ಪದಾಧಿಕಾರಿಗಳು ಸಮಾಜ-ಸಂಘದ ಏಳಿಗೆಗಾಗಿ ಶ್ರಮಿಸಿ:ಜಿಲ್ಲಾ ಮರಾಠ- ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್
ಮಡಿಕೇರಿ: ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಸಮಾಜದ ಮತ್ತು ಸಂಘದ ಏಳಿಗೆಗಾಗಿ ಶ್ರಮಿಸಬೇಕು ಎಂದು ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್ ಹೇಳಿದರು.
ಮಡಿಕೇರಿ ತಾಲೂಕಿನ ತಾಳತ್ತಮನೆಯಲ್ಲಿರುವ ಸಂಘದ ನಿವೇಶನದಲ್ಲಿ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ೨೦೨೬-೨೭ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ವತಿಯಿಂದ ಸಮಾಜಬಾಂಧವರಿಗೆ ಕ್ರೀಡಾಚಟುವಟಿಕೆಯೊಂದಿಗೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ ಎಂದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠ/ಮರಾಟಿ ಸಮುದಾಯ ಬಾಂಧವರಿದ್ದು, ಅವರನ್ನು ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು.
ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಸಂಘಟನೆಯು ಎತ್ತರಕ್ಕೇರುವಂತಾಗಬೇಕು. ಸದಸ್ಯರ ವಿಶ್ವಾಸವನ್ನು ಉಳಿಸಿಕೊಂಡು, ಪಾರದರ್ಶಕತೆ ಮತ್ತು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಬೇಕೆಂದರು.
ನೂತನ ಪದಾಧಿಕಾರಿಗಳು ಒಗ್ಗಟ್ಟಿನಿಂದ, ಬದ್ಧತೆಯಿಂದ ಸಂಘಟನೆಯನ್ನು ಮುನ್ನಡೆಸಬೇಕು. ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಎಲ್ಲರನ್ನೂ ಒಳಗೊಂಡು ಕೆಲಸ ಮಾಡಬೇಕು ಎಂದರು. ಸಂಘದ ವತಿಯಿಂದ ಈಗಾಗಲೇ ೪ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜದ ಸಭಾಭವನ ಕಾಮಗಾರಿ ಪ್ರಗತಿಯಲ್ಲಿದೆ. ಸರ್ಕಾರದಿಂದ ಮತ್ತಷ್ಟು ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಅದೇ ರೀತಿಯಲ್ಲಿ ಸಮಾಜಬಾಂಧವರು ದೇಣಿಗೆ ರೂಪದಲ್ಲಿ ಸಭಾಭವನ ನಿರ್ಮಾನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಅವರು, ಕರ್ನಾಟಕ ಮರಾಟಿ ಒಕ್ಕೂಟದ ಪದಾಧಿಕಾರಿಗಳ ಸಹಕಾರದೊಂದಿಗೆ ಮಂಗಳೂರಿನಲ್ಲಿ ಕಟ್ಟಡ ನಿಧಿ ಸಂಗ್ರಹಿಸುವ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷೆ ದೇವಕ್ಕಿ.ಜಿ.ಆರ್.ನಾಯ್ಕಿ, ಪ್ರಧಾನ ಕಾರ್ಯದರ್ಶಿ ಎ.ಎಂ.ನರಸಿಂಹ, ವಿರಾಜಪೇಟೆ ಸಂಘಟನಾ ಕಾರ್ಯದರ್ಶಿ ಎಂ.ಪಿ.ನವೀನ್, ಮಡಿಕೇರಿ ತಾಲೂಕು ಸಂಘಟನಾ ಕಾರ್ಯದರ್ಶಿ ಎಂ.ಟಿ.ದೇವಪ್ಪ, ಕಟ್ಟಡ ಸಮಿತಿ ಕಾರ್ಯದರ್ಶಿ ಎಂಎಸ್.ಯೋಗೇಂದ್ರ, ಎರಡನೇ ಮಣ್ಣಂಗೇರಿ ಉಪ ಸಮಿತಿ ಅಧ್ಯಕ್ಷ ಎಂ.ಎಸ್.ವೆಂಕಪ್ಪ, ಪ್ರಮುಖರಾದ ದೇವಿಪ್ರಸಾದ್, ದಿನೇಶ್ ಕುಂಡಾಡು, ನಾಗೇಶ್ ಕುಂಡಾಡು ಇತರರಿದ್ದರು.
ಕಾರ್ಯಕ್ರಮದಲ್ಲಿ ವಾರ್ಷಿಕ ಮಹಾಸಭೆಯ ವರದಿಯನ್ನು ಕಾರ್ಯದರ್ಶಿ ಹೂವಮ್ಮನವರು ಮಂಡಿಸಿದರು. ಕಟ್ಟಡ ಸಮಿತಿ ಕಾರ್ಯದರ್ಶಿ ಎಂಎಸ್.ಯೋಗೇಂದ್ರ ಅವರು ಮಹಾಸಭೆಯ ಖರ್ಚು ವೆಚ್ಚವನ್ನು ಮಂಡಿಸಿದರು. ಕಾರ್ಯದರ್ಶಿ ಎ.ಹೂವಮ್ಮ ಅವರು ಸ್ವಾಗತಿಸಿ, ವಂದಿಸಿದರು.
ಜಿಲ್ಲಾಧ್ಯಕ್ಷರಾಗಿ ಎಂ.ಎಂ.ಪರಮೇಶ್ವರ್ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಸತತ ೮ನೇ ಬಾರಿಗೆ ಎಂ.ಎಂ.ಪರಮೇಶ್ವರ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ದೇವಕ್ಕಿ ಜಿ.ಆರ್.ನಾಯ್ಕ ಮತ್ತು ಪಿ.ಕೆ.ಗಂಗಾಧರ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಎ.ಎಂ.ನರಸಿಂಹ, ಕಾರ್ಯದರ್ಶಿಯಾಗಿ ಎಂ.ಸಿ.ಹೂವಮ್ಮ, ಉಪಕಾರ್ಯದರ್ಶಿಯಾಗಿ ಎಂ.ಬಿ.ಪೂವಪ್ಪ ಮತ್ತು ಕೋಶಾಧಿಕಾರಿಯಾಗಿ ಎಂ.ಎಸ್.ಕಾಂತಿ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಐದು ತಾಲೂಕುಗಳಿಗೆ ಸಂಘಟನಾ ಕಾರ್ಯದರ್ಶಿಗಳನ್ನು ನೇಮಿಸಲಾಗಿದ್ದು, ಮಡಿಕೇರಿ-ಎಂ.ಟಿ.ದೇವಪ್ಪ, ಸೋಮವಾರಪೇಟೆ-ಸಂತೋಷ್ ಕುಮಾರ್, ಪೊನ್ನಂಪೇಟೆ-ದಿವ್ಯ ಕುಮಾರ್, ಕುಶಾಲನಗರ-ನೀಲಮ್ಮ ರವಿ ಮತ್ತು ವಿರಾಜಪೇಟೆ ಎಂ.ಪಿ.ನವೀನ್ ಆಯ್ಕೆಯಾಗಿದ್ದಾರೆ. ಸಮಿತಿಗೆ ೧೧ ಸದಸ್ಯರು ಹಾಗೂ ೫ ಉಪಸಮಿತಿಗಳ ಅಧ್ಯಕ್ಷರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಜಲಜಾಕ್ಷಿ ನವೀನ್ ಮಹಿಳಾ ವೇದಿಕೆ ಅಧ್ಯಕ್ಷೆ ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಮಹಿಳಾ ವೇದಿಕೆಗೆ ಅಧ್ಯಕ್ಷರಾಗಿ ಜಲಜಾಕ್ಷಿ ನವೀನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರತ್ನಾವತಿ ಕುಂಡಾಡು, ಕಾರ್ಯದರ್ಶಿಯಾಗಿ ಸರಸ್ವತಿ ಮೋಹನ್, ಉಪಕಾರ್ಯದರ್ಶಿಯಾಗಿ ಶ್ವೇತಾ ದಿವ್ಯ ಕುಮಾರ್ ಮತ್ತು ಕೋಶಾಧಿಕಾರಿಯಾಗಿ ಧರಣಿ ಪರಮೇಶ್ವರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಮಿತಿ ಸದಸ್ಯರಾಗಿ ಪುಷ್ಪಾವತಿ ಐಯ್ತಪ್ಪ, ಎಂ.ಟಿ.ಸುನಿತಾ, ಸುಧಾ ಕುಮಾರಿ, ಪುಷ್ಪ, ಭಾರತಿ ರಾಮಣ್ಣ, ಮೀನಾಕ್ಷಿ, ಶಶಿಕಲಾ, ವಾರಿಜ, ಉಮಾವತಿ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ರತ್ನಮಂಜರಿ ನರಸಿಂಹ ಅವರು ಮಾರ್ಗದರ್ಶನ ನೀಡಲಿದ್ದಾರೆ.

