ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಎಮ್ಮೆಮಾಡು ಮಖಾಂ ಉರೂಸ್ ಸಂಪನ್ನ

Apr 26, 2026 - 12:38
 0  211
ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಎಮ್ಮೆಮಾಡು ಮಖಾಂ ಉರೂಸ್ ಸಂಪನ್ನ

ವರದಿ :ಝಕರಿಯ ನಾಪೋಕ್ಲು

 ನಾಪೋಕ್ಲು :ಏ.17ರಿಂದ ಆರಂಭಗೊಂಡ ಕೊಡಗಿನ ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಎಮ್ಮೆಮಾಡುವಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಸೂಫಿ ಶಹೀದ್ ಮತ್ತು ಸೈಯ್ಯಿದ್ ಹಸನ್ ಸಖಾಫ್ ಹಳ್ರಮಿ ಹಾಗೂ ಇತರ ಮಹಾನುಭಾವರ ಹೆಸರಿನಲ್ಲಿ ನಡೆದ ಉರೂಸ್ ಸಮಾರಂಭವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಸಂಪನ್ನಗೊಂಡಿತು.

ಏ.24ರ ಶುಕ್ರವಾರ ಜುಮಾ ನಮಾಝಿನ ಬಳಿಕ ದಫ್ ಪ್ರದರ್ಶನದೊಂದಿಗೆ ದರ್ಗಾಕ್ಕೆ ತೆರಳಿದ ಸಮುದಾಯ ಭಾಂದವರು ಸಯ್ಯಿದ್ ಮುಹಮ್ಮದ್ ತುರಾಬ್ ತಂಙಳ್ ಅಲ್ ಅಝ್ಹರಿ ಕ್ಯಾಲಿಕೆಟ್ ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

 ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಶಿಹಾಬುದ್ದೀನ್ ಸಖಾಫಿ ಅಲ್ ಐದರೂಸಿ ತಂಙಳ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಎಸ್ ವೈ ಎಸ್ ರಾಜ್ಯ ಉಪಾಧ್ಯಕ್ಷರಾದ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಎಮ್ಮೆಮಾಡು ಉದ್ಘಾಟಿಸಿ ಮಾತನಾಡಿದರು.

ಮರ್ಕಝ್ ಮುದರ್ರಿಸ್ ಹಾಗೂ ಕೇರಳ ಹಜ್ ಸಮಿತಿ ಚೇರ್ಮೆನ್ ಅಡ್ವಕೇಟ್ ಡಾ. ಹುಸೈನ್ ಸಖಾಫಿ ಚುಳ್ಳಿಕೋಡ್ ಮುಖ್ಯ ಪ್ರಭಾಷಣ ನಡೆಸಿ ಸೂಫಿ ಶಹೀದ್ ಮಹಾನುಬಾವರ ಆದರ್ಶ ಪವಾಡಗಳ ಬಗ್ಗೆ ವಿವರಿಸಿ,ಇಸ್ಲಾಂನ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸಮುದಾಯವು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವ ಜೊತೆಗೆ ಸಮುದಾಯದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಆಲಂಕರಿಸಿ ದೇಶಕ್ಕೆ ಕೀರ್ತಿ ತರಬೇಕೆಂದರು.

 ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಎಮ್ಮೆಮಾಡು ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ ಸಿಗಲು ಕಾರಣರಾದ ಶಾಲೆಯ ಮುಖ್ಯ ಶಿಕ್ಷಕ ಪ್ರಸನ್ನ ಕುಮಾರ್ ಅವರನ್ನು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

 ಉರೂಸ್ ಅಂಗವಾಗಿ ಸಂಜೆ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಜಿಲ್ಲೆ,ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪುನೀತರಾದರು.

 ಈ ಸಂದರ್ಭ ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷರಾದ ಹುಸೈನ್ ಸಖಾಫಿ,ಸಯ್ಯಿದ್ ಅಝೀಝ್ ತಂಙಳ್,ಸಯ್ಯಿದ್ ಸಮೀಹ್ ತಂಙಳ್,ಎಸ್ ವೈ ಎಸ್ ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ,ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ,ಜಮಾಅತ್ ಖತೀಬರಾದ ರಾಝಿಕ್ ಫೈಝಿ, ಮುದರ್ರಿಸ್ ಹಂಝ ಸಖಾಫಿ, ಸಹೀದಿಯ ಅನಾಥಾಲಯದ ಉಪಾಧ್ಯಕ್ಷ ಅಶ್ರಫ್ ಬಿ.ಯು, ಕೆಎಂಜೆ ಎಮ್ಮೆಮಾಡು ಝೋನ್ ಅಧ್ಯಕ್ಷ ಅಬ್ಬಾಸ್ ಸಖಾಫಿ ಪಡಿಯಾಣಿ,ನಾಪೋಕ್ಲು ಜಮಾಅತ್ ಮುದರ್ರಿಸ್ ಇಬ್ರಾಹಿಂ ಖಲೀಲ್ ಸಖಾಫಿ,ಕೊಳಕೇರಿ ಜಮಾಅತ್ ಅಧ್ಯಕ್ಷ ಅಶ್ರಫ್,ಕೊಟ್ಟಮುಡಿ ಆಝಾದ್ ನಗರ ಅಧ್ಯಕ್ಷ ಅಹ್ಮದ್ ಪಿ.ಯು, ಪಡಿಯಾಣಿ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್, ಪಳ್ಳಿರಾಣೆ ಅಧ್ಯಕ್ಷ ಅಬ್ದುಲ್ ಖಾದರ್, ತಾವೂರ್ ಅಧ್ಯಕ್ಷ ಉಸ್ಮಾನ್ ಹಾಜಿ, ಚೆರಿಯಪರಂಬು ಅಧ್ಯಕ್ಷ ಪಿ. ಎ.ಅಹ್ಮದ್,ಚೇರಂಬಾಣೆ ಅಧ್ಯಕ್ಷ ಹಾರಿಸ್, ಬೆಟ್ಟಗೇರಿ ಅಧ್ಯಕ್ಷ ಮೊಯ್ದು ಕುಂಞಿಹಾಜಿ, ಬಲಮುರಿ ಜಮಾಅತ್ ಅಧ್ಯಕ್ಷ ಅಬ್ದುಲ್ ರಹ್ಮನ್,ಮುದರ್ರಿಸ್ ಅಬ್ದುಲ್ ರಹ್ಮಾನ್ ಅನ್ವಾರಿ ಅಲ್ ಅಹ್ಸನಿ,ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು,ಧಾರ್ಮಿಕ, ರಾಜಕೀಯ ನೇತಾರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಬಿ. ಯು.ಅಶ್ರಫ್ ನಿರೂಪಿಸಿದರು. ಎಮ್ಮೆಮಾಡು ಜಮಾಅತ್ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಝಕರಿಯ ಅಲ್ ಐದರೂಸಿ ತಂಙಳ್ ಸ್ವಾಗತಿಸಿ,ಜಮಾಅತ್ ಸದಸ್ಯ ಮನಾಫ್ ಮುಸ್ಲಿಯಾರ್ ಸರ್ವರನ್ನು ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0