ಸಿದ್ದಾಪುರ;ಕಾರ್ಮಿಕ ಮಹಿಳೆಯ ಮೇಲೆ ಕಾಡಾನೆ ದಾಳಿಗೆ ಯತ್ನ

May 21, 2026 - 23:34
May 21, 2026 - 23:35
 0  1.6k
ಸಿದ್ದಾಪುರ;ಕಾರ್ಮಿಕ ಮಹಿಳೆಯ ಮೇಲೆ ಕಾಡಾನೆ ದಾಳಿಗೆ ಯತ್ನ

ಸಿದ್ದಾಪುರ :- ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಪನಗೊಳ್ಳಿ ಪ್ರದೇಶದಿಂದ ತೋಟದ ಕೆಲಸ ಮುಗಿಸಿ ತೋಟದಿಂದ ಬಜೆಗೊಲ್ಲಿ ಪೈಸಾರಿ ಜಾಗದತ್ತ ತೆರಳುತ್ತಿದ್ದ ಕಾರ್ಮಿಕರ ಮೇಲೆ ಗುರುವಾರ ಸಂಜೆ ಕಾಡಾನೆ ದಾಳಿ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಘಟನೆಯ ವೇಳೆ ಕಾರ್ಮಿಕರು ಆತಂಕಗೊಂಡು ಓಡಿ ಪರಾರಿಯಾಗಲು ಯತ್ನಿಸಿದ ಸಂದರ್ಭ ಬಜೆಗೊಲ್ಲಿ ಪೈಸಾರಿ ನಿವಾಸಿ ಹಾಗೂ ಕಾರ್ಮಿಕೆ ಆಯಿಷಾ ಅವರು ಬಿದ್ದು ಸಣ್ಣಪುಟ್ಟ ಗಾಯಗೊಂಡಿದ್ದಾರೆ.

 ಗಾಯಾಳುವನ್ನು ತಕ್ಷಣ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

 ಘಟನೆ ಬಳಿಕ ತಿತುಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್, ಹಾಗೂ ಚೆನ್ನಂಗಿ ಸೆಕ್ಷನ್ ಉಪವಲಯ ಅರಣ್ಯಾಧಿಕಾರಿ ಪಿ.ಟಿ. ಶಶಿ ಅವರ ನೇತೃತ್ವದಲ್ಲಿ ಆರ್.ಆರ್.ಟಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಯನ್ನು ಕಾಡಿನತ್ತ ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಭಯದ ವಾತಾವರಣದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

 ಗ್ರಾಮ ವ್ಯಾಪ್ತಿಯಲ್ಲಿ ಹಲಸು ಹಾಗೂ ಮಾವಿನ ಹಣ್ಣು ಗಳು ಹೆಚ್ಚಿದ್ದು, ರಾತ್ರಿ ವೇಳೆ ಕಾಡಾನೆಗಳು ತೋಟಗಳಿಗೆ ಲಗ್ಗೆಯಿಡುತ್ತಿರುವುದರಿಂದ ರೈತರು ಹಾಗೂ ಕಾರ್ಮಿಕರು ಆತಂಕದಲ್ಲಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ತೋಟ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಹಟ್ಟಿಸುವ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ವಿರಾಜಪೇಟೆ ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಮಹಮ್ಮದ್ ಅಲಿ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 1
Sad Sad 3
Wow Wow 0