇಬೇಕೆಂಬ ಹೋರಾಟಗಳನ್ನು ರೂಪಿಸುವ ಕುರಿತಂತೆ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಗೋಣಿಕೊಪ್ಪದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಡ್ಯಮಾಡ ಮನು ಸೋಮಯ್ಯ ಅವರು,

ರೈತ ಸಂಘದ ಕೋರಿಕೆ ಮೇರೆಗೆ ಆಗಸ್ಟ್ 5ರಂದು ಬೆಳಗ್ಗೆ 11 ಗಂಟೆಗೆ ತಿತಿಮತಿಯಲ್ಲಿ ಸಭೆ ಆಯೋಜಿಸಲಾಗಿದೆ. ಅರಣ್ಯ ಇಲಾಖೆಯಿಂದ ಆಗುತ್ತಿರುವ ತೊಂದರೆ, ವನ್ಯ ಜೀವಿ ಹಾಗೂ ಮಾನವ ಸಂಘರ್ಷದ ಕುರಿತು ಸಭೆ ನಡೆಯಲಿದೆ. ಈ ಸಭೆ ಗಂಭೀರವಾಗಿ ನಡೆಯಲು ಪೂರ್ವಭಾವಿ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಸಭೆಗೆ ಕೊಡಗಿನ ಐದು ತಾಲೂಕಿನ ಎಲ್ಲಾ ರೈತ ಬಾಂಧವರು ಭಾಗವಹಿಸಬೇಕೆಂದು ಮನು ಸೋಮಯ್ಯ ಕರೆ ನೀಡಿದರು. ವನ್ಯ ಪಾಣಿಗಳಿಂದ ಆದಂತಹ ನಷ್ಟಕ್ಕೆ ಕೆಲವರಿಗೆ ಪರಿಹಾರ ನೀಡಿದ್ದಾರೆ ಹಾಗೂ ಪರಿಹಾರ ದೊರಕದವರಿಗೆ ಸಭೆಯಲ್ಲಿ ಚರ್ಚಿಸಿ, ಪರಿಹಾರ ದೊರಕಿಸಿಕೊಡಲಾಗುವುದು. ಪ್ರತಿಯೊಂದು ಸಮಸ್ಯೆಯ ಕುರಿತು ಚರ್ಚಿಸಿ ಸ್ಥಳದಲ್ಲಿ ಅರಣ್ಯ ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಿ ಉತ್ತರ ಪಡೆಯುವ ಕೆಲಸ ಮಾಡಲಾಗುವುದು. ಸಭೆಗೆ ಹಾಜರಾಗುವಂತೆ ಅರಣ್ಯ ಇಲಾಖೆ ಪಿಸಿಸಿಎಫ್, ವೈಲ್ಡ್ ಲೈಫ್ ಪಿಸಿಸಿಎಫ್ ಹಾಗೂ ಜಿಲ್ಲೆಗೆ ಹೊಸದಾಗಿ ಬಂದಿರುವ ಸಿಸಿಎಫ್, ಡಿಎಫ್‌ಓ ಅವರುಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತುಕತೆ ನಡೆಸಲಾಗಿದೆ ಎಂದರು. ಸಭೆಯಲ್ಲಿ ಯಾವುದೇ ಘರ್ಷಣೆಯಾಗದಂತೆ ಗಂಭೀರ ಚರ್ಚೆಗೆ ಒತ್ತು ನೀಡಬೇಕು. ರೈತರು ಜವಾಬ್ದಾರಿಯಿಂದ ಸಭೆಯಲ್ಲಿ ಭಾಗವಹಿಸಿ ಪ್ರತಿಯೊಂದು ಮಾಹಿತಿಯನ್ನು ಅರಣ್ಯ ಅಧಿಕಾರಿಗಳಿಗೆ ನೀಡಬೇಕು. ಕಾರ್ಮಿಕರು ರೈತರ ಜಮೀನಿನಲ್ಲಿ ಕೆಲಸ ನಿರ್ವಹಿಸುವುದರಿಂದ ಸಭೆಗೆ ಕಾರ್ಮಿಕ ಮುಖಂಡರು ಭಾಗವಹಿಸಬೇಕು. ಸಂಘ ಸಂಸ್ಥೆಯ ಮುಖಂಡರು ಭಾಗವಹಿಸಿ ಸಮಸ್ಯೆಗಳ ಕುರಿತು ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಜಿಲ್ಲಾ ಪ್ರಧಾನ ಸಂಚಾಲಕ ಪುಚ್ಚಿಮಾಡ ಸುಭಾಸ್ ಸುಬ್ಬಯ್ಯ, ಸಹ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಜಿಲ್ಲಾ ಖಜಾಂಚಿ ಇಟ್ಟೀರ ಸಭಿತ ಭೀಮಯ್ಯ, ವಿರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿ ಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಲೆಮಾಡ ಮಂಜು ಸಂಪತ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಚೋಟ್ಟೆಕಾಳಪಂಡ ಮನು, ಬಾಳಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶಾ ಮಾಚಯ್ಯ, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ಹುದಿಕೇರಿ ಹೋಬಳಿ ಅಧ್ಯಕ್ಷ ಬಲ್ಯಮಿದೇರೀರ ಪ್ರಕಾಶ್, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಸಿದ್ದಾಪುರ ಸಂಚಾಲಕ ಬೋಪಣ್ಣ ಹಾಗೂ ರೈತ ಸಂಘದ ಮುಖಂಡರು, ಸದಸ್ಯರು ಭಾಗಿಯಾಗಿದ್ದರು.