ಗಣೇಶೋತ್ಸವ ಆಡಂಬರದ ಆಚರಣೆಯಾಗುವುದಕ್ಕಿಂತ, ಮುಂದಿನ ಪೀಳಿಗೆ ಮಾರ್ಗದರ್ಶನ ನೀಡುವ ಸಾಂಪ್ರದಾಯಕ ಆಚರಣೆ ಆಗಲಿ:ಎಸ್.ಪಿ ರಾಮರಾಜನ್ ಅಭಿಪ್ರಾಯ

ಗಣೇಶೋತ್ಸವ ಆಡಂಬರದ ಆಚರಣೆಯಾಗುವುದಕ್ಕಿಂತ, ಮುಂದಿನ ಪೀಳಿಗೆ ಮಾರ್ಗದರ್ಶನ ನೀಡುವ ಸಾಂಪ್ರದಾಯಕ ಆಚರಣೆ ಆಗಲಿ:ಎಸ್.ಪಿ ರಾಮರಾಜನ್ ಅಭಿಪ್ರಾಯ

ವಿರಾಜಪೇಟೆ:ಗಣೇಶೋತ್ಸವ ದೇವರ ಕಾರ್ಯಕ್ರಮವಾಗಿದ್ದು ಉತ್ಸವ ಯಶಸ್ವಿಯಾಗಿ ನಡೆಯಲು ಉತ್ತಮವಾದ ಸಂಘಟನೆ ಅಗತ್ಯವಾಗಿದೆ. ಕಾನೂನು ಚೌಕಟ್ಟನ್ನು ಮೀರದೆ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಒದಗಿಸಿ ಯಶಸ್ವಿಯಾಗಿ ಗಣೇಶೋತ್ಸವ ಆಚರಿಸಿ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹೇಳಿದರು.

 ವಿರಾಜಪೇಟೆ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಗಣೇಶೋತ್ಸವ ಸಂಘಟಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಗೌರಿ ಗಣೇಶ ಉತ್ಸವ ಸಮಿತಿಯವರು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಪರಿಸರ ಸಂರಕ್ಷಣೆ ಪೂರಕವಾಗುವ ನಿಟ್ಟಿನಲ್ಲಿ ಹಬ್ಬ ಆಚರಿಸಬೇಕು. ಸಿಡಿಮದ್ದು ಪ್ರದರ್ಶನ ಹಾಗೂ ಡಿ. ಜೆ ಗೆ ಅವಕಾಶ ಕಲ್ಪಿಸಿ ಕೊಡಲಾಗಿದ್ದು ನಿರ್ದಿಷ್ಟ ಶಬ್ದದ ಮಿತಿಯನ್ನು ಮೀರದಂತೆ ಸಂಘಟಕರು ಎಚ್ಚರ ವಹಿಸ ಬೇಕು.

ಪಿ.ಓ. ಪಿ ಮೂರ್ತಿಗಳನ್ನು ಬಳಸಲು ಅವಕಾಶವಿಲ್ಲ. ಇದರೊಂದಿಗೆ ಶೋಭಾ ಯಾತ್ರೆಯಂದು ಮದ್ಯಪಾನ ಮಾಡಿ ಗಲಭೆ ಮಾಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರ 15 ರಿಂದ 20 ತಂಡಗಳನ್ನು ರಚಿಸಲಾಗುತ್ತದೆ. ಶೋಭ ಯಾತ್ರೆಯ ಸಂದರ್ಭ ಯಾವುದೇ ವ್ಯಕ್ತಿ ಅಥವಾ ಯಂತ್ರದ ಮೂಲಕ ಬೆಂಕಿ ಉಗುಳುವುದನ್ನು ನಿಷೇಧಿಸಲಾಗಿದೆ. ಈ ರೀತಿ ಅಪಾಯಕಾರಿ ಸಾಹಸ ಯಾರಾದರೂ ಮಾಡಿದ್ದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಶೋಭಾಯಾತ್ರೆಯ ಮಂಟಪವು ವಾಹನದ ಅಳತೆಗೆ ಸಮರ್ಪಕವಾಗಿರಲಿ ಆಡಂಬರದ ಹಿನ್ನೆಲೆಯಲ್ಲಿ ದೊಡ್ಡ ಮಂಟಪಗಳನ್ನು ಮಾಡಿ ಆಯತಪ್ಪಿ ಬಿದ್ದು ಅಪಘಾತವಾಗದಂತೆ ಎಚ್ಚರ ವಹಿಸಬೇಕು. ವಿಸರ್ಜನೆ ಸ್ಥಳಗಳಲ್ಲಿ ವಿಶೇಷ ಸುರಕ್ಷತಾ ಕ್ರಮಗಳನ್ನು ವಹಿಸುವಂತೆ ಕರೆ ನೀಡಿದ ಅವರು ಯಾವುದೇ ರೀತಿಯಲ್ಲಿ ಸಮಸ್ಯೆಗಳು ಎದುರಾಗದಂತೆ ಕಾನೂನು ಚೌಕಟ್ಟಿನಲ್ಲಿ ಹಬ್ಬವನ್ನು ಆಚರಿಸಬೇಕು. ಕಾನೂನಿನ ಯಾವುದಾದರೂ ನಿಯಮವನ್ನು ಮೀರಿದ್ದಲ್ಲಿ ಉತ್ಸವ ಸಮಿತಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿರಾಜಪೇಟೆ ವೃತ್ತ ನಿರೀಕ್ಷಕ ಅನುಪ್ ಮಾದಪ್ಪ ಸಿಂಗಲ್ ವಿಂಡೋ ಸಿಸ್ಟಮ್ ಆರಂಭಿಸಲಾಗಿದ್ದು ಉತ್ಸವ ಸಮಿತಿಗಳು ಚೆಸ್ಕಾಂ, ಅಗ್ನಿಶಾಮಕ ದಳ, ಪೊಲೀಸ್ ಠಾಣೆ ,ಆರ್‌ಟಿಓ , ತಹಶೀಲ್ದಾರ್ ಕಚೇರಿ, ಅರಣ್ಯ ಇಲಾಖೆ ಮುಂತಾದ ಕಡೆಯಲ್ಲಿ ಸೂಕ್ತ ದಾಖಲೆಯನ್ನು ನೀಡಿ ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದು ಉತ್ಸವ ನಡೆಸುವಂತೆ ಹೇಳಿದರು.

 ಈ ಸಂದರ್ಭ ಮಾತನಾಡಿದ ಆಟೋ ಚಾಲಕ ಸಂಘದ ಅಧ್ಯಕ್ಷರು ಶೋಭಾಯಾತ್ರೆ ದಿನ 7 ಗಂಟೆಗಳ ತನಕ ನಗರದ ಮುಖ್ಯ ರಸ್ತೆಗಳಲ್ಲಿ ಆಟೋ ಚಾಲನೆಗೆ ಅನುವು ಮಾಡಿಕೊಡುವಂತೆ ಮನವಿಯನ್ನು ಸಲ್ಲಿಸಿದರು. ವಿರಾಜಪೇಟೆ ನಗರದ ಗಣೇಶೋತ್ಸವ ಸಮಿತಿಯವರು ಶೋಭಯಾತ್ರೆಗೂ ಮುನ್ನ ನಗರದ ಮುಖ್ಯ ರಸ್ತೆಯಲ್ಲಿರುವ ಹಳ್ಳಗಳನ್ನು ಮುಚ್ಚುವಂತೆ ಆಗ್ರಹಿಸಿದರು .

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ವಿರಾಜಪೇಟೆ ತಹಶೀಲ್ದಾರ್ ಅನಂತಶಂಕರ್, ಪುರಸಭೆಯ ಅಧ್ಯಕ್ಷೆ ದೇಚಮ್ಮ , ಉಪಾಧ್ಯಕ್ಷೆ ಫಸಿಹಾ ತಬುಸುಮ್, ಡಿ ವೈ ಎಸ್ ಪಿ ಬಿ .ಪಿ .ದಿನೇಶ್ ಕುಮಾರ್ , ಮೇದಪ್ಪ ಉಪಸ್ಥಿತರಿದ್ದರು. ಸಭೆಯಲ್ಲಿ ಚೆಸ್ಕಾಂ , ಪಿಡಬ್ಲ್ಯೂಡಿ , ಆರ್ ಟಿ ಓ , ಕೆಎಸ್ಆರ್ಟಿಸಿ , ಅರಣ್ಯ ಇಲಾಖೆ , ಪುರಸಭೆಯ ಸದಸ್ಯರು , ಅಧಿಕಾರಿಗಳೂ ಹಾಗೂ ವಿರಾಜಪೇಟೆ ತಾಲೂಕಿನ ವ್ಯಾಪ್ತಿಯ 40ಕ್ಕೂ ಅಧಿಕ ಉತ್ಸವ ಸಮಿತಿಯ ಅಧ್ಯಕ್ಷರು ಸದಸ್ಯರು ಹಾಜರಿದ್ದರು.