ಒಳ್ಳೆಯ ಸಂಸ್ಕಾರಕ್ಕೆ ಓದುವ ಅಭ್ಯಾಸ ಅಗತ್ಯ; ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ
ಮಡಿಕೇರಿ ಏ.23:-ಮನೆ ಸಂಸಾರದಲ್ಲಿ ಓದು-ಬರಹದಂತಹ ಅಭ್ಯಾಸಗುಣಗಳು ಒಳ್ಳೆಯ ಸಂಸ್ಕಾರಕ್ಕೆ ದಾರಿ ತೋರಿಸಬಲ್ಲದು. ಇದರಿಂದ ಒಳ್ಳೆಯ ಸಂಸ್ಕೃತಿಯು ರೂಪುಗೊಳ್ಳುವುದೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಭಿಪ್ರಾಯಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಅಮ್ಮತ್ತಿ ಕೊಡವ ಸಮಾಜದಲ್ಲಿ 8ನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟಿಸಿ ಮಾತನಾಡಿದ ಮಹೇಶ್ ನಾಚಯ್ಯ, ಒಂದು ಒಳ್ಳೆಯ ಸಂಸ್ಕೃತಿಯಿಂದ ಜನರು ಒಂದು ಕುಟುಂಬದಲ್ಲಿ ಉತ್ತಮ ಪರಿಸರ ಹೊಂದಬಹುದು. ಮೊದಲು ಮನೆಯಿಂದಲೇ ಸಂಸ್ಕಾರವನ್ನು ಕಲಿಯಬೇಕು. ಯಾವುದೇ ಭಾಷೆಯಲ್ಲಿ ಪರಿಣತಿ ಹೊಂದಿದ್ದರೂ ಮುಖ್ಯ ಭಾಷೆ ಕೊಡವ ಭಾಷೆ ಮನೆಯ ವ್ಯವಹಾರಿಕ ಭಾಷೆಯಾಗಿರಬೇಕು. ಮಾತೃ ಭಾಷೆಯ ಮೇಲಿನ ಕೀಳರಿಮೆ ಸಲ್ಲದು. ಇದು ತಂದೆ-ತಾಯಿಯನ್ನು ಕಡೆಗಣಿಸಿದಂತೆ. ಕೊಡವ ಭಾಷೆಯಲ್ಲಿ ತನ್ನದೇ ಆದ ನಾಲ್ಕು ಸಾವಿರದಷ್ಟು ಮೂಲ ಶಬ್ಧಗಳಿವೆ. ಅವೆಲ್ಲದರ ಬಳಕೆಯಾದಲ್ಲಿ ಭಾಷೆಗೆ ತನ್ನತನ ಉಳಿಯಲು ಸಾಧ್ಯವಾಗುತ್ತದೆ. ಕೊಡವ ಪುಸ್ತಕ ಪತ್ತಾಯ ಅಕಾಡೆಮಿಯ ನೂತನ ಯೋಜನೆಯಾಗಿದ್ದು ಕೊಡವ ಸಮಾಜಗಳಲ್ಲಿ ಐನ್‍ಮನೆಗಳಲ್ಲಿ ಇದರ ಸ್ಥಾಪನೆಗೆ ಸಂಬಂಧಪಟ್ಟವರು ಮುಂದೆ ಬರಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಉಪಾಧ್ಯಾಯ ಹಿರಿಯ ಕಲಾವಿದ ವಾಂಚಿರ ವಿಠಲ್ ನಾಣಯ್ಯ ಮಾತನಾಡಿ, ಕೊಡವ ಅಕಾಡೆಮಿಯ ಪುಸ್ತಕ ಉತ್ತಮ ಯೋಜನೆಯಾಗಿದೆ. ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾದರೆ ಬರಹಗಾರರಿಗೂ ಇನ್ನೂ ಹೆಚ್ಚು ಬರೆಯುವ ಆಸಕ್ತಿ ಉಂಟಾಗುತ್ತದೆ. ಕೊಡವ ಸಾಹಿತ್ಯ ಸಂಸ್ಕøತಿಯಲ್ಲಿ ಬೇಕಾದಷ್ಟು ಅಧ್ಯಯನ ಮಾಡುವಂತಿದ್ದಿದೆ. ಸಂಶೋಧನಾಸಕ್ತರು ಮುಂದೆ ಬಂದರೆ ಇಂತಹ ಕಾರ್ಯವನ್ನು ಮಾಡಬಹುದು. ಮಕ್ಕಳಿಗೆ ಚಿಕ್ಕಂದಿನಿಂದಲೇ ಬರೆಯುವ ಅಭ್ಯಾಸವನ್ನು ಬೆಳೆಸಬೇಕು. ಇದರಿಂದ ಪುಸ್ತಕ- ಸಾಹಿತ್ಯ ರಚನೆಗೆ ದಾರಿ ತೋರಿಸಬೇಕಾಗುತ್ತದೆ ಎಂದರು.
ಇಗ್ಗುತಪ್ಪ ದೇವಸ್ಥಾನ ಸಮಿತಿ ನಿರ್ದೇಶಕ ಪರದಂಡ ವಿಠಲ್ ಭೀಮಯ್ಯ ತಮ್ಮ ಮಾತಿನಲ್ಲಿ ಅಕಾಡೆಮಿಯ ನೂತನ ಯೋಜನೆಗೆ ಶುಭ ಕೋರಿದರು.
ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆದ 8ನೇ ಕೊಡವ ಪುಸ್ತಕ ಪತ್ತಾಯ ಸ್ಥಾಪನೆಯ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ ತಮ್ಮ ಮಾತಿನಲ್ಲಿ, ಅಮ್ಮತ್ತಿ ಕೊಡವ ಸಮಾಜದಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸಿರುವುದು ಅತ್ಯಂತ ಸಂತಸ ತಂದಿದೆ. ಇದರ ಸದುಪಯೋಗವನ್ನು ನಿಯಮಾವಳಿಗಳ ಅಡಿಯಲ್ಲಿ ಸಮಾಜದ ಸದಸ್ಯರಿಗೆ ನೀಡಲಾಗುವುದು ಎಂದರು.
ಕುಟ್ಟಂಡ ರೀಟಾ ಚಿಣ್ಣಪ್ಪ ಪ್ರಾರ್ಥಿಸಿದರು. ಪ್ರಕಾಶ್ ಗಣಪತಿ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ನಾಪಂಡ ಗಣೇಶ್ ನಿರೂಪಿಸಿದರು. ವೇದಿಕೆಯಲ್ಲಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯೆ ಚಂಬಾಂಡ ರೇಷ್ಮಾ ಭಿಮಯ್ಯ ಇದ್ದರು, ಅಕಾಡೆಮಿ ಸದಸ್ಯರಾದ ಕಂಬೆಯಂಡ ಡೀನಾ ಬೋಜಣ್ಣ, ಪಾನಿಕುಟ್ಟಿರ ಕುಟ್ಟಪ್ಪ, ಹಿರಿಯರಾದ ಕಾವಾಡಿಚಂಡ ಗಣಪತಿ, ಚಿಲ್ಲವಂಡ ಕಾವೇರಪ್ಪ, ಸಮಾಜದ ಕಾರ್ಯದರ್ಶಿ ಪಟ್ಟಡ ಧನು ಉತ್ತಯ್ಯ, ಮಾಚಿಮಂಡ ಸುರೇಶ್ ಅಯ್ಯಪ್ಪ, ನೆಲ್ಲಮಕ್ಕಡ ಸಂಪತ್ ದೇವಯ್ಯ, ಕೇಚಂಡ ಕುಶಾಲಪ್ಪ, ಇತರರು ಇದ್ದರು.
ಎಲ್ಲಡೆ ಜಿಲ್ಲಾ ಉತ್ಸವ ಆಚರಿಸುವಂತಾಗಬೇಕು; ಅಜ್ಜಿನಿಕಂಡ ಮಹೇಶ್ ನಾಚಯ್ಯ
ರಾಜ್ಯದ 31 ಜಿಲ್ಲೆಗಳಲ್ಲಿ ಪ್ರಸ್ತುತ 15 ಜಿಲ್ಲೆಗಳಲ್ಲಿ ಮಾತ್ರ ಸರಕಾರಿ ಅನುದಾನಿತ ಉತ್ಸವಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತೀ ಜಿಲ್ಲೆಗಳಲ್ಲಿ ಉತ್ಸವಗಳು ಸರಕಾರದ ಅನುದಾನದ ಮೇರೆ ನಡೆಯುವಂತಾಗಲಿ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಪ್ರಸ್ತಾಪಿಸಿದರು.
ಬೆಂಗಳೂರಿನಲ್ಲಿರುವ ವಿಕಾಸಸೌಧದಲ್ಲಿ ಕರೆಯಲಾಗಿದ್ದ ರಾಜ್ಯದ ‘ಸಾಂಸ್ಕøತಿಕ ನೀತಿ ಸಮಿತಿ’ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ತಮ್ಮ ಸಲಹೆಗಳನ್ನು ಪ್ರಸ್ತಾಪಿಸಿದ ಮಹೇಶ್ ನಾಚಯ್ಯ, ರಾಜ್ಯದ ಇತರೆ ಕೆಲವು ಜಿಲ್ಲೆಗಳಲ್ಲಿ ಆಚರಿಸಲ್ಪಡುತ್ತಿರುವ ಸರ್ಕಾರಿ ಅನುದಾನಿತ ಉತ್ಸವಗಳಂತೆ ಕೊಡಗಿನಲ್ಲಿ ಪುತ್ತರಿಯನ್ನು ಕನಿಷ್ಟ ಒಂದು ವಾರಗಳ ಕಾಲ ನಡೆಸುವಂತೆ ಹಾಗೂ ಪುತ್ತರಿಗೆ ಪ್ರಧಾನವಾಗಿರುವ ಮಂದ್‍ಗಳಿಗೆ ವಿಶೇಷ ಅನುದಾನ ಒದಗಿಸುವುದರ ಮೂಲಕ ಅವುಗಳ ರಕ್ಷಣೆಗೆ ಮುಂದಾಗಬೇಕಾಗಿ ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅಧ್ಯಕ್ಷತೆಯ ಸಭೆಯಲ್ಲಿ ಮಾತನಾಡಿದ ನಾಚಯ್ಯ ಸರ್ಕಾರವು ಅನುದಾನಿತ ಉತ್ಸವಗಳ ಕಾರ್ಯಕ್ರಮ ನಿಯೋಜನೆಯಲ್ಲಿ ಅಕಾಡೆಮಿ ಅಧ್ಯಕ್ಷರಿಗೆ ಅಧಿಕಾರ ನೀಡಬೇಕು. ಸಾಮರಸ್ಯ ಹಾಗೂ, ಸಹಬಾಳ್ವೆಯ ದಿಸೆಯಿಂದ ಸ್ಥಳೀಯ ಕಲಾವಿದರುಗಳಿಗೆ ಶೇಕಡ 50 ರಷ್ಟು ಅವಕಾಶ ಕಲ್ಪಿಸಬೇಕೆಂಬ ಬೇಡಿಕೆಗೆ ಸಹಮತ ವ್ಯಕ್ತ ಪಡಿಸಿದರು.
ಕೊಡವ ಸಂಸ್ಕೃತಿಯ ಮೂಲ ಸ್ಥಾನವಾಗಿರುವ ಮಂದ್, ಅಂಬಲಗಳನ್ನು ರಕ್ಷಿಸಿ, ಪೋಷಿಸುವಲ್ಲಿ, ಇಲ್ಲಿ ನಡೆಸುವ ಹಲವು ಪುತ್ತರಿ ಕೋಲಾಟ್, ಆಟ್-ಪಾಟ್‍ಗಳಂತ ಸಾಂಸ್ಕøತಿಕ ಚಟುವಟಿಕೆಗಳನ್ನು ಆರ್ಥಿಕ ಸಾಂಸ್ಕøತಿಕವಾಗಿ ಪ್ರೋತ್ಸಾಹಿಸಬೇಕು. ಕೆಲವೆಡೆಗಳಲ್ಲಿ ಮುಚ್ಚಿ ಹೋಗಿರುವ ಹಾಗೂ ಅತಿಕ್ರಮಣಗೊಂಡಿರುವ ಮಂದ್‍ಗಳನ್ನು ತೆರವುಗೊಳಿಸಲು ಸಹಕರಿಸಬೇಕು. ಪುತ್ತರಿ ಹಬ್ಬವು ಕೊಡವ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಆಚರಣೆಯಾಗಿದ್ದು, ಇದರಲ್ಲಿ ಜನಾಂಗ ಹಾಗೂ ನಾಡಿನ ಸಾಮರಸ್ಯ ಅಡಗಿದೆ. ಇಂತಹ ಸಾಂಸ್ಕøತಿಕ ಹಿನ್ನಲೆಯುಳ್ಳ ಪುತ್ತರಿ ಹಬ್ಬದ ಗತ ವೈಭವವು ಮರುಕಳುಹಿಸುವಲ್ಲಿ ಸಹಕಾರದಿಂದ ಸಕಲ ರೀತಿಯ ಸಹಕಾರ ಹಾಗೂ ಅನುದಾನದ ಅಗತ್ಯವಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ರಾಜ್ಯದ ಸಾಹಿತ್ಯ ಮತ್ತು ಸಂಸ್ಕøತಿಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಜವಾಬ್ದಾರಿ ಹೊತ್ತಿರುವ ಅತ್ಯಂತ ಸಂಕೀರ್ಣವೂ ನಾಡಿನ ಬಹುಸಂಸ್ಕøತಿಯ ಸಾಮೂಹಿಕ ನೆಲೆಯಲ್ಲಿ ಅತ್ಯಂತ ವಿಶಿಷ್ಟವೂ ಆದ ಇಲಾಖೆಯಾಗಿದೆ. ಈ ಇಲಾಖೆಯು ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಜನರ ಬಳಿ ಆಡಳಿತ ತೆಗೆದುಕೊಂಡು ಹೋಗುವ ಸಲುವಾಗಿ ನಾಲ್ಕು ಕಂದಾಯ ವಿಭಾಗಗಳಲ್ಲಿ ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಬೇಕು.
ಕೊಡವ, ತುಳು, ಅರೆಭಾಷೆ ಒಳಗೊಂಡಿರುವ ಭಾಷಾ ಅಕಾಡೆಮಿಗಳು ಭೌಗೋಳಿಕ ಮತ್ತು ಸಾಮಾಜಿಕ ಪರಿಮಿತಿಗಳನ್ನು ಮೀರಿ ಸರ್ವರನ್ನು ತಲುಪುವ ನಿಟ್ಟಿನಲ್ಲಿ ಭಾಷಾಭಿವೃದ್ಧಿ ಕೈಗೊಳ್ಳಲು ಶ್ರಮಿಸುವುದು. ಅಕಾಡೆಮಿಗಳ ಕಾರ್ಯ ಯೋಜನೆಗಳನ್ನು ಆರ್ಥಿಕವಾಗಿ ಬಲಪಡಿಸಲು ಆಯಾಯ ಅಕಾಡೆಮಿಗಳ ಕಾರ್ಯವ್ಯಾಪ್ತಿ ಪರಿಗಣಿಸಿ ಅಗತ್ಯಾನುಸಾರವಾಗಿ ಅನುದಾನವನ್ನು ಇಲಾಖೆಯ ವತಿಯಿಂದ ಒದಗಿಸಿಕೊಳ್ಳುವುದು.
ನಮ್ಮ ದೇಶದಲ್ಲಿ ಮಧ್ಯ ಪ್ರದೇಶದ ಅಮರ ಕಂಟಕದಲ್ಲಿ ಮಾತ್ರ ಒಂದು ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಇದೆ. ಇತರೆ ಯಾವುದೇ ರಾಜ್ಯದಲ್ಲಿ ಇಲ್ಲ. ಕರ್ನಾಟಕದ ವಿವಿಧ ಭಾಗಗಳಲ್ಲಿ ಬುಡಕಟ್ಟು ಜನಾಂಗಗಳು ಮತ್ತು ಸಂಸ್ಕøತಿಗಳು ವಿಸ್ತಾರವಾಗಿದ್ದು, ಅವುಗಳ ಅಧ್ಯಯನ ಮತ್ತು ಸಂಶೋಧನೆಗೆ ಒಂದು ಪ್ರತ್ಯೇಕ ವಿಶ್ವ ವಿದ್ಯಾಲಯದ ಅಗತ್ಯವಿದೆ ಎಂದು ಮಹೇಶ್ ನಾಚಯ್ಯ ಅವರು ಸಭೆಯಲ್ಲಿ ವಿವರಿಸಿದರು.
ಸಭೆಯಲ್ಲಿ ಎಲ್ಲಾ ಅಕಾಡೆಮಿಗಳ, ಪ್ರಾಧಿಕಾರದ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರು, ಸರ್ಕಾರದ ಅಧೀನ ಕಾರ್ಯದರ್ಶಿಗಳು, ಇಲಾಖಾಧಿಕಾರಿಗಳು ಹಾಜರಿದ್ದು ಈ ಮಹತ್ವದ ಸಭೆಯನ್ನು ಪುನಃ ಕರೆದು ಮರು ಪರಿಶೀಲಿಸುವಂತೆ ತೀರ್ಮಾನಿಸಲಾಯಿತು.