ಅ.27(ನಾಳೆಯಿಂದ) ಸಿದ್ದಾಪುರ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರ ಮುಷ್ಕರ

ಅ.27(ನಾಳೆಯಿಂದ)  ಸಿದ್ದಾಪುರ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರ ಮುಷ್ಕರ

ಸಿದ್ದಾಪುರ:-ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿದ್ದಾಪುರ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರು ಅ.27ರಿಂದ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ಪೌರ ಕಾರ್ಮಿಕ ಸುರೇಶ್ ತಿಳಿಸಿದರು.

 ಕಳೆದ ಇಪ್ಪತ್ತು ವರ್ಷಗಳಿಂದ ಗ್ರಾಮ ಪಂಚಾಯಿತಿ ಯಲ್ಲಿ ಪೌರಕಾರ್ಮಿಕರಾಗಿ ದಿನಗೂಲಿ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪೌರ ಕಾರ್ಮಿಕರಿಗೆ ವಿವಿಧ ಸವಲತ್ತು ಒದಗಿಸುವಂತೆ ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಆದೇಶ ಬಂದು ಏಳೆಂಟು ತಿಂಗಳು ಕಳೆದರೂ ಈವರೆಗೂ ಆಡಳಿತ ಮಂಡಳಿ ನಮ್ಮಿಂದ ಮರೆಮಾಚಿ ದುಡಿಸಿಕೊಳ್ಳುತ್ತಿದೆ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

 ಗಾಂಧಿಜಯಂತಿ ದಿನದಂದು ಪಂಚಾಯಿತಿ ವತಿಯಿಂದ ಪೌರ ಕಾರ್ಮಿಕರಿಗೆ ಏರ್ಪಡಿಸಿದ್ದ ಸನ್ಮಾನವನ್ನು ನಿರಾಕರಿಸಿದ ಸಂದರ್ಭದಲ್ಲಿ ಮುಂದಿನ ಸಭೆಯಲ್ಲಿಯೇ ಪೌರಕಾರ್ಮಿಕರ ವಿಚಾರ ಚರ್ಚಿಸುವುದಾಗಿ ಆಡಳಿತ ಮಂಡಳಿ ಭರವಸೆ ನೀಡಿತ್ತು. ಆದರೆ ಇದೀಗ ಎರಡು ಸಾಮಾನ್ಯ ಸಭೆಗಳು ಮುಗಿದರೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದ ಅವರು, ಮೂರು ನಾಲಕ್ಕು ದಿನದೊಳಗೆ ಪಂಚಾಯಿತಿಯವರು ಪೌರ ಕಾರ್ಮಿಕರಿಗೆ ಸವಲತ್ತುಗಳನ್ನು ಒದಗಿಸಿದ್ದರೆ ಕೆಲಸವನ್ನು ಸ್ಥಗಿತ ಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

 ಪೌರಕಾರ್ಮಿಕರ ಭವಿಷ್ಯನಿಧಿ, ಆರೋಗ್ಯ ಭದ್ರತೆ, ವಸತಿಗೃಹ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಯನ್ನು ಮುಂದಿಟ್ಟು ಹೋರಾಟ ಹಮ್ಮಿಕೊಳ್ಳಲಾಗಿದ್ದು ಬೇಡಿಕೆ ಈಡೇರಿಸು ವವರೆಗೂ ಧರಣಿ ನಡೆಸುವುದಾಗಿ ತಿಳಿಸಿದರು. ಹಿರಿಯ ಪೌರ ಕಾರ್ಮಿಕ ಮಾದೇವ ಮಾತನಾಡಿ, ಪ್ರಸ್ತುತ ಪಂಚಾಯಿತಿಯಲ್ಲಿ ಒಬ್ಬ ಮಹಿಳಾ ಸಿಬ್ಬಂದಿ ಸೇರಿ ಐವರು ಪೌರ ಕಾರ್ಮಿಕರು ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ. ಆದರೆ ಪೌರಕಾರ್ಮಿಕರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಈ ಬಗ್ಗೆ ಆಡಳಿತ ಮಂಡಳಿ ಬಳಿ ಕೇಳಿದರೆ ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರೆ ಆರೋಪಿಸಿದರು. ಈ ಸಂದರ್ಭದಲ್ಲಿ ಪೌರ ಕಾರ್ಮಿಕರಾದ ಗಣೇಶ, ಮಂಜುನಾಥ್ ಹಾಜರಿದ್ದರು