ಪೊನ್ನಂಪೇಟೆ:ಸಂಭ್ರಮದ ಈದ್ ಮಿಲಾದ್ ಆಚರಣೆ : ಗಮನಸೆಳೆದ ಮಕ್ಕಳ ದಫ್ ಪ್ರದರ್ಶನ
ಪೊನ್ನಂಪೇಟೆ: ತ್ಯಾಗರಾಜ ರಸ್ತೆಯಲ್ಲಿರುವ ಶಾಫಿ ಜುಮ್ಮಾ ಮಸೀದಿ, ಕಾಟ್ರಕೊಲ್ಲಿ ಮುಹಿಯುದ್ದೀನ್ ಜುಮ್ಮಾ ಮಸೀದಿ, ಮಾಪಿಳ್ಳೆ ತೋಡು ಕಲ್ಲಾಯಿ ಜುಮ್ಮಾ ಮಸೀದಿ, ಪೊನ್ನಂಪೇಟೆಯ ಹನಫಿ ಜಾಮಿಯಾ ಮಸೀದಿ ಹಾಗೂ ಹಳ್ಳಿಗಟ್ಟು ಬದರ್ ಜುಮ್ಮಾ ಮಸೀದಿಯ ಮುಸ್ಲಿಂ ಜಮಾಅತ್ ಒಕ್ಕೂಟ ಹಾಗೂ ಸಂಯುಕ್ತ ಮಿಲಾದ್ ಆಶ್ರಯದಲ್ಲಿ ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1500 ನೇ ಜನ್ಮದಿನಾಚರಣೆ ಪ್ರಯುಕ್ತ ಪೊನ್ನಂಪೇಟೆಯಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥ ನಡೆಯಿತು. ಪಟ್ಟಣದ ರಾಮಕೃಷ್ಣ ಶಾರದಾಶ್ರಮದ ಬಳಿಯಿಂದ ಆರಂಭಗೊಂಡ ಮಿಲಾದ್ ಸಂದೇಶ ಜಾಥ, ಪೊನ್ನಂಪೇಟೆಯ ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ಸಾಗಿತು. ನೂರಾರು ಮುಸ್ಲಿಂ ಬಾಂಧವರು ಜಾಥದಲ್ಲಿ ಪಾಲ್ಗೊಂಡಿದ್ದರು.
ಬಸ್ ನಿಲ್ದಾಣದಲ್ಲಿ ನಡೆದ ಮದರಸ ವಿದ್ಯಾರ್ಥಿಗಳಿಂದ ಹಾಗೂ ಹಿರಿಯರಿಂದ ದಫ್ ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು. ಈ ಸಂದರ್ಭ ಶಾಫಿ ಜುಮ್ಮಾ ಮಸೀದಿ ಅಧ್ಯಕ್ಷ ಸಿ.ಎ. ಅಹಮದ್, ಕಾರ್ಯದರ್ಶಿ ಪಿ. ಎ. ಅಜೀಜ್, ಉಪಾಧ್ಯಕ್ಷ ಸಿ. ಎಂ. ಅಶ್ರಫ್, ಕಾಟ್ರಕೊಲ್ಲಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಎಂ. ಎ. ಆಲಿ, ಕಾರ್ಯದರ್ಶಿ ಅನೀಫ್, ಹನಫಿ ಜುಮ್ಮಾ ಮಸೀದಿ ಅಧ್ಯಕ್ಷ ಎಂ. ಇ. ಫಾಜಿಲ್, ಕಾರ್ಯದರ್ಶಿ ಮೊಹಿಸಿನ್, ಕಲ್ಲಾಯಿ ಜುಮ್ಮಾ ಮಸೀದಿ ಅಧ್ಯಕ್ಷ ಆಲೀರ ಪಿ. ಅಲೀ, ಉಪಾಧ್ಯಕ್ಷ ಆಲೀರ ಎ. ಖಾಲಿದ್, ಕಾರ್ಯದರ್ಶಿ ಆಲೀರ ಹೆಚ್. ಅಬ್ದುಲ್ ಹಮೀದ್, ಹಳ್ಳಿಗಟ್ಟು ಜುಮ್ಮಾ ಮಸೀದಿ ರ್ಮಿಕ ಗುರುಗಾಳಾದ ಫಾರೂಕ್ ಫೈಝೀ, ಅಬ್ದುಲ್ ರಜಾಕ್ ಸಖಾಫಿ, ಹ್ಯಾರೀಸ್ ಮದನಿ, ಜಕರಿಯಾ ಸಅದಿ, ಮಾತನಾಡಿದರು. ಸಮುದಾಯದ ಹಿರಿಯರಾದ ಆಲೀರ ಎರ್ಮು ಹಾಜಿ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್, ಸದಸ್ಯ ಆಲೀರ ಅಜೀಜ್, ಐದು ಮಸೀದಿಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಇದ್ದರು. ಈ ಸಂದರ್ಭ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1500 ನೇ ಹುಟ್ಟು ಹಬ್ಬ ದಿನಾಚರಣೆಯ ಕಾರ್ಯಕ್ರಮದ ಸಂಚಾಲಕ ಪೊನ್ನಂಪೇಟೆ ಪಟ್ಟಣ ಪಂಚಾಯತಿ ಸದಸ್ಯ ಸಿ. ಎ. ಜುನೈದ್ ಅವರು ಮಾತನಾಡಿ, ಎಲ್ಲಾ ಧರ್ಮಗಳ ಸಾರ ಒಂದೇ ಆಗಿದ್ದು, ಆಯಾ ಧರ್ಮದ ಮುಂದಿನ ಪೀಳಿಗೆಯ ಮಕ್ಕಳಿಗೆ ಸ್ನೇಹ, ಪ್ರೀತಿ, ಸೌಹಾರ್ದತೆಯಿಂದ ಒಗ್ಗೂಡಿ ಅವರವರ ಧರ್ಮದ ಆಚರಣೆಯನ್ನು ಆಚರಿಸುವಂತೆ ಪ್ರೇರೇಪಿಸಬೇಕೆಂದರು.
ವರದಿ:ಚಂಪಾ ಗಗನ ಪೊನ್ನಂಪೇಟೆ