ವಿರಾಜಪೇಟೆ;ಪುಟಾಣಿ ಮಕ್ಕಳ ಚೋಟ ಚಾಂಪ್ಸ್ ಗುರುಕುಲಂ ಶಾಲೆಯ ವಾರ್ಷಿಕೋತ್ಸವ
ವಿರಾಜಪೇಟೆ:ವಿರಾಜಪೇಟೆಯ ವಿಜಯನಗರದಲ್ಲಿರುವ ಪುಟಾಣಿ ಮಕ್ಕಳ ಚೋಟ ಚಾಂಪ್ಸ್ ಗುರುಕುಲಂ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ನಿಸರ್ಗ ಬಡಾವಣೆಯ ದೈವಜ್ಞ ಬ್ರಾಹ್ಮಣರ ಸಮಾಜದ ಸಭಾಂಗಣದಲ್ಲಿ ಇತ್ತಿಚೆಗೆ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಜೀವನ ಜ್ಯೋತಿ ಸಂಸ್ಥೆಯ ಸ್ಥಾಪಕರಾದ ಅಜಯ್ ನಾರಾಯಣ ರಾವ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅಜಯ್ ನಾರಾಯಣ ರಾವ್ ಅವರು, ಮೊದಲು ದೇಶದಲ್ಲಿ ಕೂಡು ಕುಟುಂಬದ ಸದಸ್ಯರು ಇದ್ದಾಗ ಮಕ್ಕಳಲ್ಲಿ ಗುರು ಹಿರಿಯರು ಸಂಸ್ಕಾರ ಹೇಳಿಕೊಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಕೂಡು ಕುಟುಂಬ ಮಾಯವಾಗಿದೆ, ಆದುದರಿಂದ ವೃದ್ದಾಶ್ರಮಗಳು ಜಾಸ್ತಿಯಾಗುತ್ತಿದೆ. ಮಕ್ಕಳು ದುಶ್ಚಟಗಳಿಗೆ ಬಲಿಯಾಗಬಾರದು, ಕುಟುಂಬದಲ್ಲಿ ಸಾಮರಸ್ಯ ಇಲ್ಲದೆ ಇರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ಇತ್ತಿಚಿನ ದಿನಗಳಲ್ಲಿ ಮಕ್ಕಳಿಗೆ ಮುಖ್ಯವಾಗಿ ಸಂಸ್ಕಾರ ಬೇಕಾಗುತ್ತದೆ. ಸಂಸ್ಕೃತಿ ಕಲಿಸಬೇಕು. ಒಳ್ಳೆಯತನ ಕಲಿತಲ್ಲಿ ಸಮಾಜಕ್ಕೆ ಒಳಿತನ್ನು ನೀಡಬಹುದು. ಇಂದಿನ ಮಕ್ಕಳು ಮುಂದೆ ದೇಶದ ಭದ್ರ ಬುನಾಧಿಯಾಗುತ್ತಾರೆ.
ಹಾಗಾಗಿ ಮಕ್ಕಳನ್ನು ಉತ್ತಮ ಸಂಸ್ಕಾರದೊಂದಿಗೆ ಬೆಳೆಸುವುದು ನಮ್ಮ ಕರ್ತವ್ಯ ಎಂದರು. ಮಕ್ಕಳ ಮನಸ್ಸು ಬಹಳ ಮೃದುವಾಗಿದ್ದು ನಾವು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತಾಗ ಅವರ ಭವನೆಗಳನ್ನು ಅರಿತುಕೊಳ್ಳಲು ಸಾಧ್ಯ. ಹಾಗೇ ಮಾಡುವುದರಿಂದ ಅವರ ಸುಪ್ತ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ. ಅವರಲ್ಲಿ ಹುದುಗಿದ ಅನೇಕ ಪ್ರತಿಭೆಗಳು ಹೊರಬರುತ್ತವೆ. ಅದಕ್ಕೆ ಪೋಷಕರು ಕಾರಣಕರ್ತರಾಗಬೇಕು ಎಂದರು. ಸಮಾಜ ಸೇವಕ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಮಾತನಾಡಿ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಯಾವುದೇ ಜಾತಿಯ ಅಥವಾ ರಾಜಕೀಯ ವಿಷಯಗಳ ಬಗ್ಗೆ ವಿಷ ಬೀಜಗಳನ್ನು ಬಿತ್ತಬಾರದು.
ಪೋಷಕರು ಮಕ್ಕಳಿಗೆ ಆಚಾರ ವಿಚಾರ, ಸಂಸ್ಕೃತಿ ಸಂಸ್ಕಾರವನ್ನು ಕಲಿಸುವಂತಾಗಬೇಕು. ಮಕ್ಕಳನ್ನು ವಿವಿಧ ರೀತಿಯ ದುಶ್ಚಟಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು. ಮಕ್ಕಳ ಮುಂದೆ ಪೋಷಕರು ದುಶ್ಚಟಗಳನ್ನು ಮಾಡಬಾರದು. ಪುಟ್ಟ ಮಕ್ಕಳು ತಂದೆ ತಾಯಿ ಹಾಗೂ ತಮ್ಮ ಸುತ್ತಮುತ್ತ ಎನೇನು ನಡೆಯುತ್ತದೆಯೋ ಅದನ್ನೇ ಕಲಿತು ಅನುಸರಿಸುತ್ತಾರೆ. ಪುಟ್ಟ ಮಕ್ಕಳು ತನ್ನದೆಯಾದ ವಿಭಿನ್ನ ಕೌಶಲ್ಯಗಳನ್ನು ಹೊಂದಿರುತ್ತಾರೆ. ಅವರನ್ನು ಪ್ರೋತ್ಸಾಹಿಸಬೇಕು ಎಂದರು.
ಚೋಟ ಚಾಂಪ್ಸ್" ಗುರುಕುಲಂನ ಮುಖ್ಯಸ್ಥರಾದ ಧನು ಕುಮಾರ್ ಮಾತನಾಡಿ ವಿದ್ಯೆ ಇಲ್ಲದ ಜೀವನ ಪರಿಮಳವಿಲ್ಲದ ಹೂವಿನಂತೆ. ನಮ್ಮ ಶಾಲೆಯಲ್ಲಿ ಭಾರತ ದೇಶದ ಸಂಸ್ಕೃತಿ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರ ನೀಡುವುದು, ಶಾಲೆಯಲ್ಲಿ ಅಕ್ಷರ ಜ್ಞಾನ ಬಿತ್ತುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಚೋಟ ಚಾಂಪ್ಸ್ ಶಾಲೆಯ ಪ್ರಾಂಶುಪಾಲರಾದ ಚಂಗೇಟೀರ ಅಕ್ಕಮ್ಮ ಧನುಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾತೃ ಎಜುಕೇಷನ್ ಟ್ರಸ್ಟ್ ಅಡಿಯಲ್ಲಿರುವ ವಿರಾಜಪೇಟೆಯ ವಿಜಯನಗರದಲ್ಲಿರುವ "ಚೋಟ ಚಾಂಪ್ಸ್" ಗುರುಕುಲಂ ಶಾಲೆಗೆ ತನ್ನದೇಯಾದ ಕಲಿಕಾ ಕೌಶಲ್ಯವಿದ್ದು ಗುರುಕುಲ ಮಾದರಿಯಲ್ಲಿ ಪುಟ್ಟ ಮಕ್ಕಳಿಗೆ ಕಲಿಕೆಯನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಉತ್ತಮ ನಡೆನುಡಿ ಹಾಗೂ ಸಂಸ್ಕಾರವನ್ನು ಕಲಿಸುವ ಉದ್ದೇಶದಿಂದ ಶಾಲೆಯನ್ನು ಆರಂಭಿಲಾಗಿದೆ ಎಂದರು.
ಹಳೆಯ ಕಾಲದ ನೋಟುಗಳು ಹಾಗೂ ನಾಣ್ಯಗಳನ್ನು ಸಂಗ್ರಹ ಮಾಡಿ ಇನ್ನೂ ಕೆಲವೇ ದಿನಗಳಲ್ಲಿ ಗಿನ್ನೀಸ್ ದಾಖಲೆ ಪಡೆಯುವ ನೀರಿಕ್ಷೆಯಲ್ಲಿರುವ ಕಾರಣ ಅಜಯ್ ಅವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಿದರು. ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ನಂತರ ಶಾಲೆಯ ಪುಟ್ಟ ಮಕ್ಕಳ ನೃತ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಗುರುಕುಲಂ ಶಿಕ್ಷಣ ಸಂಸ್ಥೆಯ ಶಿಕ್ಷಕರು, ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು.