ಕೊಡಗು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ
ಮಡಿಕೇರಿ ಜೂ.28:ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ನೀಡುವ ಮೂಲಕ ಕೊಡಗು ಜಿಲ್ಲೆಯಾದ್ಯಂತ ಭಾನುವಾರ ಚಾಲನೆ ದೊರೆಯಿತು.
ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ವಿರಾಜಪೇಟೆಯ ತಮ್ಮ ಗೃಹ ಕಚೇರಿಯಲ್ಲಿ ಹಾಗೂ ಡಾ.ಮಂತರ್ ಗೌಡ ಅವರು ಸೋಮವಾರಪೇಟೆಯ ತಾಲ್ಲೂಕು ಆಸ್ಪತ್ರೆಯಲ್ಲಿ ಶಿಶುಗಳಿಗೆ ಪೋಲಿಯೋ ಹನಿ ನೀಡಿ ಕಾರ್ಯಕ್ರಮದ ಮಹತ್ವ ಕುರಿತು ಸಂದೇಶ ಸಾರಿದರು.
ಹಾಗೆಯೇ ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಐದು ವರ್ಷದ ಮಕ್ಕಳಿಗೆ ಪೋಲಿಯೋ ಹನಿ ನೀಡಿ ಗಮನ ಸೆಳೆದರು.
ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ರಾಷ್ಟ್ರವು ಪೋಲಿಯೋ ಮುಕ್ತವಾಗಿದ್ದರೂ ಸಹ, ಇತರೆ ದೇಶಗಳಲ್ಲಿ ಪೋಲಿಯೋ ಪ್ರಕರಣಗಳು ಇರುವುದರಿಂದ ಹೆಚ್ಚಿನ ಎಚ್ಚರ ವಹಿಸಬೇಕಿದೆ. ಆದ್ದರಿಂದ ಐದು ವರ್ಷದೊಳಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಕೊಡಿಸಬೇಕು ಎಂದು ಕರೆ ನೀಡಿದರು.
ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ನೀಡುವುದರಿಂದ ಮಕ್ಕಳ ಬೆಳವಣಿಗೆ ಸಂದರ್ಭದಲ್ಲಿ ಉಂಟಾಗಬಹುದಾದ ವಿಕಲತೆಯನ್ನು ತಡೆಯಬಹುದಾಗಿದೆ. ಆದ್ದರಿಂದ ಈ ಬಗ್ಗೆ ಹತ್ತಿರದವರಿಗೂ ಮಾಹಿತಿ ನೀಡಿ ಶಿಶುಗಳಿಗೆ ಪೋಲಿಯೋ ಹನಿ ಹಾಕಿಸಬೇಕು ಎಂದರು.
ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಎರಡು ಹನಿ ನೀಡುವುದರಿಂದ ಮಕ್ಕಳ ಬೆಳವಣಿಗೆಗೆ ಸಹಕರಾರಿಯಾಗಲಿದೆ ಎಂದರು.
ದೇಶವು ಪೋಲಿಯೋ ಮುಕ್ತವಾಗಿದ್ದರೂ ಸಹ, ವಿಶ್ವದ ಹಲವು ರಾಷ್ಟ್ರಗಳಲ್ಲಿ ಪೋಲಿಯೋ ಇನ್ನೂ ಇರುವುದರಿಂದ, ಅದು ಮತ್ತೆ ಕಾಣಿಕೊಳ್ಳುವ ಸಾಧ್ಯತೆ ಇರುವುದರಿಂದ, ಈ ಬಗ್ಗೆ ಎಚ್ಚರ ವಹಿಸಬೇಕಿದೆ. ಆದ್ದರಿಂದ ಐದು ವರ್ಷದೊಳಗಿನ ಮಕ್ಕಳಿಗೆ ಪ್ರತಿ ಬಾರಿ ಪೋಲಿಯೋ ಲಸಿಕೆ ಹಾಕಿಸಿ, ಪೋಲಿಯೋ ನಿರ್ಮೂಲನೆಗೆ ಶ್ರಮಿಸಬೇಕಿದೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಅವರು ಮಾತನಾಡಿ ಪೋಲಿಯೋ ನಿರ್ಮೂಲನೆ ಮಾಡುವಲ್ಲಿ ವಿಶ್ವಸಂಸ್ಥೆ, ರೋಟರಿ ಸಂಸ್ಥೆ, ರೆಡ್ ಕ್ರಾಸ್ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳು ಸರ್ಕಾರದ ಕೈಜೋಡಿಸಿ ಕೆಲಸ ನಿರ್ವಹಿಸುತ್ತಿವೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಐದು ವರ್ಷದೊಳಗೆ 29,011 ಮಕ್ಕಳು ಇದ್ದು, ಗ್ರಾಮೀಣ ಪ್ರದೇಶದಲ್ಲಿ 26,373 ಮತ್ತು ನಗರ ಪ್ರದೇಶದಲ್ಲಿ 2,638 ಮಕ್ಕಳನ್ನು ಗುರ್ತಿಸಲಾಗಿದೆ ಎಂದರು.
ಹಾಗೆಯೇ ವಲಸೆ ಮಕ್ಕಳನ್ನು ಸಹ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆರ್.ಸಿ.ಎಚ್.ಅಧಿಕಾರಿ ಡಾ.ಮಧುಸೂದನ ಅವರು ಮಾತನಾಡಿ ಪಲ್ಸ್ ಪೋಲಿಯೋ ಹನಿ ನೀಡುವ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ 471 ಬೂತ್ ತೆರೆಯಲಾಗಿದೆ. ಜನಸಂದಣಿ ಪ್ರದೇಶಗಳು, ಬಸ್ ನಿಲ್ದಾಣ ಹಾಗೂ ಪ್ರವಾಸಿ ಕೇಂದ್ರಗಳನ್ನು ಗುರಿಯಾಗಿಸಿ, 33 ಟ್ರಾನ್ಸಿಟ್ ಬೂತ್ ಗಳನ್ನು ತೆರೆಯಲಾಗಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ 1 ಸಂಚಾರಿ ತಂಡವನ್ನು ಸಹ ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಜಿಲ್ಲೆಯಾದ್ಯಂತ ಲಸಿಕಾ ಬೂತ್ ಗಳಲ್ಲಿ ಕಾರ್ಯನಿರ್ವಹಿಸಲು 1952 ಲಸಿಕೆ ನೀಡುವವರು, 84 ಮಂದಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಡಾ.ಮಧುಸೂದನ ಅವರು ಹೇಳಿದರು.
ಇದೇ ಜೂನ್ 29 ಮತ್ತು 30 ರಂದು ಗ್ರಾಮೀಣ ಪ್ರದೇಶದಲ್ಲಿ, ಜೂನ್ 29 ರಿಂದ ಜುಲೈ 1 ರ ವರೆಗೆ ನಗರ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಪೋಲಿಯೋ ಲಸಿಕೆಯಿಂದ ಬಿಟ್ಟು ಹೋಗಿರುವ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುತ್ತದೆ ಎಂದು ಡಾ.ಮಧುಸೂದನ ಅವರು ಮಾಹಿತಿ ನೀಡಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಸನತ್ ಕುಮಾರ್, ಡಾ.ಯತಿರಾಜು, ಡಾ.ಇಂದೂದರ ಅವರು ಮಾತನಾಡಿದರು.
ರೋಟರಿ ಸಂಸ್ಥೆಯ ಮನೋಹರ್ ಕಾಮತ್, ರತನ್ ತಮ್ಮಯ್ಯ, ಡಾ.ಚಂದ್ರಶೇಖರ್, ಡಾ.ದಿವ್ಯಾರಾಣಿ, ಆರೋಗ್ಯ ಶಿಕ್ಷಣಾಧಿಕಾರಿ ಪಾಲಕ್ಷ, ಶ್ರೀಕಾಂತ್, ದೇವರಾಜು ಇತರರು ಇದ್ದರು.

