ತಂಗಿಗೆ ಮೋಸ ಮಾಡಿದ ಮೈದುನನ 'ಖಾಸಗಿ ಭಾಗವನ್ನೇ' ಕತ್ತರಿಸಿದ ಅತ್ತಿಗೆ!:

Oct 21, 2025 - 12:58
 0  2.3k
ತಂಗಿಗೆ ಮೋಸ ಮಾಡಿದ ಮೈದುನನ 'ಖಾಸಗಿ ಭಾಗವನ್ನೇ' ಕತ್ತರಿಸಿದ ಅತ್ತಿಗೆ!:
Photo credit: The Indian express

ಪ್ರಯಾಗ್‌ರಾಜ್‌, ಅ. 21: ತಂಗಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಪ್ರೇಮಸಂಬಂಧ ಬೆಳೆಸಿ ನಂತರ ಕೈಕೊಟ್ಟಿದ್ದಕ್ಕಾಗಿ ಕೋಪಗೊಂಡ ಮಹಿಳೆಯೊಬ್ಬಳು ತನ್ನ ಮೈದುನನ ಖಾಸಗಿ ಭಾಗವನ್ನು ಕತ್ತರಿಸಿದ ಭೀಕರ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

ಘಟನೆಯ ನಂತರ ಆರೋಪಿ ಅತ್ತಿಗೆ ಮಂಜುಳ ರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಕುಟುಂಬದೊಳಗಿನ ಭಾವನಾತ್ಮಕ ಪ್ರಕ್ಷುಬ್ಧತೆಯ ಪರಿಣಾಮವಾಗಿ ಈ ಆಘಾತಕಾರಿ ಕೃತ್ಯ ನಡೆದಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಅಕ್ಟೋಬರ್ 16ರ ರಾತ್ರಿ ಮೌಯಿಮಾದ ಮಲ್ಟಾನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಮ್ ಅಸರೆ ಅವರ ಪುತ್ರ ಉಮೇಶ್ (20) ತನ್ನ ಕೋಣೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಿರುಚಾಟದ ಶಬ್ದ ಕೇಳಿ ಕೋಣೆಗೆ ಧಾವಿಸಿದ ಕುಟುಂಬದವರು, ಉಮೇಶ್ ತೀವ್ರವಾಗಿ ಗಾಯಗೊಂಡು ನರಳುತ್ತಿದ್ದ ದೃಶ್ಯ ಕಂಡು ಬೆಚ್ಚಿಬಿದ್ದರು. ಆತನ ಖಾಸಗಿ ಭಾಗ ಕತ್ತರಿಸಲ್ಪಟ್ಟಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ, ಗಾಯಗಳ ತೀವ್ರತೆಯಿಂದ ಅವನ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಾರಂಭದಲ್ಲಿ ಘಟನೆಗೆ ಯಾರು ಕಾರಣ ಎಂಬುದು ಸ್ಪಷ್ಟವಾಗಿರಲಿಲ್ಲ. ನಂತರದ ತನಿಖೆಯಲ್ಲಿ ನಿಜ ಬೆಳಕಿಗೆ ಬಂತು ಎಂದು ತಿಳಿದು ಬಂದಿದೆ. 

ಉಮೇಶ್‌ನ ಅಣ್ಣ ಉದಯ್ ಮಂಜುಳ ಅವರನ್ನು ಮದುವೆಯಾಗಿದ್ದರು. ಬಳಿಕ ಉಮೇಶ್, ಮಂಜುಳನ ತಂಗಿಯೊಂದಿಗೆ ಪ್ರೇಮಸಂಬಂಧ ಬೆಳೆಸಿಕೊಂಡು ಮದುವೆಯಾಗುವುದಾಗಿ ಭರವಸೆ ನೀಡಿದ್ದನು. ದೈಹಿಕ ಸಂಪರ್ಕವು ಬೆಳೆದಿತ್ತು. ಆದರೆ ಕುಟುಂಬದ ವಿರೋಧದ ಹಿನ್ನೆಲೆ ಉಮೇಶ್ ಆ ಸಂಬಂಧದಿಂದ ಹಿಂದೆ ಸರಿದು, ಮತ್ತೊಬ್ಬಳನ್ನು ಇಷ್ಟಪಡುತ್ತಿದ್ದ.

ಈ ವಿಷಯದಿಂದ ಮಂಜುಳಾರ ತಂಗಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ತಂಗಿಯ ನೋವಿಗೆ ಮೈದುನನೇ ಕಾರಣ ಎಂದು ಭಾವಿಸಿದ ಮಂಜುಳ ಸೇಡು ತೀರಿಸಲು ಉಮೇಶ್ ಮೇಲೆ ಹಲ್ಲೆ ನಡೆಸಿ ಅವನ ಖಾಸಗಿ ಭಾಗವನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಮಂಜುಳ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

What's Your Reaction?

Like Like 4
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 2