ವಿರಾಜಪೇಟೆ:ಕೆ.ಬೋಯಿಕೇರಿ ಆಶ್ರಯ ಕಾಲೋನಿಗೆ ಶಾಸಕ ಎ.ಎಸ್ ಪೊನ್ನಣ್ಣ ಭೇಟಿ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ
ವಿರಾಜಪೇಟೆ: ತಾಲೂಕು ಕೊಟ್ಟೋಳ್ಳಿ ಗ್ರಾಮದ, ಕೆ.ಬೋಯಿಕೇರಿ ಆಶ್ರಯ ಕಾಲೋನಿಗೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರು ಭೇಟಿ ನೀಡಿದರು. ಆಶ್ರಯ ಕಾಲೋನಿಯ ನಿವಾಸಿಗಳನ್ನು ಭೇಟಿಯಾದ ಶಾಸಕರು ಅವರ ಕುಂದು ಕೊರತೆಗಳನ್ನು ಆಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರ ಹಾಗೂ ತಾನು ಜನರ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದರ ಸದುಪಯೋಗವನ್ನು ಕಾಲೋನಿ ನಿವಾಸಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು. ಆಶ್ರಯ ಕಾಲೋನಿ ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಶಾಸಕರು ಎಲ್ಲರೂ ವಿದ್ಯಾವಂತರಾಗಿ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಡಿಕೇರಿಯಂಡ ಮಹೇಶ್, ಪಂಚಾಯಿತಿ ಅಧ್ಯಕ್ಷರಾದ ಜೇಫ್ರಿ ಉತ್ತಪ್ಪ, ಕೆಡಿಪಿ ಸದಸ್ಯರಾದ ಮಾಳೆಟೀರ ಪ್ರಶಾಂತ್, ಪಂಚಾಯತಿ ಸದಸ್ಯರಾದ ಇಸ್ಮಾಯಿಲ್, ಪವಿತ್ರ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.