Kodagu

ಶನಿವಾರಸಂತೆ:ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯ ನಿವೃತ್ತಿಗೊಂಡ ಪ್ರಾಂಶುಪಾಲರಿಗೆ ಬೀಳ್ಕೊಡುಗೆ ಸಮಾರಂಭ

admincoorgdaily

ಶನಿವಾರಸಂತೆ:-ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ಥ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಾರ್ಗದರ್ಶಕರಾಗುವ ಮತ್ತು ನಾಯಕತ್ವದ ಗುರುತರ ಜಾವಾಬ್ದಾರಿಯನ್ನು ಹೊಂದಿರಬೇಕಾಗುತ್ತದೆ ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಅಭಿಪ್ರಾಯ ಪಟ್ಟರು. ಅವರು ಕಳೆದ 27 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಕಿಯರ ಪ್ರೌಢ ಶಾಲಾ ವಿಭಾಗ ಮತ್ತು ಪ.ಪೂ.ಕಾಲೇಜಿನ ಪ್ರಾಂಶುಪಾಲ ಟಿ.ಪಿ.ಶಿವಪ್ರಕಾಶ್ ಅವರಿಗೆ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಾಲಾ ಕಾಲೇಜಿನ ಮುಖ್ಯ ಶಿಕ್ಷಕನೊಬ್ಬ ವಿದ್ಯಾಸಂಸ್ಥೆಯ ಅಭಿವೃದ್ದಿಯ ಜೊತೆಯಲ್ಲಿ ಎಲ್ಲಾ ವಿಷಯಗಳನ್ನು ತಿಳಿದುಕೊಂಡಿರುವ ತತ್ವಜ್ಞಾನಿ ಆಗಬೇಕು. ಪಾಠ ಪ್ರವಚನ ಬೋಧಿಸುವುದ ಜೊತೆಯಲ್ಲಿ ಸಹ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶನ ಸಲಹೆಗಳನ್ನು ನೀಡುತ್ತಾ ಅವರನ್ನು ಶಾಲೆಯ ಶ್ರೇಯೋಭಿವೃದ್ದಿಗಾಗಿ ಸೆಳೆದುಕೊಳ್ಳುವ ಚೈತನ್ಯವನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಸದರಿ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿರುವ ಶಿವಪ್ರಕಾಶ್ ಅವರು ಸೇವಾ ಅವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ವಿದ್ಯಾಸಂಸ್ಥೆಯ ಎಲ್ಲಾ ರೀತಿಯ ಅಭಿವೃದ್ದಿಗೆ ಕಾರಣಕರ್ತರಾಗಿದ್ದಾರೆ ಎಂದು ಶ್ಲಾಘಿಸಿದರು.

ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್ ಮಾತನಾಡಿ,ಶಿಕ್ಷಕರು ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡರೆ ಮಾತ್ರ ಶಿಕ್ಷಣ ಸಂಸ್ಥೆ ಏಳಿಗೆ ಹೊಂದುತ್ತದೆ. ಈ ನಿಟ್ಟಿನಲ್ಲಿ ಶಿವಪ್ರಕಾಶ್ ಅವರು ಇದನ್ನು ಸದ್ಬಳಕೆ ಮಾಡಿಕೊಂಡಿರುವುದ್ದರಿಂದ ಸದರಿ ಶಿಕ್ಷಣ ಸಂಸ್ಥೆಯು ಶೈಕ್ಷಣಿಕವಾಗಿ ಮತ್ತು ಎಲ್ಲಾ ರೀತಿಯಲ್ಲೂ ಅಭಿವೃದ್ದಿ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಬೀಳ್ಕೊಡುಗೆ ಸಭಾಂರಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ನಿವೃತ್ತಿ ಹೊಂದಿದ ಪ್ರಾಂಶುಪಾಲ ಟಿ.ಪಿ.ಶಿವಪ್ರಕಾಶ್,ಸದರಿ ವಿದ್ಯಾಸಂಸ್ಥೆಯು ನನಗೆ ಎಲ್ಲಾವನ್ನು ಕೊಟ್ಟಿದೆ ನನ್ನ ಜವಾಬ್ದಾರಿಗೆ ನನ್ನ ಸಹ ಶಿಕ್ಷಕರು, ಆಡಳಿತ ಮಂಡಳಿಯವರು, ಪೋಷಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾರೂ ಸಹಕಾರ ಪ್ರೋತ್ಸಾಹ ನೀಡಿದ್ದರಿಂದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದ ಅವರು, ನಿವೃತ್ತಿಯ ನಂತರವು ನಾನು ಸದರಿ ವಿದ್ಯಾಸಂಸ್ಥೆಯೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತೇನೆ ಎಂದು ಹೇಳಿದರು.

ಸಮಾರಂಭದಲ್ಲಿ ಪಟ್ಟಣದ ವಿವಿಧ ವಿದ್ಯಾಸಂಸ್ಥೆಗಳು, ತಾಲೋಕಿನ ವಿವಿಧ ಶಿಕ್ಷಣ ಸಂಸ್ಥೆಗಳು, ಕ್ಷೇತ್ರ ಶಿಕ್ಷಣ ಇಲಾಖೆ ಸೇರಿದಂತೆ ಶನಿವಾರಸಂತೆ ಪ್ರೆಸ್ ಕ್ಲಬ್, ಸದರಿ ಶಿಕ್ಷಣ ಸಂಸ್ಥೆಯ ಶಿಕ್ಷಕರು ನಿವೃತ್ತ ಪ್ರಾಂಶುಪಾಲ ಶಿವಪ್ರಕಾಶ್ ಮತ್ತು ಅವರ ಪತ್ನಿ ಉಷಾ ಶಿವಪ್ರಕಾಶ್ ಅವರಿಗೆ ಸನ್ಮಾನಿಸಿ ಗೌರವಿಸಿದರು. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ನಿವೃತ್ತ ಶಿಕ್ಷಕನಿಗೆ ನಿವೃತ್ತ ಕೇಕ್ ಕತ್ತರಿಸಿ ಬೀಳ್ಕೊಟ್ಟರು.

ಸಮಾರಂಭದಲ್ಲಿ ವಿದ್ಯಾಸಂಸ್ಥೆ ನಿರ್ದೇಶಕಿ ನಿತ್ಯನಿಧಿ, ವಿದ್ಯಾಸಂಸ್ಥೆ ಪ್ರಮುಖ ಕೃಷ್ಣರಾಜ್, ವಿದ್ಯಾಸಂಸ್ಥೆ ನಿರ್ದೇಶಕರು, ಹಂಗಾಮಿ ಪ್ರಾಂಶುಪಾಲೆ ಸುಚಿತ್ರ, ಗೋಲ್ಡನ್ ಸ್ಕೂಲ್ ಮುಖ್ಯ ಶಿಕ್ಷಕ ಷಣ್ಮುಖಯ್ಯ ವಿವಿಧ ಶಾಲೆಯ ಮುಖ್ಯಸ್ಥರಾದ ಪೂವಯ್ಯ, ಸುಜಲಾದೇವಿ, ಸಾಬಾಸ್ಟನ್, ಮೋಹನ್‌ಕುಮಾರ್, ಮಾದಪ್ಪ, ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್‌ಕುಮಾರ್ ಶಾಲಾ ಸಹ ಶಿಕ್ಷಕ ಕೆ.ಪಿ.ಜಯಕುಮಾರ್ ಉಪನ್ಯಾಸಕರು, ಶಿಕ್ಷಕರು ಹಾಜರಿದ್ದರು.