ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ "ನಮ್ಮ ನಡೆ ಹಸಿರೆಡೆಗೆ" ಅಭಿಯಾನ

Jun 14, 2026 - 09:48
 0  137
ಕುಶಾಲನಗರ  ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ  "ನಮ್ಮ ನಡೆ ಹಸಿರೆಡೆಗೆ" ಅಭಿಯಾನ

ಕುಶಾಲನಗರ, ಜೂ.14: ಕೊಡಗು ಅರಣ್ಯ ವೃತ್ತದ ಕುಶಾಲನಗರ ವಲಯ ಅರಣ್ಯ ಕಛೇರಿಯ ವತಿಯಿಂದ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ , ಜಿಲ್ಲಾ ವಿಜ್ಞಾನ ಪರಿಷತ್ತು ಹಾಗೂ ಭಾರತ್ ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ "ಪ್ರಕೃತಿಯಿಂದ ಸ್ಪೂರ್ತಿ, "ಹವಾಮಾನಕ್ಕಾಗಿ, "ನಮ್ಮ ಭವಿಷ್ಯಕ್ಕಾಗಿ" ಎಂಬ ಧ್ಯೇಯವಾಕ್ಯದೊಂದಿಗೆ "ನಮ್ಮ‌ನಡೆ ಹಸಿರೆಡೆಗೆ" ("ಗೋ ಗ್ರೀನ್") ಅಭಿಯಾನ: 2026 ದಡಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪರಿಸರ ಜಾಗೃತಿ ಆಂದೋಲನದಲ್ಲಿ ಮಾದಾಪಟ್ಟಣದ ಪರಿಸರದಲ್ಲಿ ಪರಿಸರ ಜಾಗೃತಿ ಹಮ್ಮಿಕೊಳ್ಳಲಾಗಿತ್ತು. ‌

ಅರಣ್ಯ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ ಕೆ.ಐ. ಪರಶಿವಮೂರ್ತಿ, ಪ್ರತಿಯೊಬ್ಬರೂ ಮುಂದಿನ ಪೀಳಿಗೆಯ ದೃಷ್ಠಿಯಿಂದ ಸ್ವಚ್ಛ, ಸುಂದರ, ಹಸಿರು ಪರಿಸರಕ್ಕಾಗಿ ಈ ನೆಲ- ಜಲ, ಅರಣ್ಯ , ವನ್ಯಜೀವಿಗಳು ಹಾಗೂ ಜೀವಿ- ವೈವಿಧ್ಯವನ್ನು ಸಂರಕ್ಷಿಸಲು ಸಂಘಟಿತ ಪ್ರಯತ್ನ ಮಾಡಬೇಕು ಎಂದರು.

ನಾವು "ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು ಮತ್ತು ಮಣ್ಣನ್ನು ಉಳಿಸಬೇಕಾದರೆ ಇಂದಿನಿಂದಲೇ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಕರೆ ನೀಡಿದರು.

 ವಿದ್ಯಾರ್ಥಿಗಳು ತಮ್ಮನ್ನು ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದು ಡಾ ಪರಶಿವಮೂರ್ತಿ ಕರೆ ನೀಡಿದರು. ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿ "ಪರಿಸರ ಸಂರಕ್ಷಣೆಯ ಅಗತ್ಯತೆ" ಕುರಿತು ಮಾಹಿತಿ ನೀಡಿದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕರೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ,ನಾಳೆಯ ಉತ್ತಮ ಭವಿಷ್ಯದ ದೃಷ್ಟಿಯಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಡುಗೊರೆಯಾಗಿ ನೀಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡನೆಟ್ಟು ಬೆಳೆಸುವ ಮೂಲಕ ತಮ್ಮನ್ನು ಪರಿಸರ ಸಂರಕ್ಷಣೆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

 ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ ಮತ್ತು ಪರಿಸರ ನಾಶದಂತಹ ಪ್ರಕೃತಿ ವಿಕೋಪದಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಪರಿಣಾಮಗಳು ಹಾಗೂ ಅವುಗಳನ್ನು ಸಂರಕ್ಷಿಸುವ ವಿಧಾನಗಳ ಬಗ್ಗೆ ನಾವು ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ ಎಂದರು.

ವಿದ್ಯಾರ್ಥಿಗಳು ಪರಿಸರ ಕಾಳಜಿ ಬೆಳೆಸುವ ಅಗತ್ಯತೆ ಕುರಿತು ಮಾಹಿತಿ ನೀಡಿದ ಕಾಲೇಜಿನ ಸಂಪನ್ಮೂಲ ಶಿಕ್ಷಕ ಜಿ.ಶ್ರೀನಾಥ್ , ಪರಿಸರ ಕಾಳಜಿಯು ನಮ್ಮ ದಿನ ನಿತ್ಯದ ಕಾಯಕ ಆಗಬೇಕು. ಆಗ ನಾವು ಉತ್ತಮ ಪರಿಸರ ಕಂಡುಕೊಳ್ಳಲು ಸಾಧ್ಯ ಎಂದರು.

ಪರಿಸರ ಜಾಗೃತಿ ಆಂದೋಲನದಲ್ಲಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಿ. ಪೃಥ್ವಿರಾಜ್, ವಿವಿಧ ವಿಭಾಗಗಳ ಸಹ ಪ್ರಾಧ್ಯಾಪಕರಾದ ಡಾ. ಪ್ರವೀಣ್ ಕುಮಾರ್, ಡಾ ಸುಬ್ರಹ್ಮಣ್ಯ , ಟಿ. ಅನಿಲ್ ಕುಮಾರ್ , ಡಾ ಬಿ.ಎಸ್.ವೆಂಕಟೇಶ್ ಪ್ರಸಾದ್, ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಡಾ ಎನ್. ರಮೇಶ್, ಕಛೇರಿ ಅಧೀಕ್ಷಕರಾದ ಕೆ.ವಿ.ಸುಮಂತ್, ಎಚ್.ಎ.ರೂಪಾ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 "ಪ್ರಕೃತಿಯಿಂದ ಸ್ಪೂರ್ತಿ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ" ಎಂಬ ಧ್ಯೇಯವಾಕ್ಯದೊಂದಿಗೆ ಮಾದಾಪಟ್ಟಣ ಗ್ರಾಮದಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಲಾಯಿತು. ವಿವಿಧ ಪರಿಸರ ಘೋಷಣಾ ವಾಕ್ಯಗಳನ್ನು ಒಳಗೊಂಡ ಘೋಷಣಾ ಫಲಕಗಳನ್ನು ಹಿಡಿದುಕೊಂಡ ವಿದ್ಯಾರ್ಥಿಗಳು ಮಾದಾಪಟ್ಟಣ ಗ್ರಾಮದಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸಿ ಜನರ ಗಮನ ಸೆಳೆದರು. ಪರಿಸರ ಜಾಥಾದಲ್ಲಿ ವಿದ್ಯಾರ್ಥಿಗಳು ಹಸಿರೇ ಉಸಿರು, ಜಲವೇ ಜೀವಜಾಲ, ಪರಿಸರ ಮತ್ತು ಅರಣ್ಯ ಸಂರಕ್ಷಣೆ, ಕಾಡೇ ರಾಷ್ಟ್ರದ ಸಂಪತ್ತು ಎಂಬಿತ್ಯಾದಿ ಪರಿಸರ ಘೋಷಣೆಗಳನ್ನು ಪ್ರಚುರಪಡಿಸಿ ಪರಿಸರ ಕಾಳಜಿ ಪ್ರದರ್ಶಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0