ವಾಹನ ಅಪಘಾತ, ವಿಮೆ ಹಣ ನೀಡದೆ ಸತಾಯಿಸಿದ ಖಾಸಗಿ ಕಂಪನಿ:15 ಲಕ್ಷ ವಿಮೆ ಹಣ ನೀಡುವಂತೆ ಆದೇಶ
ಮಡಿಕೇರಿ:ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ, ಅಂಬಟ್ಟಿ ಗ್ರಾಮದ ನಿವಾಸಿಯಾದ .ಎನ್.ಎಂ.ಚೆಂಗಪ್ಪ ರವರು ಮಾರುತಿ ವ್ಯಾಗನ್-ಆರ್ ಕಾರಿನ ಮಾಲೀಕರಾಗಿದ್ದು,ಸದರಿ ವಾಹನಕ್ಕೆ Iffco-Tokio General Insurance Company Limited ಯೋಜನೆಯಡಿಯಲ್ಲಿ ವಿಮೆ ಮಾಡಿಸಿದ್ದಾರೆ. ದಿನಾಂಕ 13/02/2023 ರಂದು ಎನ್.ಎಂ.ಚೆಂಗಪ್ಪನವರು ಅವರ ಹೆಂಡತಿ ಮಗನೊಂದಿಗೆ ಮಾರುತಿ ವ್ಯಾಗನ್-ಆರ್ ಕಾರಿನಲ್ಲಿ ಪ್ರಯಾಣಿಸುವಾಗ ಬಿಟ್ಟಂಗಾಲ ಗ್ರಾಮದ ಹತ್ತಿರ ಎದುರುಗಡೆಯಿಂದ ಬರುತ್ತಿದ್ದ ಲಾರಿಯೊಂದಿಗೆ ಅಪಘಾತ ಸಂಭವಿಸಿದೆ. ಸದರಿ ಅಪಘಾತದಿಂದ ಎನ್.ಎಂ.ಚೆಂಗಪ್ಪ ನವರು ಅತಿಯಾದ ರಕ್ತ ಶ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಅವರ ಹೆಂಡತಿ ಶ್ವೇತ ಗೌರಮ್ಮ ಹಾಗೂ ಮಗ ಮಾಸ್ಟರ್ ಎನ್.ಸಿ.ಶ್ರೇಯಸ್ ರವರುಗಳು ಸಣ್ಣಪುಟ್ಟ ಗಾಯಗಳೊಂದಿದೆ ಬದುಕುಳಿದಿದ್ದರು. ಚೆಂಗಪ್ಪ ನವರು ಮರಣ ಹೊಂದಿದ ನಂತರ ಅವರ ಹೆಂಡತಿ ಹಾಗೂ ಮಗ ಇನ್ಸೂರೆನ್ಸ್ ಕಂಪನಿಯವರನ್ನು ಸಂಪರ್ಕಿಸಿ ಪಾಲಿಸಿಯ ಕ್ಲೈಮ್ ಕೇಳಿದ್ದರು. ಇದಕ್ಕೆ ವಿಮಾ ಕಂಪನಿಯವರು ದೂರುದಾರರ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಕ್ಲೈಮ್ ಸೆಟ್ಟಲ್ ಮಾಡುತ್ತೇವೆ ಎಂದು ನಾನಾ ರೀತಿಯ ಕಾರಣಗಳನ್ನು ಹೇಳುತ್ತಾ ಕ್ಲೈಮ್ ನೀಡದೆ ತಪ್ಪಿಸಿಕೊಂಡಿದ್ದರು. ಹೀಗೆ ಸುಳ್ಳು ಭರವಸೆಯನ್ನು ನೀಡಿ ದೂರುದಾರರಿಗೆ ಕ್ಲೈಮ್ ಮೊತ್ತವನ್ನು ಸೆಟ್ಟಲ್ ಮಾಡದೆ ತಮ್ಮ ಸೇವೆಯಲ್ಲಿ ನ್ಯೂನತೆಯನ್ನು ಉಂಟು ಮಾಡಿರುತ್ತಾರೆಂದು ಅವರುಗಳ ವಿರುದ್ಧ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಿದ್ದರು.
ಇವರ ಪ್ರಕರಣವನ್ನು ಆಯೋಗವು ದಾಖಲು ಮಾಡಿಕೊಂಡು ಉಭಯ ಪಕ್ಷಕಾರರ ವಾದ ವಿವಾದಗಳನ್ನು ಚರ್ಚಿಸಿ, ದಾಖಲಾತಿಗಳನ್ನು ಪರಿಶೀಲಿಸಿದ ಕೊಡಗು ಜಿಲ್ಲಾ ಗ್ರಾಹಕರ ಆಯೋಗದ ಪ್ರಭಾರ ಅಧ್ಯಕ್ಷರಾದ ಶ್ರೀಮತಿ ಡಾ॥ ಸಿ.ರೇಣುಕಾಂಬ ಹಾಗೂ ಸದಸ್ಯರಾದ ಶ್ರೀಮತಿ ಗೌರಮ್ಮಣ್ಣಿ ರವರುಗಳು ವಿವಿಧ ಪ್ರಕರಣಗಳ ತೀರ್ಪನ್ನು ಉಲ್ಲೇಖಿಸಿ ಸದರಿ ದೂರನ್ನು ಪುರಸ್ಕರಿಸಿ, ಎದುರುದಾರರುಗಳು ದೂರುದಾರರ ವಾಹನದ ವಿಮೆ ಮೊತ್ತ ರೂ.15,00,000/- ಗಳನ್ನು ಹಾಗೂ ಅವರಿಗೆ ಉಂಟಾದ ಮಾನಸಿಕ ವೇದನೆಗೆ ಪರಿಹಾರವಾಗಿ ರೂ.50,000/- ಗಳು ಹಾಗೂ ವ್ಯಾಜ್ಯದ ಖರ್ಚುವೆಚ್ಚಗಳಿಗೆ ರೂ.25,000/-ಗಳನ್ನು ಪಾವತಿಸಬೇಕೆಂದು ಎದುರುದಾರರುಗಳಿಗೆ ಆದೇಶ ನೀಡಿದ್ದಾರೆ ಎಂದು ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದವರು ತಿಳಿಸಿದ್ದಾರೆ.