ಮೈಸೂರಿನ ಸೇವಾ ಭಾರತಿ ಟ್ರಸ್ಟ್‌ನಿಂದ ಸೀಗೆಹೊಸೂರು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ: ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರೋತ್ಸಾಹ:ಡಾ ಅಚ್ಯುತರಾವ್

ಮೈಸೂರಿನ ಸೇವಾ ಭಾರತಿ ಟ್ರಸ್ಟ್‌ನಿಂದ ಸೀಗೆಹೊಸೂರು ಸರ್ಕಾರಿ ಶಾಲಾ ಮಕ್ಕಳಿಗೆ  ಉಚಿತ ನೋಟ್ ಪುಸ್ತಕ ವಿತರಣೆ:  ಸರ್ಕಾರಿ ಶಾಲೆಯ ಮಕ್ಕಳಿಗೆ  ಪ್ರೋತ್ಸಾಹ:ಡಾ ಅಚ್ಯುತರಾವ್

ಕುಶಾಲನಗರ: ಮೈಸೂರಿನ ಸೇವಾ ಭಾರತಿ ಟ್ರಸ್ಟ್‌ ವತಿಯಿಂದ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಸೀಗೆಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲಾಭಿವೃದ್ಧಿ ಸಮಿತಿಯ ಸಹಕಾರದೊಂದಿಗೆ ಉಚಿತವಾಗಿ ಬರೆಯುವ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ಮಕ್ಕಳಿಗೆ ಪುಸ್ತಕ ವಿತರಿಸಿ ಮಾತನಾಡಿದ ಸೇವಾ ಭಾರತಿ ಟ್ರಸ್ಟ್‌ ನ ಸಂಯೋಜಕ ಡಾ‌ ಅಚ್ಯುತರಾವ್, ತಮ್ಮ ಸಂಸ್ಥೆಯ ವತಿಯಿಂದ ಕಳೆದ ಹಲವಾರು ವರ್ಷಗಳಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಸಾಧನೆಯ ಸಲಕರಣೆಗಳನ್ನು ನೀಡುತ್ತಾ ಅವರ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮಕ್ಕಳಿಗೆ ನೋಟ್ ಪುಸ್ತಕಗಳು ಸೇರಿದಂತೆ ಲೇಖನ ಸಾಮಾಗ್ರಿಗಳು ಹಾಗೂ ಮಕ್ಕಳ ಕಲಿಕೆಗೆ ಬೇಕಾದ ಪೂರಕ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಿಕೊಂಡು ಬರಲಾಗುತ್ತಿದೆ ಎಂದರು. ವಿದ್ಯಾರ್ಥಿಗಳು ತಮ್ಮ ಶಾಲೆಯಲ್ಲಿ ಗುರುಗಳು ಕಲಿಸುವ ಪಾಠ- ಪ್ರವಚನಗಳನ್ನು ಉತ್ತಮವಾಗಿ ಅಧ್ಯಯನ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

 ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ‌ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಸೇವಾ ಭಾರತಿ ಟ್ರಸ್ಟ್ ನವರು ಸರ್ಕಾರಿ ಶಾಲಾ ಮಕ್ಕಳಿಗೆ ನೆರವು ನೀಡುತ್ತಿರುವುದು ಶ್ಲಾಘನೀಯವಾದುದು ಎಂದರು. ಶಾಲಾ ಮುಖ್ಯ ಶಿಕ್ಷಕಿ ಕೆ.ಡಿ. ತಾರಾಮಣಿ ಮಾತನಾಡಿ, ಸೇವಾ ಭಾರತಿ ಟ್ರಸ್ಟ್ ನವರು ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳ ಬಗ್ಗೆ ಹೊಂದಿರುವ ಕಾಳಜಿಯು ಮೆಚ್ಚುಗೆಯಾಗಿದೆ ಎಂದರು.

ಟ್ರಸ್ಟ್ ನ ಪ್ರಮುಖರಾದ ಕೃಷ್ಣಕುಮಾರ್ ಗುರೂಜಿ, ವಿದ್ಯಾರ್ಥಿಗಳಿಗೆ ಧ್ಯಾನದ ಮಹತ್ವ ಕುರಿತು ತಿಳಿಸಿದರು. ಟ್ರಸ್ಟ್ ನ ಸದಸ್ಯರಾದ ವೆಂಕಟೇಶ್ ಬಾಬು, ರಾಧಾ ವೆಂಕಟೇಶ್, ಶಾಲಾ ಶಿಕ್ಷಕರಾದ ಟಿ.ಎಸ್.ವಿನೋದ, ಎಸ್.ಆರ್ .ಸುನಿತ, ಎಚ್. ವಿ.ಲತಾಮಣಿ, ಎಸ್. ಪಿ. ಶ್ವೇತ ಹಾಗೂ ಮಹಾದೇವ ಕುಮಾರ ಇದ್ದರು. ಸೇವಾ ಭಾರತಿ ಟ್ರಸ್ಟ್ ನ ಜತೆ ಈ ಕಾರ್ಯದಲ್ಲಿ ಮೈಸೂರಿನ ಸ್ವಯಂ ಸೇವಾ ಸಂಸ್ಥೆಗಳಾದ ನಿರಂತರ ಮಿತ್ರ ವೃಂದ, ಭೂಮಿ ಫೌಂಡೇಶನ್, ಭವಿಷ್ಯ ಚಾರಿಟೇಬಲ್ ಟ್ರಸ್ಟ್ ಹಾಗೂ ಪಿರಾಮಿಡ್ ಧ್ಯಾನ ಕೇಂದ್ರ ಕೂಡ ಜತೆಗೂಡಿ ಈ ಕಾರ್ಯದಲ್ಲಿ ತೊಡಗಿವೆ ಎಂದು ಕಾರ್ಯಕ್ರಮದ ಸಂಯೋಜಕ ಡಾ ಅಚ್ಯುತರಾವ್ ತಿಳಿಸಿದರು.