ನಾಪೋಕ್ಲು:ಅಂಗನವಾಡಿ ಕೇಂದ್ರದಲ್ಲಿ LKG&UKG ತರಗತಿಗಳ ಉದ್ಘಾಟನೆ: ಆಧುನಿಕ ಯುಗದಲ್ಲಿ ಪ್ರತಿಯೊಬ್ಬನಿಗೂ ಇಂಗ್ಲಿಷ್ ಕಲಿಕೆ ಅನಿವಾರ್ಯ: ಶಾಸಕ ಎ.ಎಸ್ ಪೊನ್ನಣ್ಣ
ನಾಪೋಕ್ಲು:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲ್ಲೂಕಿನ ನಾಪೋಕ್ಲುವಿನ ಅಂಗನವಾಡಿ ಕೇಂದ್ರಗಳಲ್ಲಿ ಸರಕಾರ ನೂತನವಾಗಿ ಆರಂಭಿಸಿದ ಎಲ್.ಕೆ.ಜಿ ಹಾಗೂ ಯುಕೆಜಿ ತರಗತಿಗಳ ಉದ್ಘಾಟನೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.
ನಾಪೋಕ್ಲು ಹಳೆ ತಾಲೂಕು ಭಾಗದಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಆಧುನಿಕ ಯುಗದಲ್ಲಿ ಪ್ರತಿಯೊಬ್ಬನಿಗೂ ಇಂಗ್ಲಿಷ್ ಕಲಿಕೆಯು ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿ ವ್ಯವಹರಿಸಲು ಇಂಗ್ಲೀಷ್ ಭಾಷೆಯ ಅರಿವು ಇರುವುದು ಅತ್ಯಂತ ಮುಖ್ಯ. ಇದನ್ನು ಮನಗಂಡ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರವು ಕನ್ನಡದೊಂದಿಗೆ ಇಂಗ್ಲಿಷ್ ಕಲಿಕೆಗೂ ಪ್ರಾಮುಖ್ಯತೆಯನ್ನು ನೀಡಿ ಎಲ್‌ಕೆಜಿಯಿಂದಲೇ ಮಕ್ಕಳಿಗೆ ಇದರ ಸೌಲಭ್ಯ ಕಲ್ಪಿಸಲು ನಿರ್ಧರಿಸಿದೆ. ದುಬಾರಿ ಖಾಸಗಿ ಶಾಲೆಗಳಲ್ಲಿ ದೊರೆಯುವ ವಿದ್ಯಾಭ್ಯಾಸವನ್ನು ಉಚಿತವಾಗಿ ನಮ್ಮ ನಾಡಿನ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬಡ ವಿದ್ಯಾರ್ಥಿಗಳಿಗೆ ತಲುಪಿಸುವಂತೆ ಮಾಡುವುದು ಸರಕಾರದ ಉದ್ದೇಶ. ಇದರ ಸದುಪಯೋಗವನ್ನು ಎಲ್ಲಾ ಪೋಷಕರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಬಳಿಕ ಅಂಗನವಾಡಿ ಮೇಲ್ವಿಚಾರಕರಿಗೆ ಕಿವಿಮಾತು ಹೇಳಿದ ಶಾಸಕರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅಂಗನವಾಡಿಯ ಪ್ರಮುಖ ಪಾತ್ರ ವಹಿಸುತ್ತದೆ, ಇವರುಗಳು ತಮ್ಮ ಜವಾಬ್ದಾರಿಯನ್ನು ಅರಿತು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ವಲಯ ಅಧ್ಯಕ್ಷರಾದ ಕುಶಾಲಪ್ಪ, ನಾಪೋಕ್ಲು ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ, ಹಿರಿಯರಾದ ಕುಲ್ಲೇಟಿರ ಪೊನ್ನವ್ವ, ಅರುಣ್ ಬೇಬ, ಹೇಮಾವತಿ ಅರುಣ್ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯರು, ಬಗರ್ ಹುಕುಂ ಅಧ್ಯಕ್ಷರಾದ ನೇರವಂಡ ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪ್ರಸನ್ನ ಕುಮಾರ್,ಕೆಡಿಪಿ ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ, ಕಕ್ಕಬೆ ಪಂಚಾಯಿತಿ ಮಾಜಿ ಸದಸ್ಯರಾದ ಕಲಿಯಂಡ ಸಂಪನ್ ಅಯ್ಯಪ್ಪ, ಪಕ್ಷದ ಪ್ರಮುಖರು, ಅಂಗನವಾಡಿ ಶಿಕ್ಷಕರು, ಸಿಬ್ಬಂದಿಗಳು,ಮಕ್ಕಳು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.