ಕನ್ನಡಿಯನ್ನು ಕಿಟಕಿಯನ್ನಾಗಿಸುವಂತ ಪ್ರಕ್ರಿಯೆ ಶಿಕ್ಷಣದಿಂದ ಸಾಧ್ಯ: ಖಜಾಂಚಿ ಅಂತೋಣಿ ವಿಜಯನ್ ಅಲ್ವಾರೀಸ್
ಮಡಿಕೇರಿ:ಕನ್ನಡಿಯನ್ನು ಕಿಟಕಿಯನ್ನಾಗಿಸುವಂತ ಪ್ರಕ್ರಿಯೆ ಶಿಕ್ಷಣ. ನಮ್ಮೊಳಗಿರುವ ಪ್ರತಿಭೆಯನ್ನು ಗುರುತಿಸಲು ಶಿಕ್ಷಣ ಅತ್ಯಮೂಲ್ಯ ಕಾರ್ಯವೆಂದು ಕೊಡಗು ಜಿಲ್ಲಾ ಪ್ರಾಂಶುಪಾಲ ಸಂಘದ ಖಜಾಂಚಿ ಅಂತೋಣಿ ವಿಜಯನ್ ಅಲ್ವಾರೀಸ್ ಅವರು ತಿಳಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮತ್ತು ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರುಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು 2025-26 ನೇ ಸಾಲಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆ ಹಮ್ಮಿಕೊಳ್ಳುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಪ್ರಾಂಶುಪಾಲ ಸಂಘ ಬಹಳ ಸಹಕಾರಿಯಾಗಿರುವುದು ಸ್ಮರಣೀಯ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸನ್ಮಾನಿಸುವುದು ಅತ್ಯಂತ ಗೌರವಯುತ ಕಾರ್ಯ. ಹಾಗೆಯೇ ಪೋಷಕರು ಅದಕ್ಕಾಗಿ ಶ್ರಮಿಸುತ್ತಿರುವುದು ಕೂಡ ಗಮನಾರ್ಹವೆಂದು ತಿಳಿಸಿದರು. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತನ್ನ ಸಂತೋಷವನ್ನು ತ್ಯಾಗ ಮಾಡಿ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಿ ವಿದ್ಯಾರ್ಥಿಗಳನ್ನು ಹಂತ-ಹಂತವಾಗಿ ತಯಾರು ಮಾಡುತ್ತಿರುವ ಪೋಷಕರಿಗೆ ನಮನ ಎಂದರು. ಇಲಾಖೆ ವತಿಯಿಂದ ಯುವ ಸಂಸತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ, ಇದರಲ್ಲಿ ರಾಜಕೀಯ ಪ್ರವೃತ್ತಿ ಮೇಲ್ಮನೆ ಕೆಳಮನೆ ಕಾರ್ಯ ಹೇಗೆ ನಿರ್ವಹಿಸುತ್ತದೆ ಎಂದು ತಿಳಿಸಿಕೊಡಲಾಗುತ್ತದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂ.ಎಲ್.ಚಿದಾನಂದ ಕುಮಾರ್ ಮಾತನಾಡಿ ಉತ್ತಮ ಫಲಿತಾಂಶಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರತಿಯೊಬ್ಬ ಪ್ರಾಧ್ಯಾಪಕರುಗಳಿಗೆ ವಂದನೆ ಸಲ್ಲಿಸಿದರು. ವಿದ್ಯಾರ್ಥಿಗಳ ಜೀವನದಲ್ಲಿ ಪ್ರಾಧ್ಯಾಪಕರುಗಳಲ್ಲದೆ ಪೋಷಕರ ಪ್ರಯತ್ನವು ಮುಖ್ಯ ಪಾತ್ರ ವಹಿಸಿದೆ. ಕೊಡಗಿನಲ್ಲಿ ಮಳೆಯಿಂದಾಗಿ ರಜೆ ಇದ್ದರೂ ಫಲಿತಾಂಶದಲ್ಲಿ ವ್ಯತ್ಯಾಸವಾಗಲಿಲ್ಲ ಎಂದು ತಿಳಿಸಿದರು. ಈ ಬಾರಿ ಕೊಡಗು ನಾಲ್ಕನೇ ಸ್ಥಾನ ಪಡೆದಿದ್ದರೂ ಮುಂದಿನ ದಿನಗಳಲ್ಲಿ ಮೊದಲನೇ ಸ್ಥಾನ ಪಡೆಯುವಂತಾಗಬೇಕು ಎಂದು ಕೋರಿದರು. ಅರುಣ ಪದವಿ ಪೂರ್ವ ಕಾಲೇಜಿನಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದಾಯನ ಎಸ್ ರಾಮಕೃಷ್ಣ ಅವರಿಗೆ ಗಣ್ಯರುಗಳು ಸನ್ಮಾನಿಸಿ ಗೌರವಿಸಿದರು.
2024-25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಲಾವಿಭಾಗದಿಂದ ಅಫಿಯ ಶರೀಫ್, ನವನಿದನ್ ಎಂ ಆರ್, ಎಸ್ ಸಾಜಿದ, ಮೇಘಶ್ರೀ ಕೆ, ವಾಣಿಜ್ಯ ವಿಭಾಗದಿಂದ ಡಿಂಪಲ್ ತಮ್ಮಯ್ಯ, ಶಿವಾನಿ ಕೆಎಸ್, ನಿಕ್ಷಾ ವಿ. ಎಸ್, ಸೃಜನ ಡಿ ಡಿ, ವಿಜ್ಞಾನ ವಿಭಾಗದಿಂದ ವೈಷ್ಣವಿ ಟಿ. ವಿ, ಪನ್ಯಪನ್ನಮ್ಮಎ. ಆರ್, ಚಿತ್ರ ಪಿ, ಲಿಜಾ ಜೇಮ್ಸ್, ಮಮತಾ ಎಂ. ಪಿ, ಸಾನಿಕ ಜಾಸ್ಮಿನ್ ಪಿ, ದೀಕ್ಷಾ ದೇಚಮ್ಮ ಇವರುಗಳಿಗೆ ನಗದು ಬಹುಮಾನವನ್ನು ವಿತರಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ವೈಷ್ಣವಿ ಹಾಗೂ ಚಿತ್ರ ತನ್ನ ಅಭಿಪ್ರಾಯವನ್ನು ತಿಳಿಸಿ ಕಂಬನಿ ಮಿಡಿದರು.
ಶೇ.100 ಫಲಿತಾಂಶವನ್ನು ಪಡೆದಿರುವ ಕೊಡಗು ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳಾದ ಪದವಿ ಪೂರ್ವ ಕಾಲೇಜು ಗೋಣಿಕೊಪ್ಪಲು, ಸಂತ ಅಂತೋಣಿ ಪದವಿ ಪೂರ್ವ ಕಾಲೇಜು ಪೋನ್ನಂಪೇಟೆ, ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪದವಿ ಪೂರ್ವ ಕಾಲೇಜು ಹಳ್ಳಿಗಟ್ಟು, ಐಶ್ವರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು, ಕುಶಾಲನಗರ, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಕೊಡ್ಲಿಪೇಟೆ, ಲಯನ್ಸ್ ಪದವಿ ಪೂರ್ವ ಕಾಲೇಜು ಗೋಣಿಕೊಪ್ಪಲು, ಅಟಲ್ ಬಿಹಾರಿ ವಾಜಪೇಯಿ ವಸತಿ ಪದವಿ ಪೂರ್ವ ಕಾಲೇಜು ಭಾಗಮಂಡಲ ಕಾಲೇಜುಗಳ ಪ್ರಾಂಶುಪಾಲರಿಗೆ ಸ್ಮರಣಿಕೆ ವಿತರಿಸಲಾಯಿತು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪಿ.ಆರ್.ವಿಜಯನ್, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲ ಸಂಘದ ಖಜಾಂಚಿ ಅಂತೋನಿ ವಿಜಯನ್ ಅಲ್ವಾರೀಸ್, ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಎನ್.ಕೆ ಜ್ಯೋತಿ, ಪ್ರಾಂಶುಪಾಲ ಸಂಘದ ಅಧ್ಯಕ್ಷರಾದ ಪಿ.ಎಂ.ದೇವಕಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಿದಾನಂದ ಕುಮಾರ್ ಎಂಎಲ್ ಮತ್ತಿತರರು ಇದ್ದರು. ದಿವ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಾಧ್ಯಾಪಕರಾದ ದಿವಾಕರ್ ಅವರು ನಿರೂಪಿಸಿದರು. ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಪಿ.ಎಂ.ದೇವಕಿ ಅವರು ಸ್ವಾಗತಿಸಿದರು. ಪ್ರಾಂಶುಪಾಲರ ಸಂಘದ ಕಾರ್ಯದರ್ಶಿಗಳಾದ ಎನ್.ಕೆ.ಜ್ಯೋತಿ ಅವರು ವಂದಿಸಿದರು.