ಪೊಲೀಸರ ಕೆಸರುಗದ್ದೆ ಕ್ರೀಡಾಕೂಟದ ಸಂಭ್ರಮ: ಕೆಸರಿನೋಕುಳಿಯಲ್ಲಿ ಮಿಂದೆದ್ದ ಖಾಕಿ ಪಡೆಗಳು

ಪೊಲೀಸರ ಕೆಸರುಗದ್ದೆ ಕ್ರೀಡಾಕೂಟದ ಸಂಭ್ರಮ: ಕೆಸರಿನೋಕುಳಿಯಲ್ಲಿ ಮಿಂದೆದ್ದ ಖಾಕಿ ಪಡೆಗಳು

ಗೋಣಿಕೊಪ್ಪಲು:-ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸದಾ ಒತ್ತಡದಲ್ಲೇ ಕರ್ತವ್ಯ ನಿರ್ವಹಿಸುವ ಪೊಲೀಸರು, ಕರ್ತವ್ಯದ ಜಂಜಾಟವನ್ನು ಬದಿಗಿರಿಸಿ, ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯ ಪೊಲೀಸರ ಕೆಸರು ಗದ್ದೆ ಕ್ರೀಡಾಕೂಟವನ್ನು ಗೋಣಿಕೊಪ್ಪಲ್ಲಿನ ಕಾಳಪ್ಪ ಕಾಲೋನಿಯ ವಿ. ವಿ ಕಾಳಪ್ಪ ಅವರ ಗದ್ದೆಯಲ್ಲಿ ಆಯೋಜಿಸಲಾಗಿತ್ತು. ಕೊಡಗು ಜಿಲ್ಲಾ ಪೊಲೀಸ್ ವರಿಷಾಧಿಕಾರಿ ಕೆ. ರಾಮರಾಜನ್ ಅವರ ನೇತೃತ್ವದಲ್ಲಿ ವಿರಾಜಪೇಟೆ ತಾಲೂಕು ಡಿ.ವೈ.ಎಸ್.ಪಿ ಮಹೇಶ್ ಕುಮಾರ್ ಅವರ ಮುಂದಾಳತ್ವದಲ್ಲಿ ಜ್ಯೋತಿ ಬೆಳಗುವುದರ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಪಿ ದಿನೇಶ್ ಕುಮಾರ್ ಅವರು ಮಾತನಾಡಿ, ‘ಸದಾ ಕರ್ತವ್ಯ ನಿರತರಾಗುವ ಪೊಲೀಸರಿಗೆ ಒಂದು ದಿನದ ಮನರಂಜನೆ ಹಾಗೂ ಕ್ರೀಡಾ ಕೌಶಲದ ವೃದ್ಧಿಗಾಗಿ ಮೊದಲ ಬಾರಿಗೆ ವಿರಾಜಪೇಟೆ ವಿಭಾಗದ ಪೊಲೀಸರಿಗೆ ಕೆಸರು ಗದ್ದೆ ಕ್ರೀಡಾ ಕೂಟ ಆಯೋಜಿಸಲಾಗಿದೆ. ಇದನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಶ್ಲಾಘನೀಯ. ಮುಂದಿನ ವರ್ಷದಿಂದ ಮಡಿಕೇರಿ ಹಾಗೂ ಸೋಮವಾರಪೇಟೆ ವಿಭಾಗದ ಪೊಲೀಸರಿಗೂ ಇಂಥದ್ದೆ ಕ್ರೀಡಾ ಕೂಟ ಆಯೋಜಿಸಲಾಗುವುದು’ ಎಂದು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪ್ಸ್ ಶಾಲೆಯ ಅಧ್ಯಕ್ಷ ಧನ್ಯ ಸುಬ್ಬಯ್ಯ ಅವರು ಮಾತನಾಡಿ, ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಇಂತಹ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

ವಿರಾಜಪೇಟೆ ವೃತ್ತನೀರಿಕ್ಷಕ ಅನೂಪ್ ಮಾದಪ್ಪ ಅವರು ಮಾತನಾಡಿ, ಕೆಸರುಗದ್ದೆಯಲ್ಲಿ ಒಂದು ದಿನ ಎನ್ನುವ ಶೀರ್ಷಿಕೆಯನ್ನು ವಿರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್ ಅವರು ನೀಡಿದ್ದು, 20 ವರ್ಷದ ಕರ್ತವ್ಯದ ಅವಧಿಯಲ್ಲಿ ಇದೇ ಮೊದಲು ಪೊಲೀಸ್ ಸಿಬ್ಬಂದಿಗಳಿಗೆ ಕೆಸರು ಗದ್ದೆಯಲ್ಲಿ ಒಂದು ದಿನ ಮಣ್ಣಿನ ಘಮಲಿನಲ್ಲಿ ಆರಕ್ಷಕರು ಎಂಬ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.

ಈ ಸಂದರ್ಭ ಕುಟ್ಟ ಉಪನಿರೀಕ್ಷಕರಾದ ಮಹಾದೇವ ಎಚ್. ಕೆ, ಶ್ರೀಮಂಗಲ ಉಪನಿರೀಕ್ಷಕರಾದ ರವೀಂದ್ರ, ಗೋಣಿಕೊಪ್ಪ ಉಪನಿರೀಕ್ಷಕರಾದ ಪ್ರದೀಪ್, ವಿರಾಜಪೇಟೆ ಗ್ರಾಮಾಂತರ ಉಪನಿರೀಕ್ಷಕರಾದ ಲತಾ ಹಾಗೂ ವಾಣಿ, ವಿರಾಜಪೇಟೆ ನಗರ ಉಪನಿರೀಕ್ಷಕರಾದ ಪ್ರಮೋದ್, ಪೋನ್ನಂಪೇಟೆ ಉಪನಿರೀಕ್ಷಕರಾದ ನವೀನ್, ಗದ್ದೆಯ ಮಾಲೀಕ ಅಜಯ್, ಮಾನಸ ತಿಮ್ಮಯ್ಯ ಇದ್ದರು. ಸಭಾ ಕಾರ್ಯಕ್ರಮದ ಬಳಿಕ ನೆರೆದಿದ್ದ ಗಣ್ಯರು ವಿರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ, ಶ್ರೀಮಂಗಲ ಹಾಗೂ ಕುಟ್ಟ ಪೊಲೀಸ್ ಠಾಣಾ ಸಿಬ್ಬಂದಿಗಳಿಗೆ ಭತ್ತದ ಪೈರು ನೀಡುವುದರ ಮೂಲಕ ಕೆಸರಿನ ಗದ್ದೆಯಲ್ಲಿ ಭತ್ತದ ಪೈರನ್ನು ನಾಟಿ ಮಾಡುವ ಮೂಲಕ ಭೂಮಿ ತಾಯಿಗೆ ವಂದಿಸಿ, ಕೆಸರು ಗದ್ದೆಯ ಕ್ರೀಡಾಕೂಟಕ್ಕೆ ವಿಶೇಷ ರೀತಿಯಲ್ಲಿ ಚಾಲನೆ ನೀಡಿದರು.

ಪುರುಷರಿಗೆ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ, ಪುರುಷರಿಗೆ ವಾಲಿಬಾಲ್, ಕಬಡ್ಡಿ, ಓಟದ ಸ್ಪರ್ಧೆ, ಮಹಿಳೆಯರಿಗೆ ಥ್ರೋಬಾಲ್, ಪೊಲೀಸ್ ಹುದ್ದೆಯಲ್ಲಿರುವ ದಂಪತಿಗಳಿಗೆ ಕಪ್ಪಲ್ ರೇಸ್, ಪೊಲೀಸರ ಮಕ್ಕಳಿಗೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ತುಂಬಿ ತುಳುಕುತಿದ್ದ ಮಂಡಿವರೆಗಿನ ಕೆಸರಿನ ನೀರಿನಲ್ಲಿ ವಾಲಿಬಾಲ್ ಆಡಿದ ಪೊಲೀಸರು ಎದ್ದು ಬಿದ್ದು ಹೊರಳಾಡಿ ಗೆಲುವು ಸಾಧಿಸಲು ಸೆಣಸಾಡಿದರು. ಮತ್ತೊಂದೆಡೆ ಮಹಿಳೆಯರ ಹಗ್ಗ ಜಗ್ಗಾಟ ರಣರೋಚಕವಾಗಿತ್ತು. ಕರ್ತವ್ಯದ ಅವಧಿಯಲ್ಲಿ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಹಿಳಾ ಪೊಲೀಸರು ಕೆಸರು ಗದ್ದೆಯಲ್ಲಿ ವರ್ಣರಂಜಿತ ಸಾಮಾನ್ಯ ಉಡುಗೆಯಲ್ಲಿ ಕಂಗೊಳಿಸಿದರು. ಓಟದ ಸ್ಪರ್ಧೆಯಲ್ಲಿಯೂ ಎದ್ದು ಬಿದ್ದು ಓಡುತ್ತಿದ್ದ ದೃಶ್ಯ ನೋಡುಗರನ್ನು ನಗೆಗಡಲಲ್ಲಿ ತೇಲಿಸಿತು. ಮಹಿಳಾ ಪೊಲೀಸರು, ಪುರುಷ ಪೊಲೀಸರು ಹಾಗೂ ಅವರ ಕುಟುಂಬದ ಮಕ್ಕಳು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಕೆಸರಿನ ಓಕುಳಿಯಲ್ಲಿ ಮಿಂದೆದ್ದರು. ಪುರುಷರ ನಡುವಿನ ಕಬಡ್ಡಿ ಪಂದ್ಯವು ಕೂಡ ಹಣಾಹಣಿಯಿಂದ ಕೂಡಿತ್ತು, ಎದುರಾಳಿ ಆಟಗಾರನನ್ನು ಹಿಡಿಯುವಾಗ ಕೆಸರು ನೀರಿನಲ್ಲಿ ಬಿದ್ದು ಹೊರಳಾಡುತ್ತಿದ್ದುದು ರೋಮಾಂಚಕಾರಿಯಾಗಿತ್ತು.

 ವರದಿ:ಚಂಪಾ ಗಗನ, ಪೊನ್ನಂಪೇಟೆ