ತಲಕಾವೇರಿ | ಕಸ ಎಸೆದ ಪೊಲೀಸರಿಂದಲೇ ಕಸ ತೆಗೆಸಿ ಸ್ಚಚ್ಛತೆಯ ಪಾಠ ಹೇಳಿದ ಸ್ಥಳೀಯರು; ವೀಡಿಯೊ ವೈರಲ್

ತಲಕಾವೇರಿ | ಕಸ ಎಸೆದ ಪೊಲೀಸರಿಂದಲೇ ಕಸ ತೆಗೆಸಿ ಸ್ಚಚ್ಛತೆಯ ಪಾಠ ಹೇಳಿದ ಸ್ಥಳೀಯರು; ವೀಡಿಯೊ ವೈರಲ್

ಮಡಿಕೇರಿ: ಕಾವೇರಿ ಸಂಕ್ರಮಣದ ಸಂದರ್ಭದಲ್ಲಿ ಕೊಡಗಿನ ತಲಕಾವೇರಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಎಸೆದಿದ್ದ ಕಸವನ್ನು ನೋಡಿದ ಸ್ಥಳೀಯ ಜನರು, ಅವರ ಕೈಯ್ಯಿಂದಲೇ ಎತ್ತಿಸಿದ ಘಟನೆ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

 ಕಾವೇರಿ ಸಂಕ್ರಮಣದ ಹಿನ್ನೆಲೆಯಲ್ಲಿ ಶುಕ್ರವಾರ ತಲಕಾವೇರಿಯಲ್ಲಿ ಸಾವಿರಾರು ಭಕ್ತರು ಧಾರ್ಮಿಕ ವಿಧಿ-ವಿಧಾನಗಳಲ್ಲಿ ಭಾಗವಹಿಸಿದ್ದರು. ಭಕ್ತರ ಸುರಕ್ಷತೆ ಮತ್ತು ನಿಯಂತ್ರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕರ್ತವ್ಯದಲ್ಲಿದ್ದರು. ಇದೇ ವೇಳೆ, ಕರ್ತವ್ಯದಲ್ಲಿದ್ದ ಕೆಲ ಹೊರ ಜಿಲ್ಲೆಯ ಪೊಲೀಸ್ ಸಿಬ್ಬಂದಿ ತಮ್ಮ ವಾಹನದಲ್ಲಿದ್ದ ಪ್ಲಾಸ್ಟಿಕ್ ಮತ್ತು ಆಹಾರ ಸಾಮಗ್ರಿಗಳ ಪ್ಯಾಕೆಟ್ಗಳಂತಹ ಕಸವನ್ನು ರಸ್ತೆ ಬದಿಯಲ್ಲಿ ಎಸೆದಿದ್ದರು ಎನ್ನಲಾಗಿದೆ.

ಈ ಘಟನೆ ಸ್ಥಳೀಯರ ಗಮನಕ್ಕೆ ಬಂದ ತಕ್ಷಣ ಪ್ರತಿಕ್ರಿಯಿಸಿದ ಸ್ಥಳೀಯರು ಪೊಲೀಸರಿಗೆ ಮನವರಿಕೆ ಮಾಡಿ, ಕಸವನ್ನು ಅವರಿಂದಲೇ ಎತ್ತಿಸಿದರು. ಈ ಘಟನೆಗೆ ಸಂಬಂಧಿಸಿದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.ವೀಡಿಯೋ ವೀಕ್ಷಿಸಿದ ಅನೇಕರು ಸ್ಥಳೀಯರ ಧೈರ್ಯ ಮತ್ತು ಜವಾಬ್ದಾರಿಯನ್ನು ಶ್ಲಾಘಿಸಿದ್ದಾರೆ.

ಒಬ್ಬ ಬಳಕೆದಾರ ಕಮೆಂಟ್ನಲ್ಲಿ, “ಜನರು ಪ್ರಶ್ನೆ ಮಾಡಲು ಆರಂಭಿಸಿದಾಗ ದೇಶ ನಿಜವಾದ ಅರ್ಥದಲ್ಲಿ ಪ್ರಗತಿ ಕಾಣುತ್ತದೆ” ಎಂದು ಬರೆದರೆ, ಮತ್ತೊಬ್ಬರು “ಪ್ರತಿ ಗ್ರಾಮದಲ್ಲೂ ಕೊಡಗಿನವರಂತೆಯೇ ನಾಗರಿಕರು ವರ್ತಿಸಿದರೆ ಭಾರತ ಸ್ವಚ್ಛ ಹಾಗೂ ಸುಂದರ ದೇಶವಾಗುವುದು ಖಚಿತ” ಎಂದು ಪ್ರತಿಕ್ರಿಯಿಸಿದ್ದಾರೆ.