ರಜೆಯಲ್ಲಿ ಊರಿಗೆ ಬಂದಿದ್ದ ಯೋಧ ಅನಾರೋಗ್ಯದಿಂದ ಸಾವು

Jul 19, 2025 - 11:56
Jul 19, 2025 - 11:56
 0  271
ರಜೆಯಲ್ಲಿ ಊರಿಗೆ ಬಂದಿದ್ದ ಯೋಧ ಅನಾರೋಗ್ಯದಿಂದ ಸಾವು

ವಿರಾಜಪೇಟೆ:ರಜೆ ಮೇಲೆ ಊರಿಗೆ ಬಂದಿದ್ದ ಯೋಧನೋರ್ವ ಅನಾರೋಗ್ಯದಿಂದ ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಮಕ್ಕಿಯಲ್ಲಿ ನಡೆದಿದೆ. ಹೆಚ್.ಬಿ. ರವಿಶಂಕರ್ (39) ಮೃತಪಟ್ಟ ಯೋಧ. ಕಿರುಮಕ್ಕಿಯ ಹೆಚ್. ಬೀರಯ್ಯ ಎಂಬುವವರ ಪುತ್ರ ರವಿಶಂಕರ್ ರಜೆ ಮೇಲೆ ತಿಂಗಳ ಹಿಂದೆಯೇ ಊರಿಗೆ ಬಂದಿದ್ದ ರವಿಶಂಕರ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಯೋಧ ರವಿಶಂಕರ್ ಅವರು 2004 ರಲ್ಲಿ ಸೇನೆಗೆ ಸೇರಿದ್ದು ಅಸ್ಸಾಂ ರೈಫಲ್ ರೆಜಿಮೆಂಟ್‌ನಲ್ಲಿ ಮಣಿಪ್ಪುರದಲ್ಲಿ ಸೇವೆ ಸಲ್ಲಿಸುತ್ತಿದ್ದರು. 21 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಯೋಧ ಇನ್ನೆರಡು ದಿನದಲ್ಲಿ ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗುವವರಿದ್ದರು.

 ಯೋಧನ ಸಾವಿನ ಸುದ್ದಿ ತಿಳಿದ ಕೂಡಲೇ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಮೃತ ಯೋಧನ ಅಂತಿಮ ದರ್ಶನ ಪಡೆದು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಬಳಿಕ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಭಾರತೀಯ ಸೇನೆಯ ಬೆಂಗಳೂರಿನ ಮುಖ್ಯ ಕಛೇರಿಯಿಂದ ಆಗಮಿಸಿದ ಅಧಿಕಾರಿಗಳು ಮೃತ ಯೋಧರ ಅಂತಿಮ ದರ್ಶನ ಪಡೆದು ಗೌರವ ಅರ್ಪಿಸಿ ಪಥ ಸಂಚಲನ ನಡೆಸಿದರು. ಈ ವೇಳೆ ಯೋದನ ಪತ್ನಿ, ಹೆತ್ತವರು ಮತ್ತು ಸಂಬಂಧಿಗಳ ರೋದನ ಮುಗಿಲು ಮುಟ್ಟಿತ್ತು. ಜಿಲ್ಲಾ ಪೊಲೀಸ ಡಿಆರ್ ತುಕಡಿ ವತಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಿದರು. ವಿರಾಜಪೇಟೆ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಗೌರವ ನಮನ ಸಲ್ಲಿಸಿ ಮೃತ ಯೋಧನ ಪತ್ನಿಗೆ ರಾಷ್ಟ್ರ ಧ್ವಜ ಹಸ್ತಾಂತರಿಸಿದರು.

 ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್, ನಿರ್ದೆಶಕರುಗಳಾದ ಚೇಂದ್ರಿಮಾಡ ನಂಜಪ್ಪ, ಕಬ್ಬಚ್ಚಿರ ಬೋಪಣ್ಣ, ಬಾಳೆಕುಟ್ಟೀರ ದಿನಿ ಸೇರಿದಂತೆ ಮಾಜಿ ಸೈನಿಕರುಗಳು, ವಿರಾಜಪೇಟೆ ತಾಲೂಕು ದಂಡಾಧಿಕಾರಿ ಅನಂತ ಶಂಕರ, ವಿರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳು, ನೆರೆಯವರು, ಊರಿನವರು ಸೇರಿದಂತೆ ಸಾವಿರಾರು ಮಂದಿ ಅವರ ಅಂತಿಮ ದರ್ಶನ ಪಡೆದರು. ಬಳಿಕ ಯೋಧ ರವಿಶಂಕರ್ ಪತ್ನಿ, ತಂದೆ, ತಾಯಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದು, ಶುಕ್ರವಾರ ಸಂಜೆ ಸರಕಾರಿ ಗೌರವದೊಂದಿಗೆ, ಕುಟುಂಬದ ಸಮ್ಮುಖದಲ್ಲಿ ಅಂತ್ಯಕ್ರಿಯೆ ಕಿರುಮಕ್ಕಿಯಲ್ಲಿ ನೆರವೇರಿತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0