ವಿರಾಜಪೇಟೆ; ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮ

Apr 17, 2026 - 12:26
 0  220
ವಿರಾಜಪೇಟೆ; ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮ

ವಿರಾಜಪೇಟೆ: ಆಧ್ಯಾತ್ಮಿಕವಾದ ನೆಲೆಗಟ್ಟಿನಲ್ಲಿ, ಸಾತ್ವಿಕವಾದ ಆಹಾರ ನೀಡುವುದರ ಜೊತೆಗೆ ವಿದ್ಯಾರ್ಥಿಗಳು ಮನಸ್ಸಿನಿಂದ ಸಾತ್ವಿಕವಾಗಿರಬೇಕು ಎಂಬ ನಿಟ್ಟಿನಲ್ಲಿ ಈ ಶಿಬಿರ ಆರಂಭಿಸಲಾಗಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಸಾಹಿತಿಗಳಾದ ರಜಿತ ಕಾರ್ಯಪ್ಪ ಶಿಬಿರಾರ್ಥಿಗಳಿಗೆ ತಿಳಿಸಿದರು.

 ವಿರಾಜಪೇಟೆಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಸಾಹಿತಿ ರಜಿತ ಕಾರ್ಯಪ್ಪ ಅವರು,

ಬೇರೆ ಕಡೆಗಳಲ್ಲಿ ನಡೆಯುವ ಶಿಬಿರಗಳಲ್ಲಿ ಅನೇಕ ಚಟುವಟಿಕೆಗಳು, ನೃತ್ಯ ಇತ್ಯಾದಿ ಇರುತ್ತದೆ. ಆದರೆ ಇಲ್ಲಿ ನಡೆಯುವ ಶಿಬಿರದಲ್ಲಿ ಆದ್ಯಾತ್ಮಿಕ ಅಂಶಗಳೊಂದಿಗೆ ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಅಳವಡಿಸಿಕೊಳ್ಳಬೇಕಾದ ಗುಣಗಳ ಬಗ್ಗೆ ಕಳಿಸಿಕೊಡಲಾಗುತ್ತದೆ. ಅದನ್ನೆಲ್ಲ ತಾವುಗಳು ಕಲಿಯಬೇಕು, ತಾವು ಇನ್ನಷ್ಟು ವಿದ್ಯಾರ್ಥಿ ಜೀವನದಲ್ಲಿ ಮುಂದುವರಿಯಬೇಕು.

 ತಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು, ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕಬೇಕು ಎಂದರಲ್ಲದೆ ವಿದ್ಯಾರ್ಥಿ ಜೀವನದಲ್ಲಿ ಆದಷ್ಟು ಮೊಬೈಲ್ ಬಳಕೆಯಿಂದ ದೂರವಿರುವಂತೆ ಕಿವಿ ಮಾತನ್ನು ಹೇಳಿದರು.

ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಆಪ್ತ ಸಮಾಲೋಚಕಿ ಮುತ್ತಮ್ಮ ಅವರು ಮಕ್ಕಳಿಗೆ ಪರೀಕ್ಷೆಯ ಭಯ ಮತ್ತು ಅದರ ನಿವಾರಣೆ ಬಗ್ಗೆ, ಮಕ್ಕಳಿಗೆ ಸ್ವಯಂ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಮತ್ತು ಆತ್ಮವಿಶ್ವಾಸದ ಬಗ್ಗೆ ಜ್ಞಾನ ನೀಡಿದರು. ಬಳಿಕ ಉಪಗ್ರಹದ ಬಗ್ಗೆ ಮಾಹಿತಿ ನೀಡಿ, ಆರ್ಯಭಟ ಭಾರತದ ಮೊಟ್ಟ ಮೊದಲ ಕೃತಕ ಉಪಗ್ರಹದ ಹೆಸರು. ಪ್ರಾಚೀನ ಭಾರತೀಯ ಗಣಿತಜ್ಞ ಆರ್ಯಭಟನ ಗೌರವಾರ್ಥವಾಗಿ ಈ ಹೆಸರನ್ನು ಇದಕ್ಕೆ ಇಡಲಾಯಿತು.

 19 ಏಪ್ರಿಲ್ 1975 ರಂದು ಇದರ ಉಡಾವಣೆ ಆಯಿತು ಎಂದು ಮಾಹಿತಿ ನೀಡಿ, ಪ್ರಾಯೋಗಿಕವಾಗಿ ಅದರ ಮಾದರಿ ಮಾಡಿಸಿದರು ಮತ್ತು ಇತರ ಚಟುವಟಿಕೆಗಳನ್ನು ಮಾಡಿಸಿದರು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಂಸ್ಥೆಯ ಸಂಚಾಲಕಿ ಬಿ.ಕೆ. ಕೋಮಲ ಆಧ್ಯಾತ್ಮಿಕ ಜ್ಞಾನ ಮತ್ತು ಧ್ಯಾನದ ಬಗ್ಗೆ ಮಕ್ಕಳನ್ನ ಉದ್ದೇಶಿಸಿ ಮಾತನಾಡಿ ಸತ್ಯ ಮೇವ ಜಯತೆ, ನಮ್ಮ ಜೀವನದಲ್ಲಿ ಸತ್ಯತೆಯ ಮೌಲ್ಯ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾದುದು.

ಯಾರಲ್ಲಿ ಸತ್ಯತೆ ಇದೆ ಅವರು ನಿರ್ಭಯವಾಗಿ ಇರುತ್ತಾರೆ, ಮತ್ತು ಸದಾ ಖುಷಿಯಲ್ಲಿ ಇರುತ್ತಾರೆ. ಸುಳ್ಳು ಇರುವಲ್ಲಿ ಭಯ, ಅಶಾಂತಿ, ದುಃಖವಿರುತ್ತದೆ. ಪರಮಾತ್ಮನಿಗೆ ಸತ್ಯವೆಂದು ಹೇಳುತ್ತಾರೆ, ಹಾಗೆ ಆತನ ಮಕ್ಕಳು ನಾವು ಆತ್ಮಗಳು ಸತ್ಯ. ಸತ್ಯವೆಂದರೆ ಶಾಶ್ವತ. ಪರಮಾತ್ಮನ ಜ್ಞಾನ, ಸತ್ಯ ಜ್ಞಾನ, ಅದರಿಂದ ಜೀವನ ಜ್ಯೋತಿ ಬೆಳಗುವುದು. ಸತ್ಯತೆ ಇದ್ದಲ್ಲಿ ಸ್ವಚ್ಛತೆ ಇರುವುದು. ನಿಮ್ಮ ಮನಸ್ಸು ಸ್ವಚ್ಛವಾಗಿ ಇದ್ದರೆ ನಿಮ್ಮ ಕೆಲಸವೂ ಸ್ವಚ್ಛವಾಗಿ ಇರುವುದು. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟು ಕೊಂಡರೆ ನಿಮಗೂ ಹಾಗೂ ಸಮಾಜಕ್ಕೂ ಆರೋಗ್ಯ ಎಂದರು.

ಮೈಸೂರಿನಿಂದ ಆಗಮಿಸಿದ್ದ ಕುಮಾರಿ ಬಿ.ಕೆ ಶಿವಾನಿ, ಅದ್ವೀತೀಯ, ವಿಶಾಲಾಕ್ಷಿ ಹಾಗೂ ವಿರಾಜಪೇಟೆ ಕೇಂದ್ರದ ವಿದ್ಯಾರ್ಥಿ ರೂಪ ಪೂವಯ್ಯ ಅವರು ಶಿಬಿರದ ನಿರ್ವಹಣೆ ಮಾಡಿ, ಶಿಬಿರದಲ್ಲಿ ನಿತ್ಯ ಪ್ರಾರ್ಥನೆ, ವ್ಯಾಯಾಮ, ಆಟೋಟ, ಹಾಡು, ನೃತ್ಯ ಮಾಡಿಸುವುದರ ಮೂಲಕ ಮಕ್ಕಳನ್ನು ಮನರಂಜಿಸಿದರು. ಶಿಬಿರದಲ್ಲಿ ಮಕ್ಕಳಿಗೆ ಪಾನೀಯ, ತಿಂಡಿ, ಆಹಾರವನ್ನು ನೀಡಲಾಯಿತು.

ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಮಕ್ಕಳಿಗೆ ಈಶ್ವರೀಯ ಉಡುಗೊರೆಯನ್ನು ನೀಡಲಾಯಿತು. ಮೂರು ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರವು ಯಶಸ್ವಿಯಾಗಿ ನಡೆದು ಮಕ್ಕಳಲ್ಲಿ ಉತ್ಸಾಹ-ಉಲ್ಲಾಸ ತಂದಿತು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1