ಮೋದಿ ಸುಳ್ಳು ಭರವಸೆ, ಟ್ರಂಪ್ ವಿಶ್ವ ಹಾಳು': ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಯಿದ್ ತೆಕ್ಕಿಲ್ ವಾಗ್ದಾಳಿ
ವಿರಾಜಪೇಟೆ, ಜೂನ್ 29: "ಪ್ರಧಾನಿ ನರೇಂದ್ರ ಮೋದಿ ಜನರಿಗೆ ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ. ದೇಶವನ್ನು ಮೋದಿ ಹಾಳುಮಾಡಿದರೆ, ವಿಶ್ವವನ್ನು ಟ್ರಂಪ್ ಹಾಳು ಮಾಡಿದ್ದಾರೆ" ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ -ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಸಮಿತಿ ಅಧ್ಯಕ್ಷ ಶಾಯಿದ್ ತೆಕ್ಕಿಲ್ ವಾಗ್ದಾಳಿ ನಡೆಸಿದರು.
ಶನಿವಾರ ವಿರಾಜಪೇಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾರಿಗೂ ಉದ್ಯೋಗ ನೀಡದೆ ವಂಚಿಸಿದರು. ನಿರಂತರ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಜೀವನ ಸಾಗಿಸಲು ಕಷ್ಟವಾಗುತ್ತಿದೆ" ಎಂದು ಆರೋಪಿಸಿದರು.
"ವಿರೋಧ ಪಕ್ಷದ ಅಭ್ಯರ್ಥಿಗಳನ್ನು ಬಿಜೆಪಿ ಖರೀದಿ ಮಾಡುತ್ತದೆ. ಒಪ್ಪದಿದ್ದರೆ ಇಡಿ ದಾಳಿ ಮಾಡಿಸುತ್ತಾರೆ. ಒಪ್ಪಿದವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುತ್ತಾರೆ. ಒಪ್ಪದ ನಾಯಕರ ಮೇಲೆ ಮೊಕದ್ದಮೆ ಹೂಡಿ ಜೈಲಿಗೆ ಹಾಕಿಸುತ್ತಾರೆ" ಎಂದು ಅವರು ದೂರಿದರು.
ಎರಡನೇ ಸಂಪುಟ ವಿಸ್ತರಣೆಯಲ್ಲಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಅವರು ಮತ್ತು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕೊಡಗಿಗೆ ಅನುದಾನ ತಂದು ಸಾರ್ವಜನಿಕ ಸಮಸ್ಯೆ ಬಗೆಹರಿಸುತ್ತಿದ್ದಾರೆ" ಎಂದರು.
"ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 3 ವರ್ಷ ಪೂರೈಸಿದೆ. ಜನತೆಗೆ ಕೊಟ್ಟ ಭರವಸೆ ಯಶಸ್ವಿಯಾಗಿ ನಿರ್ವಹಿಸಿದೆ. ಮುಂದಿನ 3 ವರ್ಷದಲ್ಲಿ ಮತ್ತೆ ಕಾಂಗ್ರೆಸ್ ದೇಶದ ಚುಕ್ಕಾಣಿ ಹಿಡಿಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. "ಯಾವುದೇ ಗೊಡ್ಡು ಬೆದರಿಕೆಗೆ ಹೆದರದೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯ ಕೂಡ ಉತ್ತಮ ರೀತಿಯಲ್ಲಿ ಅಧಿಕಾರ ವಹಿಸಿಕೊಟ್ಟಿದ್ದಾರೆ" ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಪ್ರಚಾರ ಸಮಿತಿ ಅಧ್ಯಕ್ಷ ಹಾಜಿ ಎಸ್.ಎಚ್. ಮತೀನ್, ವಿರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಬೀರ್, ಮಾಜಿ ಪ.ಪಂ ಸದಸ್ಯ ಮಹಮ್ಮದ್ ರಾಫಿ, ಕಾರ್ಯಕರ್ತರಾದ ಮಂಜುನಾಥ್, ನಯಾಜ್, ಅಫ್ತಾಬ್ ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
