ಏಕಾಏಕಿ ಗುಹ್ಯ ಮದರಸ ಪಠ್ಯ ಕ್ರಮ ಬದಲಾವಣೆ: ಮದರಸ ಮುಂಭಾಗ ಪ್ರತಿಭಟನೆ

Apr 29, 2026 - 14:29
 0  1.7k
ಏಕಾಏಕಿ ಗುಹ್ಯ ಮದರಸ ಪಠ್ಯ ಕ್ರಮ ಬದಲಾವಣೆ:  ಮದರಸ ಮುಂಭಾಗ ಪ್ರತಿಭಟನೆ

ಸಿದ್ದಾಪುರ: ಸಮೀಪದ ಗುಹ್ಯ ನೂರುಲ್ ಇಸ್ಲಾಂ ಮದರಸಾ ಪಠ್ಯ ಕ್ರಮ (ಪುಸ್ತಕ) ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಮದರಸಾ ಮುಂಭಾಗದಲ್ಲಿ ವಿದ್ಯಾರ್ಥಿಗಳು ಹಾಗೂ ಮಹಲ್ ನಿವಾಸಿಗಳು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಗುಹ್ಯ ಮಸೀದಿ ಆಡಳಿತ ಮಂಡಳಿ ತರಾತುರಿಯಲ್ಲಿ ಪಠ್ಯ ಕ್ರಮವನ್ನು ಬದಲಾಯಿಸಿದ್ದಾರೆಂದು ಆರೋಪಿಸಿದ ಪ್ರತಿಭಟನಾಕಾರರು ಈ ಹಿಂದೆ ಇದ್ದ ಪಠ್ಯ ಕ್ರಮವನ್ನೆ ಮುಂದುವರಿಸಬೇಕೆಂದು ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ಸಿದ್ದಾಪುರ ಪಿ.ಎಸ್.ಐ ಮಂಜುನಾಥ್ ಹಾಗೂ ಸಿಬ್ಬಂದಿಗಳು ಆಡಳಿತ ಮಂಡಳಿ ಹಾಗೂ ಪ್ರತಿಭಟನಾಕಾರರ ಜೊತೆಗೆ ಚರ್ಚಿಸಿ, ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕಿವಿ ಮಾತು ಹೇಳಿದರು.

 ಮಸೀದಿಯ ಎಲ್ಲಾ ಸದಸ್ಯರನ್ನು ಒಳಗೊಂಡ ಮಹಾಸಭೆ ನಡೆಸುವುದರ ಮೂಲಕ ಪಠ್ಯ ಕ್ರಮ ಬದಲಾಯಿಸುವ ಬಗ್ಗೆ ಚರ್ಚಿಸಿ, ವಕ್ಫ್ ಮಂಡಳಿಯ ಅನುಮತಿಯೊಂದಿಗೆ ಮುಂದುವರೆಯುವಂತೆ ಹಾಗೂ ಅಷ್ಟರವರೆಗೆ ಯಥಾಸ್ಥಿತಿ ಮುಂದುವರೆಯುವಂತೆ ಪಿ.ಎಸ್.ಐ ಸಲಹೆ ನೀಡಿದರು.

 ಅಲ್ಲದೆ ಯಾವುದೇ ರೀತಿಯಲ್ಲೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪಿ.ಎಸ್.ಐ ಮಂಜುನಾಥ್ ಎಚ್ಚರಿಸಿದರು.

ಪಠ್ಯ ಕ್ರಮ ಬದಲಾವಣೆ ಬಗ್ಗೆ ಮಹಲ್ ನಿವಾಸಿಗಳ ಅಭಿಪ್ರಾಯ ಪಡೆಯಲಾಗಿದ್ದು, ಬಹುತೇಕರು ಬದಲಾವಣೆಗೆ ಒಪ್ಪಿಗೆ ನೀಡಿದ ಕಾರಣ ಪಠ್ಯ ಕ್ರಮ ಬದಲಾವಣೆಗೆ ಮುಂದಾಗಿತ್ತು.

ಇದೀಗ ಕೆಲವರಿಂದ ವಿರೋಧ ವ್ಯಕ್ತವಾಗಿರುವುದರಿಂದ ಶೀಘ್ರದಲ್ಲೇ ಆಡಳಿತ ಮಂಡಳಿ ಸಭೆ ನಡೆಸಿ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಮಸೀದಿ ಅಧ್ಯಕ್ಷ ಸಿ.ಯು ಮುಸ್ತಫಾ ತಿಳಿಸಿದರು. ಈ ಸಂದರ್ಭ ಮಸೀದಿ ಕಾರ್ಯದರ್ಶಿ ಅಶ್ರಫ್, ಮಹಲ್ ನಿವಾಸಿಗಳಾದ ಹನೀಫ, ಎರಮು, ಉಮ್ಮರ್, ಅಬ್ದುಲ್ ಖಾದರ್, ಹಂಸ, ರಶೀದ್ ಮತ್ತಿತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 2
Wow Wow 0