ನಾಪೋಕ್ಲು: ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಂಭ್ರಮದಿಂದ ಜರುಗಿದ ಕನ್ನಡ ರಾಜ್ಯೋತ್ಸವ ಆಚರಣೆ

ನಾಪೋಕ್ಲು: ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಂಭ್ರಮದಿಂದ ಜರುಗಿದ ಕನ್ನಡ ರಾಜ್ಯೋತ್ಸವ ಆಚರಣೆ

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು :ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ,ಕನ್ನಡ ಸಾಹಿತ್ಯ ಪರಿಷತ್ತು, ನಾಪೋಕ್ಲು ಹೋಬಳಿ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ನಾಪೋಕ್ಲು ಇವರ ಸಂಯುಕ್ತಾಶ್ರಯದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ನಾಪೋಕ್ಲುವಿನ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಂಭ್ರಮದಿಂದ ನಡೆಯಿತು.

 ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಶಾಲಾ ಪ್ರಾಂಶುಪಾಲರಾದ ಕೆ. ಡಿ.ನೀತಾ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿಯ ಮೂಲಕ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳಿರೆನ್ನುವ ಕಿವಿಮಾತನ್ನು ಹೇಳುತ್ತಾ ತಮ್ಮ ಶೈಕ್ಷಣಿಕ ಪ್ರಗತಿಯಲ್ಲಿ ಗುರಿ ತಲುಪಿ ದೇಶ-ವಿದೇಶಗಳಲ್ಲಿ ಹೆಸರುಗಳಿಸಬೇಕೆಂದು ತಿಳಿಸಿದರು.

 ಮಡಿಕೇರಿ ತಾಲೂಕ್ಲು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೆರ ತುಳಸಿ ಮೋಹನ್ ಮಾತನಾಡಿ ವಿದ್ಯಾರ್ಥಿಗಳು ತಮ್ಮೊಳಗೆ ಅಡಗಿರುವ ಕಲೆಯನ್ನು ಹೊರತರಲು ಇಂತಹ ಸಂಭ್ರಮಾಚರಣೆಗಳು ಅವಶ್ಯಕ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಬಾಳೆಯಡ ದಿವ್ಯಾ ಮಂದಪ್ಪ ಅವರು ಮಾತನಾಡುತ್ತಾ ವಿದ್ಯಾರ್ಥಿಗಳ ಶಿಸ್ತು ಶಿಕ್ಷಣ ಮತ್ತು ಗುರಿ ಸಾಧನೆಗೆ ದಾರಿಯಾಗುವುದು ಎಂದು ಹೇಳಿದರು. ನಾಪೋಕ್ಲು ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೆರವಂಡ ಉಮೇಶ್ ಅವರು ರಾಜ್ಯೋತ್ಸವದ ಕುರಿತು ಮಾತನಾಡುತ್ತಾ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹಾರೈಸಿದರು.

ಶಾಲೆಯ ಕನ್ನಡ ಶಿಕ್ಷಕಿ ರೂಪ ಅವರು ಮಾತನಾಡಿ ಕನ್ನಡದ ಹೆಸರು ಜಗಕೆ ಸಾರುವಂತೆ ಮಾಡಿದ ಕನ್ನಡದ ಕವಿಗಳನ್ನು ನೆನಪಿಸಿಕೊಂಡರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಕವನ ರಚನೆ, ಚಿತ್ರಕಲೆ ಹಾಗೂ ಸಮೂಹ ಗಾಯನ ಸ್ಪರ್ಧೆಗಳನ್ನು ನಡೆಸಲಾಯಿತು. ಬಳಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ಗಣ್ಯರು ವಿತರಿಸಿದರು.

ಹಾಗೆಯೇ ವಿದ್ಯಾರ್ಥಿಗಳಿಂದ ಕರ್ನಾಟಕವನ್ನು ಹೊಗಳಿ ಕೊಂಡಾಡುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಬೋಧಕ ಬೋಧಕೇತರ ವೃಂದದವರು ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ನಿಶಾ ಪ್ರಾರ್ಥಿಸಿದರು. ಅಂಜಲಿ ನಿರೂಪಿಸಿದರು.ಕೀರ್ತನ ಸ್ವಾಗತಿಸಿ, ಪ್ರೀತೇಶ್ ವಂದಿಸಿದರು.