ನಿವೃತ್ತ ಶಿಕ್ಷಕ ಸಿ.ಟಿ.ಸೋಮಶೇಖರ್ ಕೆಪಿಸಿಸಿ ಜಿಲ್ಲಾ ಶಿಕ್ಷಕರ ಘಟಕದ ಅಧ್ಯಕ್ಷರಾಗಿ ನೇಮಕ
ಕುಶಾಲನಗರ: ಕೊಡಗು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರೂ ಆದ ಪ್ರೌಢಶಾಲಾ ನಿವೃತ್ತ ಶಿಕ್ಷಕ ಸಿ.ಟಿ.ಸೋಮಶೇಖರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಕೊಡಗು ಜಿಲ್ಲಾ ಶಿಕ್ಷಕರ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನೇಮಕ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷರ ಅನುಮೋದನೆ ಮೇರೆಗೆ ಸಿ.ಟಿ.ಸೋಮಶೇಖರ್ ಅವರನ್ನು ಕಾಂಗ್ರೆಸ್ ಪಕ್ಷದ ಜಿಲ್ಲಾ ಶಿಕ್ಷಕರ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಶಿಕ್ಷಕರ ಘಟಕದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮೂಲತಃ ಸೋಮವಾರಪೇಟೆ ಬಳಿಯ ಗೌಡಳ್ಳಿ ಬಳಿಯ ಚಿಕ್ಕ ತೋಳೂರು ಗ್ರಾಮದ ಕೃಷಿ ಕುಟುಂಬದ ಸೋಮಶೇಖರ್ ಅವರು ಸೋಮವಾರಪೇಟೆ ಸರ್ಕಾರಿ ಜೂನಿಯರ್ ಕಾಲೇಜಿನಿಂದ ವೃತ್ತಿ ಜೀವನ ಆರಂಭಿಸಿದ ಅವರು ಕಾನ್ ಬೈಲ್ , ಸುಂಟಿಕೊಪ್ಪ ಹಾಗೂ ಆಲೂರು ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕಳೆದ ಏಪ್ರಿಲ್ 2025 ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದು, ಕುಶಾಲನಗರ ಪಟ್ಟಣದ ನಿವಾಸಿಯಾಗಿದ್ದಾರೆ.
ಸೇವಾವಧಿಯಲ್ಲಿ ಆರಂಭದಿಂದಲೂ ಶಿಕ್ಷಕರ ಸಂಘಟನೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ಬಂದಿರುವ ಸೋಮಶೇಖರ್ ಅವರು ಮೊದಲಿಗೆ ಸೋಮವಾರಪೇಟೆ ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹಾಗೂ ಕೊಡಗು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ 16 ವರ್ಷಗಳ ಕಾಲ ಮೂರು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಶಾಲಾ ಮಕ್ಕಳ ಶೈಕ್ಷಣಿಕ ಕಲಿಕಾ ಪ್ರಗತಿಯೊಂದಿಗೆ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಶಿಕ್ಷಕರ ಸಂಘಟನೆಯ ನಾಯಕತ್ವದ ಮೂಲಕ ಶೈಕ್ಷಣಿಕ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸದಾ ಹೋರಾಟ ಮಾಡುತ್ತಾ ಬಂದಿರುವ ಸಿ.ಟಿ.ಸೋಮಶೇಖರ್ ಅವರನ್ನು ಜಿಲ್ಲಾ ಕಾಂಗ್ರೆಸ್ ಪಕ್ಷದ ಶಿಕ್ಷಕರ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದನ್ನು ಶಿಕ್ಷಕರ ಸಂಘಟನೆಯ ಪ್ರಮುಖರಾದ ಕೆ.ಕೆ.ಮಂಜುನಾಥ್ ಕುಮಾರ್ ಅವರು ಅಭಿನಂದಿಸಿದ್ದಾರೆ.