ಮೇ 29,30 ರಂದು ಸುಂಟಿಕೊಪ್ಪದಲ್ಲಿ 17ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

May 26, 2026 - 19:43
 0  130
ಮೇ 29,30 ರಂದು ಸುಂಟಿಕೊಪ್ಪದಲ್ಲಿ 17ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಮಡಿಕೇರಿ: ೧೭ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮೇ.೨೯, ೩೦ ರಂದು ಸುಂಟಿಕೊಪ್ಪದ ಎಸ್.ಎಸ್.ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ನಿರ್ಮಿಸಲಾಗುವ ಕವಿಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ತಿಳಿಸಿದರು.

ಮೇ೨೯ರ ಬೆಳಿಗ್ಗೆ ಎಂಟು ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ ಮತ್ತು ಪರಿಷತ್ತಿನ ಧ್ವಜದ ಆರೋಹಣೆಯೊಂದಿಗೆ ಸಮ್ಮೇಳನ ಪ್ರಾರಂಭವಾಗಲಿದೆ. ಸುಂಟಿಕೊಪ್ಪ ಪ್ರದೇಶದಲ್ಲಿ ಸಮಾಜ ಸೇವೆ ಮಾಡಿ ತಮ್ಮ ಆದರ್ಶ ಮತ್ತು ತ್ಯಾಗಗಳಿಗೆ ಹೆಸರುವಾಸಿಯಾಗಿ ಮರೆಯಾದ ಹಿರಿಯರ ಹೆಸರಿನಲ್ಲಿ, ಅವರ ನೆನಪಿಗಾಗಿ ೧೯ ದ್ವಾರಗಳನ್ನು ನಿರ್ಮಿಸಲಾಗಿದ್ದು ಸಮಾಜದ ಗಣ್ಯರು ಇವುಗಳನ್ನು ಉದ್ಘಾಟನೆ ಮಾಡಲಿದ್ದಾರೆ.

 ಅಂದು ಬೆಳಗ್ಗೆ ೯ ಗಂಟೆಗೆ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಮುಖ್ಯ ರಸ್ತೆಗಾಗಿ ಶ್ರೀ ಅಯ್ಯಪ್ಪ ದೇವಾಲಯದ ಮುಖಾಂತರ ಗದ್ದೆ ಹಳ್ಳದ ಎಸ್.ಎಸ್.ಇಂಟರನ್ಯಾಷನಲ್ ಹಾಲ್ನಲ್ಲಿ ನಿರ್ಮಿಸಲಾಗಿರುವ ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣದವರೆಗೆ ವಿವಿಧ ಕಲಾತಂಡಗಳು, ಕಳಶ ಹೊತ್ತ ಮಹಿಳೆಯರು, ವಾದ್ಯ ತಂಡಗಳು, ಸ್ರ್ತೀಶಕ್ತಿ, ಸಂಜೀವಿನಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಅಂಗನವಾಡಿ ಸದಸ್ಯರುಗಳು, ಶಿಕ್ಷಕರುಗಳು, ಜನಪ್ರತಿನಿಧಿಗಳು ಸೇರಿದಂತೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದು ವಿವರಿಸಿದರು.

ಸಾಹಿತಿ ಡಿ ಎನ್ ಕೃಷ್ಣಯ್ಯ ಮಹಾದ್ವಾರ, ಸಾಹಿತಿ ಜಿ.ಟಿ ನಾರಾಯಣ್ ರಾವ್ ಪುಸ್ತಕ ಮಳಿಗೆ, ಚಿತ್ರಕಲಾ ಪ್ರದರ್ಶನ ಮಳಿಗೆ, ಕಮಲ ಕರಿಯಪ್ಪ ಜ್ಞಾಪಕಾರ್ಥ ಸ್ತ್ರೀಶಕ್ತಿ ಮಳಿಗೆ, ಗುಂಡುಗುಟ್ಟಿ ಮಂಜುನಾಥಯ್ಯ ಸಭಾಂಗಣ ಮತ್ತು ಕವಿ ಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯ ಉದ್ಘಾಟನೆಯನ್ನು ಗಣ್ಯರು ಮಾಡಲಿದ್ದಾರೆ.

೧೦.೩೦ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ನಾಡಗೀತೆ ರೈತ ಗೀತೆ ಕುಂಚಗಾಯನ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಳ್ಳುವ ಸಭೆಯ ಅಧ್ಯಕ್ಷತೆಯನ್ನು ಸಮ್ಮೇಳನಾದ ಸರ್ವಾಧ್ಯಕ್ಷರಾದ ಅಬ್ದುಲ್ ರಶೀದ್ ವಹಿಸಿಕೊಳ್ಳಲಿದ್ದು ಉದ್ಘಾಟನೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು, ೧೭ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ಮಂತರ್ ಗೌಡ ನಿರ್ವಹಿಸಲಿದ್ದಾರೆ.

ಸಮ್ಮೇಳನದ ನೆನಪಿಗಾಗಿ ಹೊರ ತರುವ ಸ್ಮರಣ ಸಂಚಿಕೆ ಸಾಹಿತ್ಯ ಸೌಹಾರ್ದವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಬೋಸರಾಜು ಅವರು ಬಿಡುಗಡೆಗೊಳಿಸಲಿದ್ದು, ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

 ವಿವಿಧ ಸಾಹಿತ್ಯ ಕೃತಿಗಳನ್ನು ವೇದಿಕೆಯಲ್ಲಿರುವ ಗಣ್ಯರು ಬಿಡುಗಡೆಗೊಳಿಸಲಿದ್ದು ಜನಪ್ರತಿನಿಧಿಗಳಾದ ಸಂಸದ ಯದುವೀರ ಕೃಷ್ಣ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಸುಜಾಕುಶಾಲಪ್ಪ, ವಿಧಾನಸಭಾ ಮಾಜಿ ಅಧ್ಯಕ್ಷರಾದ ಕೆ ಜಿ ಬೋಪಯ್ಯ, ಮಾಜಿ ಸಚಿವರಾದ ಅಪ್ಪಚ್ಚು ರಂಜನ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ತೀತಿರ ಧರ್ಮಜಾ ಉತ್ತಪ್ಪ ,ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷರಾದ ಟಿ.ಪಿ ರಮೇಶ್ ಉಪಸ್ಥಿತರಿರುತ್ತಾರೆ.

ಮುಖ್ಯ ಭಾಷಣಕಾರರಾಗಿ ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಮಾತನಾಡಲಿದ್ದಾರೆ. ಸಮ್ಮೇಳನದ ಅಧ್ಯಕ್ಷರಾದ ಅಬ್ದುಲ್ ರಶೀದ್ ರವರು ತಮ್ಮ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ರಮೇಶ್ ಮಾತನಾಡಿ, ಮೇ೩೦ರಂದು ಬೆಳಗ್ಗೆ ೧೦ ಗಂಟೆಗೆ ನಡೆಯುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಕೋಡಿರ ಲೋಕೇಶ್ ಮೊಣ್ಣಪ್ಪ ವಹಿಸಿಕೊಳ್ಳಲಿದ್ದು, ಆಶಯ ನುಡಿಯನ್ನು ಶಕ್ತಿ ಪತ್ರಿಕೆಯ ಸಂಪಾದಕರಾದ ಜಿ.ಚಿದ್ವಿಲಾಸ್ ನಡೆಸಿ ಕೊಡಲಿದ್ದಾರೆ. ಕನ್ನಡ ಕಥಾ ಜಗತ್ತು ಮತ್ತು ಕೊಡಗು ಕುರಿತು ಸಾಹಿತಿ ಡಾ.ಜೆ ಸೋಮಣ್ಣ, ಕೃಷಿ ಚಟುವಟಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಕುರಿತು ಕೃಷಿ ವಿಜ್ಞಾನಿ ಡಾ. ಮುರುಳಿಧರ್ ಮಾತನಾಡಲಿದ್ದಾರೆ.

ಸಾಹಿತ್ಯ ಕ್ಷೇತ್ರದತ್ತ ಯುವ ಪೀಳಿಗೆಯನ್ನು ಆಕರ್ಷಿಸುವ ದಾರಿ ಕುರಿತು ಆರ್ ಕೆ ಬಾಲಚಂದ್ರ ರವರು ಮಾತನಾಡಲಿದ್ದು, ಕೊಡಗು ಕ್ರೀಡೆಯ ತವರೂರು ಆಗಬೇಕಾದ ಅನುಕೂಲತೆಗಳ ಕುರಿತು ಚೆಪ್ಪುಡಿರ ಕಾರ್ಯಪ್ಪ ಮಾತನಾಡಲಿದ್ದಾರೆ ಅಪರಾಹ್ನ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಕೃಪಾ ದೇವರಾಜ್ ವಹಿಸಲಿದ್ದು, ಆಶಯ ನುಡಿಯನ್ನು ಸಾಹಿತಿ ಲಾವಣ್ಯ ಮೋಹನ್ ಆಡಲಿದ್ದಾರೆ.

ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು ವಕೀಲರು ಆದ ಕೆ.ಪಿ ಬಾಲಸುಬ್ರಹ್ಮಣ್ಯ ಅವರು ವಹಿಸಲಿದ್ದಾರೆ. ಕಿರಿಕೊಡ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಸದಾಶಿವ ಸ್ವಾಮಿಗಳು ಸಾಧಕರನ್ನು ಸನ್ಮಾನಿಸಲಿದ್ದಾರೆ.

 ನಂತರ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ರವರು ವಹಿಸಲಿದ್ದು ವಿಶೇಷ ಆಹ್ವಾನಿತರಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಬೋಸರಾಜು ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರೂ, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು ಆದ ಡಾ.ಮಂತರ ಗೌಡ ಭಾಗವಹಿಸಲಿದ್ದಾರೆ.

 ಆಶಯ ನುಡಿಯನ್ನು ಸಮ್ಮೇಳನ ಅಧ್ಯಕ್ಷ ಅಬ್ದುಲ್ ರಶೀದ್ ನೆರವೇರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಲೋಕೇಶ್ ಕುಮಾರ್, ಕೆ.ಎಸ್.ನಾಗೇಶ್, ಸಬಾಸ್ಟಿನ್, ಬಿ.ಸಿ.ದಿನೇಶ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0