ಸೋಮವಾರಪೇಟೆ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ: ಶಾಲಾ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಣೆ
ಸೋಮವಾರಪೇಟೆ: ತಾಲೂಕು ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ವತಿಯಿಂದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಬೆಟ್ಟದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಸ್ವೆಟರ್‌ಗಳು, ಲೇಖನ ಸಾಮಗ್ರಿಗಳು, ಟೈ-ಬೆಲ್ಟ್‌ಗಳು ಹಾಗೂ ವಾಟರ್‌ಬಾಟಲ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಸಾಮಗ್ರಿಗಳನ್ನು ವಿತರಿಸಿದ ಸಂಘದ ಅಧ್ಯಕ್ಷರಾದ ಸಾಲೊಮನ್ ಡೇವಿಡ್ ಅವರು ಮಾತನಾಡಿ ನಾವು ಪ್ರತಿ ವರ್ಷವೂ ಸರ್ಕಾರಿ ಶಾಲಾ ಮಕ್ಕಳೊಂದಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಮಕ್ಕಳಿಗೆ ಅಗತ್ಯವಾಗುವ ವಸ್ತುಗಳನ್ನು ನೀಡುವುದರ ಜೊತೆಗೆ, ಈ ದಿನದ ಮಹತ್ವ ಮತ್ತು ಉದ್ದೇಶವನ್ನು ತಿಳಿಸುವ ಮೂಲಕ ಅವರಿಗೆ ಹೆಚ್ಚು ಜ್ಞಾನವನ್ನು ನೀಡುವ ಪ್ರಯತ್ನ ಮಾಡುತ್ತೇವೆ," ಎಂದು ಹೇಳಿದರು.
ಗೌರವಾಧ್ಯಕ್ಷರಾದ ಜನಾರ್ಧನ್ ಅವರು "ಛಾಯಾಗ್ರಹಣ ಕೇವಲ ಕಲೆಯಲ್ಲ, ಸಮಾಜಮುಖಿ ಕಾರ್ಯಗಳ ಮೂಲಕ ಜನಜಾಗೃತಿ ಮೂಡಿಸುವ ಶಕ್ತಿಯಾಗಿದೆ. ಸಂಘದ ಈ ಸೇವಾಭಾವ ಮನೋಭಾವ ಇತರ ಸಂಘಟನೆಗಳಿಗೆ ಮಾದರಿಯಾಗಿದೆ," ಎಂದು ಅಭಿಪ್ರಾಯಪಟ್ಟರು. ಸಂಘದ ಮಾಜಿ ಅಧ್ಯಕ್ಷ ಸುಬ್ರಮಣಿ ಅವರು "ಸಂಘವು ಮುಂದೆಯೂ ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುವ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಿದೆ," ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ದೀಪು, ಖಜಾಂಚಿ ಅರುಣ್, ಜಿಲ್ಲಾ ಸಂಘದ ನಿರ್ದೇಶಕ ಹರೀಶ್ ಕೋಟ್ಯನ್, ಸಂಘದ ನಿರ್ದೇಶಕರಾದ ನವೀನ್, ಸಲೀಂ, ಮಂಜುನಾಥ್, ರಾಜು, ಸದಸ್ಯರಾದ ಧರ್ಮ ಮತ್ತು ಶೇಷಪ್ಪ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾ ಹಾಗೂ ಶಿಕ್ಷಕಿ ಕವಿತಾ ಅವರು ಸಂಘದ ಸಾಮಾಜಿಕ ಬದ್ಧತೆಯನ್ನು ಮೆಚ್ಚಿ ಮಕ್ಕಳಿಗೆ ಉಪಯುಕ್ತವಾದ ಸಾಮಗ್ರಿಗಳನ್ನು ನೀಡುವ ಮೂಲಕ ಶಿಕ್ಷಣದತ್ತ ಪ್ರೋತ್ಸಾಹ ನೀಡಿರುವುದು ಶ್ಲಾಘನೀಯ ಕಾರ್ಯ, ಎಂದು ಪ್ರಶಂಸಿಸಿದರು.