ಸೋಮವಾರಪೇಟೆ: ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಲ್ಲುಗಣಿಕಾರಿಕೆ ನಿಲ್ಲಿಸಲು ಗ್ರಾಮಸ್ಥರ ಒತ್ತಾಯ

ಸೋಮವಾರಪೇಟೆ: ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಲ್ಲುಗಣಿಕಾರಿಕೆ ನಿಲ್ಲಿಸಲು ಗ್ರಾಮಸ್ಥರ ಒತ್ತಾಯ

ಸೋಮವಾರಪೇಟೆ : ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಗಳು ಹಲವಷ್ಟು ಅಕ್ರಮವಾಗಿದೆ. ಅವೈಜ್ಞಾನಿಕ ಕೋರೆಗಳಿಂದಾಗಿ ವಾತಾವರಣ ಕಲುಷಿತಗೊಂಡು ಗ್ರಾಮದ ಶೇ. ೯೦ರಷ್ಟು ಮಂದಿಗೆ ಶ್ವಾಸಕೋಶ ತೊಂದರೆ ಎದುರಾಗಿದೆ. ದಯವಿಟ್ಟು ಕಲ್ಲುಗಣಿಗಾರಿಕೆ ನಿಲ್ಲಿಸಿ; ಇಲ್ಲವೇ ದಯಾರಣ ನೀಡಿ ಎಂದು ಹೊಸಳ್ಳಿ ಗ್ರಾಮಸ್ಥರು, ವಿವಿಧ ಇಲಾಖಾಧಿಕಾರಿಗಳೆದುರು ಅಸಹಾಯಕ ಪರಿಸ್ಥಿತಿಯೊಂದಿಗೆ ಬೇಡಿಕೆ ಮುಂದಿಟ್ಟರು.

 ಈ ಭಾಗದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಗಳಿಂದ ಸಾರ್ವಜನಿಕ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಭಾರೀ ಸಮಸ್ಯೆ ಸೃಷ್ಟಿಯಾಗಿದೆ. ಅತೀ ಹೆಚ್ಚು ಭಾರದ ವಾಹನಗಳ ಸಂಚಾರದಿಂದ ರಸ್ತೆಗಳು ಗುಂಡಿ ಪಾಲಾಗಿವೆ. ಈ ಭಾಗದಲ್ಲಿ ಬದುಕು ದುಸ್ತರವಾಗಿದೆ ಎಂದು ಗ್ರಾಮಸ್ಥರು, ಅಧಿಕಾರಿಗಳೆದುರು ಅಳಲು ತೋಡಿಕೊಂಡರು.

 ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ, ವಿವಿಧ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ, ಹೊಸಳ್ಳಿ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಸಭೆಯಲ್ಲಿ, ಕಲ್ಲುಗಣಿಗಾರಿಕೆಯ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಕಲ್ಲು ಗಣಿಗಾರಿಕೆಯಿಂದ ಗ್ರಾಮದ ಶೇ. ೯೦ ರಷ್ಟು ಜನರಲ್ಲಿ ಶ್ವಾಸಕೋಶ ಸಂಬಂಧಿತ ತೊಂದರೆ ಕಂಡು ಬಂದಿದ್ದು, ಕಲ್ಲು ಗಣಿಗಾರಿಕೆ ನಿಲ್ಲಿಸಿ- ಇಲ್ಲವೇ ದಯಮಾರಣ ನೀಡಿ ಎಂದು ಹೊಸಳ್ಳಿ ಗ್ರಾಮಸ್ಥರು ಒಮ್ಮತದ ಬೇಡಿಕೆ ಮುಂದಿಟ್ಟರು.

 ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು ೧೭ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರಲ್ಲಿ ಬಹುತೇಕ ಗಣಿಗಾರಿಕೆ ಅಕ್ರಮವಾಗಿದೆ. ಈ ಬಗ್ಗೆ ಹಲವು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಿದ್ದರೂ ಇಲ್ಲಿಯವರೆಗೂ ಯಾವುದೇ ಕ್ರಮ ಆಗಿಲ್ಲ. ಅಕ್ರಮ ಗಣಿಗಾರಿಕೆ ನಡೆಸುವವರೊಂದಿಗೆ ಇಲಾಖೆಗಳ ಅಧಿಕಾರಿಗಳು ಶಾಮೀಲಾಗಿದ್ದಾರೆ. ಗ್ರಾಮಸ್ಥರ ಯಾವುದೇ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಬೋಜೇಗೌಡ ಆರೋಪಿಸಿದರು. ಗ್ರಾಮೀಣ ರಸ್ತೆಯಲ್ಲಿ ಭಾರ ಮಿತಿ ಇಲ್ಲದೆ ಹತ್ತು ಚಕ್ರದ ಟಿಪ್ಪರ್‌ಗಳು ಓಡಾಡುತ್ತಿವೆ.

 ಸಂಜೆ ವೇಳೆಯಲ್ಲಿ ಎಲ್ಲಾ ಕೋರೆಗಳಲ್ಲಿ ಬ್ಲಾಸ್ಟಿಂಗ್ ನಡೆಯುತ್ತಿದೆ. ಅಕ್ಕಪಕ್ಕದ ಮನೆಗಳು ಬಿರುಕು ಬಿಟ್ಟಿವೆ. ಕ್ರಷರ್‌ಗಳಿಂದ ಧೂಳು ಬರುತ್ತಿದ್ದು, ವ್ಯವಸಾಯ ಮಾಡಲು ಆಗುತ್ತಿಲ್ಲ. ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಜನಜೀವನ ನರಕಯಾತನೆಯಾಗಿದೆ. ಅಧಿಕಾರಿಗಳೇ ಮುಂದೆ ನಿಂತು ಈ ಭಾಗದ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ ಎಂದು ಬೋಜೇಗೌಡ ವಾಸ್ತವಾಂಶವನ್ನು ಬಿಚ್ಚಿಟ್ಟರು.

ಈ ಭಾಗದಲ್ಲಿ ಸಿ ಮತ್ತು ಡಿ ವರ್ಗದ ಜಮೀನಿದೆ. ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಲ್ಪಟ್ಟಿರುವ ಜೇನುಕಲ್ಲು ಬೆಟ್ಟ ಹತ್ತಿರವಿದೆ. ಇದರೊಂದಿಗೆ ಮೀಸಲು ಅರಣ್ಯಕ್ಕೆ ಹೊಂದಿಕೊಂಡ ಜಾಗದಲ್ಲಿ ಕ್ರಷರ್ ನಡೆಯಿತ್ತಿದೆ. ಕ್ರಷರ್‌ಗೆ ಸಂಬಂಧಿಸಿದಂತೆ ಹತ್ತಾರು ನಿಯಮಗಳಿದ್ದರೂ, ಎಲ್ಲವನ್ನೂ ಗಾಳಿಗೆ ತೂರಿ ಗಣಿಗಾರಿಕೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಸಭೆಯಲ್ಲಿ ಕೇಳಿ ಬಂದ ಆರೋಪಗಳ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ, ಕಾನೂನಿನನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ತಿಳಿಸಿದರು.

ಈ ಸಂದರ್ಭ ಈಗಲೇ ಗಣಿಗಾರಿಕೆ ನಡೆಯುತ್ತಿರುವ ಸ್ಥಳವನ್ನು ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರು. ಗ್ರಾಮಸ್ಥರ ಕೋರಿಕೆಯಂತೆ ಎಲ್ಲಾ ಗಣಿಗಾರಿಕೆ ಸ್ಥಳವನ್ನು ಪರಿಶೀಲನೆ ಮಾಡಲಾಯಿತು. ಪರಿಶೀಲನೆ ವೇಳೆ ಕೆಲವೊಂದು ಗಣಿಗಾರಿಕೆ ನಿಯಮ ಉಲ್ಲಂಘಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂತು. ಕೂಡಲೇ ಇವುಗಳ ದಾಖಲೆ ಪರಿಶೀಲಿಸಿ ನಿಯಮ ಬಾಹಿರವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ತಹಶೀಲ್ದಾರ್ ಕೃಷ್ಣಮೂರ್ತಿ ಆದೇಶಿಸಿದರು.

 ಬಾಕಿ ಉಳಿದ ಕೋರೆಗಳನ್ನು ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿ, ಲೋಪ ದೋಷ ಕಂಡು ಬಂದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಕೃಷ್ಣಮೂರ್ತಿ ಭರವಸೆ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್, ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಹದೇವ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರೋಜಾ, ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಕುಮಾರ್, ಆರ್.ಟಿ.ಓ., ಸರ್ವೇ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳು, ಗ್ರಾಮದ ಪ್ರಮುಖರಾದ ಸಂಪತ್, ಸಚಿನ್, ಅನಿಲ್, ತಿಮ್ಮಯ್ಯ ಸೇರಿದಂತೆ ಇತರರು ಇದ್ದರು.