ವಿವಾಹೇತರ ಸಂಬಂಧ ವಿರೋಧಿಸಿದ ಪತಿಯ ಕೊಲೆ ಮಾಡಿ ಆತ್ಮಹತ್ಯೆಯ ನಾಟಕವಾಡಿದ ಪತ್ನಿ ಬಂಧನ

Nov 10, 2025 - 13:19
 0  1.3k
ವಿವಾಹೇತರ ಸಂಬಂಧ ವಿರೋಧಿಸಿದ ಪತಿಯ ಕೊಲೆ ಮಾಡಿ ಆತ್ಮಹತ್ಯೆಯ ನಾಟಕವಾಡಿದ ಪತ್ನಿ ಬಂಧನ
ಮೃತಪಟ್ಟ ವ್ಯಕ್ತಿ

ಮೈಸೂರು, ನ.10: ವಿವಾಹೇತರ ಸಂಬಂಧಕ್ಕೆ ವಿರೋಧಿಸಿದ ಪತಿಯನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡಂತೆ ನಾಟಕವಾಡಿದ ಪತ್ನಿ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿದ್ದಾಳೆ. ಈ ಘಟನೆ ನಂಜನಗೂಡು ತಾಲೂಕಿನ ಇಂದಿರಾ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಇಂದಿರಾ ಗ್ರಾಮದ ವೀರಣ್ಣ (41) ಎಂದು ಗುರುತಿಸಲಾಗಿದ್ದು, ಪತ್ನಿ ಶಿವಮ್ಮ (35) ಅವರನ್ನು ಹುಲ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸುಮಾರು 13 ವರ್ಷಗಳ ಹಿಂದೆ ವೀರಣ್ಣ ಮತ್ತು ಶಿವಮ್ಮ ಅವರ ವಿವಾಹ ನಡೆದಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಶಿವಮ್ಮ ಹೆಚ್‌.ಡಿ.ಕೋಟೆ ಮೂಲದ ಬಲರಾಮ ಎಂಬಾತನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎನ್ನಲಾಗಿದೆ. ಪತಿ ವೀರಣ್ಣ ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ವಿಷಯ ನ್ಯಾಯಪಂಚಾಯಿತಿಯ ತನಕ ತಲುಪಿದರೂ ಶಿವಮ್ಮ ಮತ್ತು ಬಲರಾಮ ಅವರ ಸಂಪರ್ಕ ಕಡಿತಗೊಳ್ಳಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ರಾತ್ರಿ ಬಲರಾಮ ಶಿವಮ್ಮಗೆ ಫೋನ್ ಮಾಡಿದ್ದರಿಂದ ದಂಪತಿಯ ನಡುವೆ ಜಗಳ ಉಂಟಾಗಿದೆ. ಬಳಿಕ ವೀರಣ್ಣ ಮಲಗಿದ ವೇಳೆ ಶಿವಮ್ಮ ಆತ್ಮಹತ್ಯೆ ಕಥೆ ಕಟ್ಟಿದ್ದಾಳೆ. ಗಂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನೆರೆಹೊರೆಯವರಿಗೆ ತಿಳಿಸಿದ್ದಾಳೆ. ಆಕೆಯ ವರ್ತನೆ ಅನುಮಾನ ಹುಟ್ಟಿಸಿದ್ದು, ಸ್ಥಳಕ್ಕೆ ಧಾವಿಸಿದ ಹುಲ್ಲಹಳ್ಳಿ ಪೊಲೀಸರು ಮೃತದೇಹವನ್ನು ಪರಿಶೀಲಿಸಿದಾಗ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ತನಿಖೆಯಲ್ಲಿ ಶಿವಮ್ಮ ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ, ಕೊಲೆ ಸಂಚು ಬಯಲಾಗಿದೆ. ಪತಿಯ ಮೃತದೇಹವನ್ನು ನೇಣಿಗೆ ಹಾಕಿ ಆತ್ಮಹತ್ಯೆ ಎಂದು ತೋರಿಸಲು ಯತ್ನಿಸಿದ್ದಾಳೆ ಎಂಬುದು ಹೊರಬಂದಿದೆ. 

ಶಿವಮ್ಮನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬಲರಾಮನ ಪತ್ತೆಗೆ ಶೋಧ ತೀವ್ರಗೊಳಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿಯುತ್ತಿದೆ ಎಂದು ಹುಲ್ಲಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1