ಶನಿವಾರಸಂತೆ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ

Sep 1, 2026 - 14:43
 0  67
ಶನಿವಾರಸಂತೆ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ

ಶನಿವಾರಸಂತೆ: ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕ್ರೀಡಾಪಟು ಸಿ.ಎಲ್.ಸುಬ್ಬಯ್ಯ ಹೇಳಿದರು.

ಅವರು ಗೋಪಾಲಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ, ಶಿಕ್ಷಣ ಇಲಾಖೆ ಮತ್ತು ಗೋಪಾಲಪುರ ಶಾಲೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಶನಿವಾರಸಂತೆ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. 

ಸರ್ಕಾರ ಮತ್ತು ಶಿಕ್ಷಣ ಇಲಾಖೆ ಪಠ್ಯಕ್ಕೆ ನೀಡುವಷ್ಟೇ ಆದ್ಯತೆಯನ್ನು ಕ್ರೀಡೆಗೂ ನೀಡುತ್ತಿದ್ದು, ಹೆಚ್ಚಿನ ಅನುದಾನ ನೀಡಿ ಕ್ರೀಡಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿದೆ. ವಿದ್ಯಾರ್ಥಿಗಳು ನಿರಂತರ ಅಭ್ಯಾಸದಲ್ಲಿ ತೊಡಗಿ ಭವಿಷ್ಯದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರಬೇಕು. ಕ್ರೀಡಾಕೂಟದ ಸಮಯದಲ್ಲಿ ಮಾತ್ರವಲ್ಲದೆ, ಬಿಡುವು ಮಾಡಿಕೊಂಡು ಪ್ರತಿನಿತ್ಯ ಅಭ್ಯಾಸ ಮಾಡಿದರೆ ಮಾತ್ರ ಗೆಲುವು ಸಾಧ್ಯ ಎಂದು ಕರೆ ನೀಡಿದರು.

ಶನಿವಾರಸಂತೆ ಕ್ಲಸ್ಟರ್‌ನ ಸಿಆರ್‌ಪಿ ಸಿ.ಕೆ.ದಿನೇಶ್ ಮಾತನಾಡಿ, ಕೊಡಗು ಕ್ರೀಡೆಗೆ ಹೆಸರುವಾಸಿಯಾಗಿದ್ದು, ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಪವಿತ್ರ ಹೃದಯ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಥೋಮಸ್ ಮಾತನಾಡಿ, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳು ಪರಸ್ಪರ ಪೂರಕ. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು.

ಗೋಪಾಲಪುರ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸೌಮ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಪಲ್ಲವಿ, ನಿವೃತ್ತ ಸೈನಿಕರಾದ ಯಶವಂತ್, ಉದಯಬಾನು, ನಿಡ್ತ ಗ್ರಾ.ಪಂ. ಮಾಜಿ ಸದಸ್ಯ ತಸ್ಲೀಮ್, ಸಿಆರ್‌ಪಿಗಳಾದ ಗಿರೀಶ್, ದೇವರಾಜ್ ಗೌಡ, ಪ್ರಾಂಶುಪಾಲರಾದ ಸುಜಾಲಾದೇವಿ, ಷಣ್ಮುಖಯ್ಯ, ಅಶ್ವಥ್, ಮುಖ್ಯ ಶಿಕ್ಷಕಿಯರಾದ ಲಲಿತಾ, ಸಾವಿತ್ರಿ, ಸದಸ್ಯೆ ಸಾವಿತ್ರಮ್ಮ, ಕಾರ್ಯದರ್ಶಿ ಕವಿತಾ, ದೈಹಿಕ ಶಿಕ್ಷಕರಾದ ಪ್ರವೀಣ್, ಭಾಸ್ಕರ್, ಪವನ್ ಮತ್ತಿತರರು ಇದ್ದರು.

ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಕವಿತಾ ಮತ್ತು ಯಶೋಧ ಗಣೇಶ್ ಅವರನ್ನು ಸನ್ಮಾನಿಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0