ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಅ.24ರಿಂದ ನ.16ರವರೆಗೆ 15ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ

ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಅ.24ರಿಂದ ನ.16ರವರೆಗೆ 15ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ

ಮಡಿಕೇರಿ: ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಅ.೨೪ರಿಂದ ನ.೧೬ರವರೆಗೆ ೧೫ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ತಲಕಾವೇರಿಯಿಂದ ಪೊಂಪ್‌ಹಾರ್‌ವರೆಗೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ತಿಳಿಸಿದರು.

 ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್, ನಮಾಮಿ ಕಾವೇರಿ ಆಶ್ರಯದಲ್ಲಿ ಕಾವೇರಿ ನದಿ ಸಂರಕ್ಷಣೆಯ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ ಸುಮಾರು ೪೦ಕ್ಕೂ ಅಧಿಕ ಸಾಧುಸಂತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅ.೨೪ರಂದು ಬೆಳಗ್ಗೆ ೮ ಗಂಟೆಗೆ ತಲಕಾವೇರಿಯಲ್ಲಿ ಕಾವೇರಿ ಯಾತ್ರೆಗೆ ಚಾಲನೆ ನೀಡಲಾಗುವುದು. ೯ ಗಂಟೆಗೆ ವಿರಾಜಪೇಟೆ ಅಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ದಿವ್ಯ ಸಾನಿಧ್ಯದಲ್ಲಿ ಕಾವೇರಿ ಜಾಗೃತಿ ಯಾತ್ರೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಚಾಲನೆ ನೀಡಲಿದ್ದಾರೆ. ವನ್ಯ ಜೀವಿ ಮಂಡಳಿಯ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಕಾರ್ಯಕ್ರಮದ ಭಿತ್ತಿ ಪತ್ರ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ಸಂಜೆ ೪ ಗಂಟೆಗೆ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ೧೭೮ನೇ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ. ಅ.೨೫ರಂದು ಬೆಳಗ್ಗೆ ರಾಮನಾಥಪುರ, ನಂತರ ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದ ಬಳಿ ಮಹಾ ಆರತಿ ನಡೆಯಲಿದೆ. ಅ.೨೬ರಂದು ತಮಿಳುನಾಡಿನತ್ತ ಯಾತ್ರೆ ಸಾಗಲಿದ್ದು, ಅ.೧೬ರಂದು ತಮಿಳುನಾಡಿನ ಪೊಂಪ್‌ಹಾರ್‌ನಲ್ಲಿ ಕಾವೇರಿ ನದಿ ಮತ್ತು ಬಂಗಾಳಕೊಲ್ಲಿ ಸಮುದ್ರ ಸಂಗಮದಲ್ಲಿ ಆರತಿ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕಾವೇರಿ ಜಾಗೃತಿ ಯಾತ್ರೆ ಸಮಿತಿ ಸ್ಥಾಪಕ ಚಿ.ನಾ.ಸೋಮೇಶ್, ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ವಾಂಚೀರ ಮನು ನಂಜುಂಡ, ಕುಶಾಲನಗರ ನಮಾಮಿ ಕಾವೇರಿ ಅಧ್ಯಕ್ಷೆ ವನಿತಾ ಚಂದ್ರಮೋಹನ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಆರ್ಯ ವೈಶ್ಯ ಮಂಡಳಿ ನಿರ್ದೇಶಕ ವಿ.ವೈಷಕ್ ಉಪಸ್ಥಿತರಿದ್ದರು.