ಸೋಮವಾರಪೇಟೆ;ಕೋವಿಯಿಂದ ಗುಂಡು ಹಾರಿಸಿ ಕೊಲೆಯತ್ನ ಪ್ರಕರಣ;ಆರೋಪಿ ಅಪರಾಧಿ ಎಂದು ತೀರ್ಪು ಪ್ರಕಟ
ಸೋಮವಾರಪೇಟೆ, ಏ. 23: ಕಳೆದ 2019 ರಲ್ಲಿ ನಡೆದಿದ್ದ ಗುಂಡೇಟು ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ಅಪರಾಧಿ ಎಂದು ತೀರ್ಪಿತ್ತಿದ್ದು, ಶಿಕ್ಷೆಯ ಪ್ರಮಾಣವನ್ನು ತಾ. 27ಕ್ಕೆ ಕಾಯ್ದಿರಿಸಿದೆ.
ಕಳೆದ 2019ರಂದು ಕಾನ್ವೆಂಟ್ ಬಾಣೆಯ ನಿವಾಸಿ ಸುಜಿತ್ ಎಂಬವರ ಮೇಲೆ ಅದೇ ಗ್ರಾಮದ ಗಣಪತಿ ಎಂಬಾತ ಕೋವಿಯಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಅಂದಿನ ಡಿ.ವೈ.ಎಸ್.ಪಿ. ಮುರಳೀಧರ್ ಅವರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ನೀಡಿದ್ದರು. ಕೆಲ ದಿನಗಳ ಕಾಲ ತಕೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನಂತರ ಜಾಮೀನಿನ ಮೇಲೆ ಆರೋಪಿ ಗಣಪತಿ ಹೊರಬಂದಿದ್ದು, ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.
ಇದೀಗ ಸುಜಿತ್ ಅವರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪ ಎದುರಿಸುತ್ತಿದ್ದ ಗಣಪತಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ ಮಡಿಕೇರಿಯ ಸೆಷನ್ ಜ್ಯೂನಿಯರ್ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ಗಣಪತಿಯನ್ನು ಅಪರಾಧಿ ಎಂದು ತೀರ್ಪಿತ್ತಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ತಾ. 27ಕ್ಕೆ ಕಾಯ್ದಿರಿಸಿದ್ದು, ಅದಕ್ಕೂ ಮುನ್ನ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಪಡೆಯುವಂತೆ ಜಿಲ್ಲಾ ಕಾರಾಗೃಹದ ಸೂಪರಿಂಟೆಂಡೆಂಟ್ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ.