ನಾಗರಹೊಳೆ: ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ ಮತ್ತು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದಿಂದ ಹೋರಾಟ

ನಾಗರಹೊಳೆ: ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ ಮತ್ತು  ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದಿಂದ ಹೋರಾಟ

ಪೊನ್ನಂಪೇಟೆ:ಅಂತರಾಷ್ಟ್ರೀಯ ಆದಿವಾಸಿ ದಿನದ ಅಂಗವಾಗಿ ಆದಿವಾಸಿ ಜನರ ಮತ್ತು ಆದಿವಾಸಿ ಸಾಂಪ್ರದಾಯಿಕ ಗಡಿಗಳನ್ನು ಕದ್ದು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿರುವುದರ ವಿರುದ್ಧ ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ ಮತ್ತು ಕೊಡಗು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿತ್ತು.ಪೊನ್ನಂಪೇಟೆ ತಾಲೂಕಿನ ಕೆ. ಬಾಡಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳೆಕೊವು ಹಾಡಿಯ ಸಮೀಪ ನಾಗರಹೊಳೆ ಮುಖ್ಯದ್ವಾರದ ಮುಖ್ಯ ರಸ್ತೆಯಲ್ಲಿ ನಾಗರಹೊಳೆ ಅದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿಯ ಕಾರ್ಯದರ್ಶಿ ಜೆ. ಎಂ ಶಿವು ಅವರ ಮುಂದಾಳತ್ವದಲ್ಲಿ ಆದಿವಾಸಿಗಳ ಸಾಂಪ್ರದಾಯಕ ಹಾಡಿನೊಂದಿಗೆ "ನಾಗರಹೊಳೆ ಕಾಡು-ಮನೆತನಗಳ ಬುಡಕಟ್ಟು ಜಮ್ಮದ ತಾಣ"ಎಂಬ ನಾಮಫಲಕ ಅಳವಡಿಸುವ ಮೂಲಕ, ಘೋಷಣೆ ಸಹಿತ ಹೋರಾಟ ನಡೆಯಿತು.

 ಹೋರಾಟ ಬೆಂಬಲಿಸಿ ಮಾತನಾಡಿದ ಪ್ರಗತಿಪರ ಚಿಂತಕ ಹಾಗೂ ನಟ ಚೇತನ್ ಅವರು, ಆದಿವಾಸಿ ಮೂಲ ಸಮುದಾಯ ಬಹಳ ಹಿಂದಿನಿಂದಲೇ ಇರುವ ಜನಾಂಗವಾಗಿದೆ. ಆದರೆ ಆಳುವ ಸರ್ಕಾರಗಳು ಆದಿವಾಸಿ ಸಮುದಾಯದ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಆದಿವಾಸಿಗಳಿಗೆ ಅರಣ್ಯದೊಳಗೆ ಹಕ್ಕು ಹಾಗೂ ಒಳ ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

 ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿಯ ಕಾರ್ಯದರ್ಶಿ ಶಿವು ಅವರು ಮಾತನಾಡಿ, ಆದಿವಾಸಿ ಬುಡಕಟ್ಟು ಸಮುದಾಯ ದಿನವನ್ನು ಆಚರಿಸುವ ಮೂಲಕ ನಾಗರಹೊಳೆ ಪ್ರದೇಶ ನಮ್ಮ ಪೂರ್ವಜರ ಜಮ್ಮದ ಭೂಮಿ, ಸಾಂಪ್ರದಾಯಿಕ ಮನೆತನಗಳ ತಾಣ ಎಂಬ ಫಲಕ ಅಳವಡಿಸುವುದರ ಮೂಲಕ ಪ್ರತಿಭಟನೆ ಹಾಗೂ ಆಚರಣೆಯನ್ನು ಹಮ್ಮಿಕೊಂಡಿದ್ದು, ಅರಣ್ಯದಲ್ಲಿ ನಮಗೆ ಯಾವುದೇ ಹಕ್ಕುಗಳನ್ನು ನೀಡದೆ ಇಲ್ಲಿಂದ ಹೊರದಬ್ಬುವ ಪ್ರಯತ್ನ ಮಾಡುವುದನ್ನು ಖಂಡಿಸುತ್ತೇವೆ. ಅರಣ್ಯ ಹಕ್ಕುಗಳ ಕಾಯ್ದೆಯಡಿಯಲ್ಲಿ ನಮ್ಮ ಹಕ್ಕುಗಳನ್ನು ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

 ಆದಿವಾಸಿಗಳು ತಮ್ಮ ಹಕ್ಕುಗಳ ಒತ್ತಾಯಕ್ಕಾಗಿ ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿ. ಅಹವಾಲುಗಳ ಮನವಿ ಪತ್ರವನ್ನು ಸ್ವೀಕರಿಸಿದರು. ಬಳಿಕ ಮಾತನಾಡಿದ ಶಾಸಕರು, ಅಹವಾಲುಗಳನ್ನು ಸರಕಾರದ ಗಮನಕ್ಕೆ ತರಲಾಗುವುದು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬುಡಕಟ್ಟು ಜನಾಂಗದ ಪರ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇವೆ. ಪ್ರಜಾಪ್ರಭುತ್ವ ಸರಕಾರದಲ್ಲಿ ಸಂವಿಧಾನದ ಅಡಿಯಲ್ಲಿ ಹಕ್ಕು ಒತ್ತಾಯ ಮಾಡುತ್ತಿರುವುದು ಸರಿಯಾಗಿದೆ. ಅರಣ್ಯ ದಂಚಿನಲ್ಲಿರುವ ಹಾಗೂ ಅರಣ್ಯದ ಮಧ್ಯದಲ್ಲಿರುವ ಆದಿವಾಸಿ ಬುಡಕಟ್ಟು ಜನಾಂಗದವರಿಗೆ ವಿದ್ಯುತ್ ಶಕ್ತಿಯ ಸೌಲಭ್ಯ ಒದಗಿಸಲಾಗಿದೆ. 2006ನೇ ಇಸವಿಯಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಸರ್ಕಾರದ ಸಿದ್ಧಾಂತ ಬುಡಕಟ್ಟು ಜನಾಂಗ, ಪರಿಶಿಷ್ಟ ಜಾತಿ, ಶೋಷಿತರ ಪರವಾಗಿದೆ. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹಲವಾರು ಸಮಸ್ಯೆಗಳು ಬಗೆಹರಿದಿದೆ ಹಾಗೆಯೇ ಮುಂದೆಯೂ ಉಳಿದ ಸಮಸ್ಯೆಗಳು ಬಗೆಹರಿಕೆಗೆ ಪ್ರಯತ್ನಿಸಲಾಗುವುದೆಂದರು.

ಈ ಸಂದರ್ಭ ಹೊರ ಜಿಲ್ಲೆ ಹಾಗೂ ರಾಜ್ಯ ಮಟ್ಟದ ಹೋರಾಟಗಾರರು, ಜಮ್ಮಾಪಾಳೆ ಹಕ್ಕು ಸ್ಥಾಪನಾ ಸಮಿತಿಯ ಅಧ್ಯಕ್ಷ ಜೆ. ಕೆ ತಿಮ್ಮ, ನಿರ್ದೇಶಕ ಜೆ.ರಾಮಕೃಷ್ಣ, ತಟ್ಟೆಕೆರೆ ಹಾಡಿಯ ಜೆ. ಎಂ ರಾಮು, ಬ್ರಹ್ಮಗಿರಿ ಹಾಡಿಯ ವೈ ಎಂ.ಪ್ರಕಾಶ್, ಬೊಮ್ಮಾಡು ಹಾಡಿಯ ಸೋಮಯ್ಯ, ಕೊಡಂಗೆ ಹಾಡಿಯ ಜೆ ಆರ್ ಮಣಿ, ಬೇಗೂರು ಪಾರೆ ನಾಣಚ್ಚಿ ಗದ್ದೆ ಹಾಡಿಯ ಜೆ. ಕೆ ಕಾಳ, ಬಾಳೆಕೊವು ಹಾಡಿಯ ಬಿ. ಸಿ ಕಾಳ, ಗೋಣಿಗದ್ದೆ ಹಾಡಿಯ ಜೆ. ಕೆ ಸತೀಶ್, ಕರಡಿಕಲ್ಲು ಅತ್ತೂರು ಕೊಲ್ಲಿ ಹಾಡಿಯ ಜೆ. ಎ.ಶಿವು, ತುಂಡುಮುಂಡಿಗೆ ಕೊಲ್ಲಿ ನಾಗರಹೊಳೆ ಗದ್ದೆ ಹಾಡಿಯ ಜೆ. ಬಿ.ಮನು, ಕೊಳಂಗೆರೆ ಹಾಡಿಯ ಜೆ. ಎ.ರಾಜು, ಚಂದನಕೆರೆ ಹಾಡಿಯ ಪಿ. ಬಿ. ರಮೇಶ್, ಕುಂಬಾರಕಟ್ಟೆ ಹಾಡಿಯ ಅಪ್ಪಣ್ಣ ಸೇರಿದಂತೆ ಇತ್ತರ ಹಾಡಿಗಳ ಮುಖಂಡರು, ಸಿ ಏನ್ ಎ ಪಿ ಎ ಸಂಘಟನೆಯ ಸ್ವಯಂಸೇವಕ ರಾಜ ರಾಮ್, ರಾಷ್ಟ್ರೀಯ ಆದಿವಾಸಿ ಒಕ್ಕೂಟದ ರಾಷ್ಟ್ರೀಯ ಸಂಚಾಲಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ರಾಯ್ ಡೇವಿಡ್, ಐ ಟಿ ಡಿ ಪಿ ಜಿಲ್ಲಾ ಅಧಿಕಾರಿ ಹೊನ್ನೇಗೌಡ, ಪೊನ್ನಂಪೇಟೆ ತಾಲೂಕು ಐ ಟಿ ಡಿ ಪಿ ಇಲಾಖಾಧಿಕಾರಿ ತೇಜ್ ರಾಜ್, ನಾಗರಹೊಳೆ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ ಅನನ್ಯ ಕುಮಾರ್, ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್, ಕುಟ್ಟ ವೃತ್ತ ನಿರೀಕ್ಷಕ ಶಿವರುದ್ರ ಹಾಗೂ ವಿರಾಜಪೇಟೆ ವಿಭಾಗದ ಠಾಣಾಧಿಕಾರಿಗಳು, ಸಿಬ್ಬಂದಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.

 ವರದಿ:ಚೆಪ್ಪುಡಿರ ರೋಷನ್ ಪೊನ್ನಂಪೇಟೆ