ಅಕ್ಟೋಬರ್ 23ಕ್ಕೆ ಸಿದ್ದಾಪುರ ಬಂದ್ ಇಲ್ಲ! ಯಾಕಾಗಿ ಬಂದ್ ಕರೆ ನೀಡಿದ್ದು?

ಅಕ್ಟೋಬರ್ 23ಕ್ಕೆ ಸಿದ್ದಾಪುರ ಬಂದ್ ಇಲ್ಲ! ಯಾಕಾಗಿ ಬಂದ್ ಕರೆ ನೀಡಿದ್ದು?

ನಮ್ಮ ಗ್ರಾಮದ ಬಹಳ ವರ್ಷದ ಬೇಡಿಕೆಯಾಗಿದ್ದ ಸಿದ್ದಾಪುರ - ವಿರಾಜಪೇಟೆ ರಸ್ತೆ ಕಾಮಗಾರಿಗೆ ನಮ್ಮ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆಗಿರುವ ಎ.ಎಸ್ ಪೊನ್ನಣ್ಣ ಅವರ ಮುತುವರ್ಜಿಯಿಂದ ವಿಶೇಷ ಅನುದಾನ ಮೂಲಕ 1.9 ಕಿ.ಮೀ ರಸ್ತೆಯ ಕಾಮಗಾರಿಗೆ 2024 ರ ನವೆಂಬರ್ 27 ರಂದು ಗುದ್ದಲಿ ಪೂಜೆ ಮಾಡಿ, ಕಾಮಗಾರಿ ಕಳಪೆಯಾಗದೆ ಗುಣಮಟ್ಟದಿಂದ ಕೂಡಿರಬೇಕು ಹಾಗೂ ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರನಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.ಅಲ್ಲದೆ ಎಲ್ಲವನ್ನೂ ಸರಿಯಾಗಿ ನೋಡಿಕೊಳ್ಳಬೇಕೆಂದು ಸ್ಥಳೀಯ ಕಾಂಗ್ರೆಸ್ ನಾಯಕರುಗಳಿಗೆ ತಿಳಿಸಿದ್ದರು.

ಇದೀಗ ಒಂದು ವರ್ಷ ಆಗ್ತಾ ಇದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಲ್ಲದೆ ಸಾರ್ವಜನಿಕರಿಗೆ ಸಮಸ್ಯೆ ಕೂಡಾ ಸೃಷ್ಟಿಯಾಗಿದೆ. ಈ ಹಿಂದೆ ಅಂಬೇಡ್ಕರ್ ನಗರದ ಬಳಿ ಬೃಹತ್ ಗುಂಡಿ ತೋಡಿ ಮಣ್ಣನ್ನು ರಸ್ತೆಯ ಮೇಲೆ ಹಾಕಲಾಗಿತ್ತು. ಇಲ್ಲಿ ರಾತ್ರಿ ಸಮಯದಲ್ಲಿ ಸುಮಾರು ಐದು ವಾಹನಗಳು ಪಲ್ಟಿಯಾಗಿ ಮಕ್ಕಳು ಸೇರಿದಂತೆ ಮಹಿಳೆಯರಿಗೆ ಚಿಕ್ಕಪುಟ್ಟ ಗಾಯಗಳಾಗಿತ್ತು. ವಾಹನಗಳಿಗೂ ಹಾನಿಯಾಗಿತ್ತು. ಪರವಾಗಿಲ್ಲ ಕೆಲಸ ಮುಗಿಯಲಿ ನಮ್ಮೂರಿನ ಅಭಿವೃದ್ಧಿ ಮುಖ್ಯ ಹಾಗಾಗಿ ಇದೆಲ್ಲಾ ಸಹಿಸೋಣ....

20 ವರ್ಷಗಳಿಂದ ಆಗದ ಕೆಲಸ ಈಗ ಆಗುತ್ತಿದೆಯಲ್ವ ಹಾಗಾಗಿ ಕೆಲವು ಸಮಸ್ಯೆಗಳಿಗೆ ಹೊಂದಿಕೊಂಡು ಹೋಗೋಣ, ಕೆಲಸ ನಡೆಯಲಿ ಎಂದಾಗಿತ್ತು. ಆದರೆ ಇಲ್ಲಿ ನಡೆಯುತ್ತಿದ್ದ ಕಾಮಗಾರಿ ವೇಗ ಹೇಗಿತ್ತೆಂದರೆ ಒಂದು ವಾರ ಕೆಲಸ ಮಾಡಿದರೆ ಮತ್ತೆ 20-25 ದಿನಗಳ ವರೆಗೆ ಕೆಲಸ ಸ್ಥಗಿತ. ಮತ್ತೆ ಒಂದೆರಡು ದಿನ ಕೆಲಸ ಮಾಡಿದರೆ ಪುನಃ ಕೆಲಸ ಸ್ಥಗಿತ ಇದು ಮುಂದುವರಿದ ಪರಿಣಾಮ ಇಡೀ ರಸ್ತೆ ಧೂಳು ಹಾಗೂ ಕೆಸರುಮಯವಾಗುತ್ತಿತ್ತು. ಯಾವುದೇ ಹಬ್ಬ ಹರಿದಿನಗಳು ಬಂತೆಂದರೆ ಕೆಲಸದವರು ವಾರಗಟ್ಟಲೆ ರಜೆ ಮಾಡುತ್ತಿದ್ದರು. ಇದೇ ರಸ್ತೆಯ ಬದಿಯಲ್ಲಿ ಮೂರು ಶಾಲೆಗಳು, ಎರಡು ಡೆಂಟಲ್ ಕ್ಲಿನಿಕ್ ಸೇರಿ ಮೂರು ಕ್ಲಿನಿಕ್ ಗಳು, ವಿವಿಧ ಧರ್ಮದ ಮೂರು ಪ್ರಾರ್ಥನಾಲಯಗಳು, ಒಂದು ಮದುವೆ ಮಂಟಪ, ಮೂರು ಬ್ಯಾಂಕ್ ಎಲ್ಲವೂ ಈ 1.9 ಕಿ.ಮೀ ವ್ಯಾಪ್ತಿಯಲ್ಲಿದೆ.

ಕಾಮಗಾರಿ ವಿಳಂಬವಾಗುತ್ತಿರುವುದಲ್ಲದೆ ಜನರಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ಸ್ಥಳೀಯರು ಎರಡು ಬಾರಿ ಪ್ರತಿಭಟನೆಗೆ ಮುಂದಾದಾಗ ಗುತ್ತಿಗೆದಾರ ಹಾಗೂ ಸ್ಥಳೀಯ ಕೆಲವು ಕಾಂಗ್ರೆಸ್ ಮುಖಂಡರು ಸೇರಿ ಯಾವುದೇ ಪ್ರತಿಭಟನೆ ಮಾಡಬೇಡಿ ಆದಷ್ಟು ಬೇಗ ಕೆಲಸ ಮುಗಿಯಲಿದೆ ಎಂದು ಸಮಾಧಾನ ಮಾಡಿದ್ದರು. ಬಳಿಕ ಸ್ವತಃ ಶಾಸಕರು ಸ್ಥಳಕ್ಕಾಗಮಿಸಿ ಸಾರ್ವಜನಿಕರಿಗೆ ಸಮಸ್ಯೆ ನೀಡದೆ ಶೀಘ್ರಗತಿಯಲ್ಲಿ ಕಾಮಗಾರಿ ಮುಗಿಸುವಂತೆ ಸಂಬಂಧಿಸಿದವರಿಗೆ ತಾಕೀತು ಮಾಡಿದ್ದರು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ.

ಶಾಸಕರ ಮಾತಿಗೂ ಬೆಲೆ ಕೊಡದೆ ವಿಳಂಬ ಮಾಡುತ್ತಲೇ ಬಂದರು. ಸಮಸ್ಯೆ ಮತ್ತಷ್ಟು ಹೆಚ್ಚಾದಾಗ ಇಲ್ಲಿಯ ಶಾಲೆಯ ಶಿಕ್ಷಕರು ಸೇರಿ ಹೋರಾಟಕ್ಕೆ ಮುಂದಾಗುತ್ತಿದ್ದಂತೆ ಯಾವುದೇ ಪ್ರತಿಭಟನೆ ಮಾಡಬೇಡಿ ಕೆಲಸ ಬೇಗ ಮುಗಿಯುತ್ತದೆ ಎಂದು ಪುನಃ ಸಮಾಧಾನ ಮಾಡಿದರು. ಕಳೆದ ಹನ್ನೊಂದು ತಿಂಗಳುಗಳಿಂದ ಸ್ಥಳೀಯರು ಸಮಾಧಾನ ಹಾಗೂ ತಾಳ್ಮೆಯಿಂದ ಇದ್ದಾರೆ. ಕೆಲ ದಿನಗಳ ಹಿಂದೆ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಇಡೀ ಊರಿನ ಜನರು ಪರದಾಡುವಂತಾಯಿತು. ಬಸ್ ಗಳನ್ನು ಕ್ರೈನ್ ಹಾಗೂ ಜೆಸಿಬಿ ಸಹಾಯದಿಂದ ಎಳೆಯಲಾಯಿತು. ಸ್ಕೂಟಿಯಲ್ಲಿ ಬಂದ ಮಹಿಳೆಗೆ ಬಿದ್ದು ಗಾಯ, ಶಾಲಾ ಮಕ್ಕಳು ಕೆಸರಿನಲ್ಲಿ ಎದ್ದು ಬಿದ್ದು ಮುಂದೆ ಹೋದರು, ಈ ಮಾರ್ಗವಾಗಿ ಶಾಲೆಗೆ ತೆರಳಬೇಕಿದ್ದ ಬೇರೊಂದು ಶಾಲೆಯ ಮಕ್ಕಳು ಬಸ್ ನಿಂದ ಇಳಿದು ಸುಮಾರು 2 ಕಿ.ಮೀ ದೂರ ಕಲ್ಲು ಮುಳ್ಳಿನ ಕಾಲು ದಾರಿಯ ಮೂಲಕ ಶಾಲೆಗೆ ತೆರಳಿದರು.

ಒಟ್ಟಿನಲ್ಲಿ ನೂರಾರು ಸಮಸ್ಯೆಗಳಿದ್ದರೂ ಒಮ್ಮೆ ಕೆಲಸ ಮುಗಿಯಲಿ ಎಂದು ತಾಳ್ಮೆಯಿಂದ ಇದ್ದಾರೆ. 1.9 ಕಿ.ಮೀ ಕೆಲಸಕ್ಕೆ ಇವರಿಗೆ ಇನ್ನೆಷ್ಟು ವರ್ಷ ಬೇಕು? ಮಳೆ ಇತ್ತು ಒಪ್ಪಿಕೊಳ್ಳೋಣ. ನವೆಂಬರ್ ತಿಂಗಳಲ್ಲಿ ಶಾಕರು ನಿಮಗೆ ಖಡಕ್ ಆಗಿ ಹೇಳಿಲ್ವ? ಡಿಸೆಂಬರ್, ಜನವರಿ, ಫೆಬ್ರವರಿ, ಮಾರ್ಚ್, ಎಪ್ರಿಲ್ ಈ ಐದು ತಿಂಗಳುಗಳಲ್ಲಿ ಮಳೆ ಇತ್ತಾ? ಈ ರಸ್ತೆ ವಿಚಾರವಾಗಿ ಎಲ್ಲವನ್ನೂ ಸರಿಯಾಗಿ ನೋಡಿಕೊಳ್ಳುವಂತೆ ಶಾಸಕರು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಹೇಳಿದ್ದರಲ್ವ?. ಆದರೆ ಕೆಲಸ ವಿಳಂಬದಿಂದಾಗಿ ಜನರಿಗೆ ಸಮಸ್ಯೆ ಆಗುತ್ತಿದೆ ಎಂದು ಸ್ಥಳೀಯ ನಾಯಕರು ಯಾಕೆ ಶಾಸಕರಿಗೆ ಮಾಹಿತಿ ನೀಡಿಲ್ಲ? ಇಲ್ಲಿ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸ್ಥಳೀಯ ನಾಯಕರ ಧೋರಣೆಯಿಂದ ಜನರಿಗೆ ಇಷ್ಟೆಲ್ಲಾ ಸಮಸ್ಯೆ ಆಗಿದೆ. ಇಷ್ಟೆಲ್ಲಾ ಆದಮೇಲೂ ಮತ್ತೆ ಕೆಲಸವನ್ನು ಸ್ಥಗಿತಗೊಳಿಸಿದ್ದರು.

ಕಳೆದ ಹನ್ನೊಂದು ತಿಂಗಳಿನಿಂದ ಹೆಚ್ಚು ಸಮಸ್ಯೆ ಅನುಭವಿಸುತ್ತಿರುವವರು ಮತ್ತೆ ಕೆಲಸ ಸ್ಥಗಿತಗೊಂಡಿರುವ ಮಾಹಿತಿ ತಿಳಿದ ತಕ್ಷಣ ಲಭ್ಯವಿದ್ದ ಒಂದಷ್ಟು ಮಂದಿ ಸೇರಿ ಕೆಲಸ ತ್ವರಿತಗತಿಯಲ್ಲಿ ನಡೆಯದಿದ್ದರೆ ಅಕ್ಟೋಬರ್ 23 ರಂದು ಸಿದ್ದಾಪುರ ಬಂದ್ ಮಾಡುವುದಾಗಿ ಎಚ್ಚರಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕೆಲಸವನ್ನು ಚುರುಕುಗೊಳಿಸಿದ್ದಾರೆ. ಕೆಲಸ ಇದೇ ರೀತಿ ವಿಳಂಬ ಮಾಡದೆ ಜನರಿಗೆ ಸಮಸ್ಯೆ ಆಗದಂತೆ ಮುಂದುವರಿದರೆ ಬಂದ್, ಪ್ರತಿಭಟನೆ ಯಾವದೂ ನಡೆಯಲ್ಲ.

 ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ ಪ್ರತೀಶ ಅವರ ಅವರ ಮುಂದಾಳತ್ವದಲ್ಲಿ ಎ.ಇ.ಇ ಸತೀಶ ಅವರ ಜತೆಗೆ ಹೋರಾಟ ಸಮಿತಿಯೊಂದಿಗೆ ಸಭೆ ನಡೆಸಿದ್ದು, ಮುಂದಿನ 20 ದಿನಗಳಲ್ಲಿ ಮೋರಿ, ಚರಂಡಿ ಕೆಲಸ, ಹಾಗೂ ಜೆಲ್ಲಿ ಹಾಕುವ ಕೆಲಸ ಪೂರ್ಣಗೊಳಿಸುವುದು ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕೆಲಸ ಪೂರ್ಣಗೊಳಿಸುವ ಭರವಸೆಯನ್ನು ನೀಡಿರುವುದರಿಂದ ಬಂದ್ ಕೈ ಬಿಡಲಾಗಿದೆ ಎಂದು ಹೋರಾಟ ಸಮಿತಿ ತಿಳಿಸಿದೆ. ಶಾಸಕರ ವಿಶೇಷ ಅನುದಾನ ಸದ್ಬಳಕೆಯಾಗಲಿ. ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ತ್ವರಿತಗತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಯಲಿ.

 ಬರಹ: ಎ.ಎಸ್ ಮುಸ್ತಫ ಸಿದ್ದಾಪುರ