ಶನಿವಾರಸಂತೆ: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಶನಿವಾರಸಂತೆ:ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲಾ ಹಂತದಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ, ಇಂದು ಮೊಬೈಲ್ ಅವಶ್ಯಕತೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ಅದನ್ನೇ ಜೀವಾಳ ಮಾಡಿಕೊಂಡು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ಆಗಬಾರದು ಎಂದು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಅಭಿಪ್ರಾಯಪಟ್ಟರು. ಅವರು ಶನಿವಾರಸಂತೆ ವಿಘ್ನೇಶ್ವರ ವಿದ್ಯಾ ಸಂಸ್ಥೆ ಶ್ರೀ ವಿಘ್ನೇಶ್ವರ ಗೋಲ್ಡನ್ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಶಾಲಾ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ಸೋಮವಾರಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಪ್ರಾಥಮಿಕ ಶಾಲಾ 14ವಯೋಮಿತಿಯ ವಿದ್ಯಾರ್ಥಿಗಳ ಶನಿವಾರಸಂತೆ ವಲಯ ಮಟ್ಟದ ಕ್ರೀಡಾಕೂಟದ ಉದ್ಘಾಟ ಕಾರ್ಯಕ್ರಮದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ ಇಲಾಖೆ ಮತ್ತು ಸರಕಾರ ಪಠ್ಯ ಶಿಕ್ಷಣ ಮತ್ತು ಕ್ರೀಡಾ ಶಿಕ್ಷಣಕ್ಕೆ ಸಮಾನವಾಗಿ ಆದ್ಯತೆ ನೀಡುತ್ತಿದೆ.ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡೆಗಾಗಿ ಹೆಚ್ಚಿನ ಅನುದಾನ ನೀಡುತ್ತಿದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ರಾಜ್ಯ, ರಾಷ್ಟ ಮತ್ತು ಅಂರ್ತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದುಕೊಡುವ ಮೂಲಕ ಕ್ರೀಡಾ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವಂತೆ ಅವರು ಸಲಹೆ ನೀಡಿದರು.
ಶನಿವಾರಸಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹರೀಶ್ ಮಾತನಾಡಿ,ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದ್ದು ರಾಷ್ಟ ಅಂರ್ತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ ಎಂದರು. ಸರಕಾರ ಕ್ರೀಡಾಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ಶ್ರಮಿಸುತ್ತಿದೆ. ಆದರೆ ಪ್ರಸ್ತುತ ದಿನದಲ್ಲಿ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಕ್ರೀಡಾ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗುವಂತಾಗಬೇಕು ಎಂದರು.
ದುಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭವಾನಿ ಗುರು ಮಾತನಾಡಿ,ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರ ದೇಶದ ಪ್ರತೀಕಗಳಾಗಿದ್ದು ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಚಟುವಟಿಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುವಂತೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಘ್ನೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ. ಬಿ. ಲೊಕೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಘ್ನೇಶ್ವರ ವಿದ್ಯಾಸಂಸ್ಥೆ ಉಪಾಧ್ಯಕ್ಷ ಕೃಷ್ಣರಾಜ್, ನಿರ್ದೇಶಕ ರಾಮಣ್ಣ, ನಿತ್ಯ ನಿಧಿ, ವಿಗ್ನೇಶ್ವರ ಬಾಲಿಕ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶಿವಪ್ರಕಾಶ್, ದುಂಡಳ್ಳಿ ಗ್ರಾಮ ಪಂಚಾಯತ್ ಸದಸ್ಯ ಭೋಜಪ್ಪ, ಪೂರ್ಣಿಮಾ ಕಿರಣ್, ಭಾಗ್ಯ, ಸಮೂಹ ಸಂಪನ್ಮೂಲ ವ್ಯಕ್ತಿ ದಿನೇಶ್,ಜಯಕುಮಾರ್, ಸಣ್ಮುಖಯ್ಯ ಮುಂತಾದವರು ಇದ್ದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.