ಕೊಡಗು ಜಿಲ್ಲೆಯಲ್ಲಿ 4512 ಬಿಪಿಎಲ್ ಕಾರ್ಡ್ ಎಪಿಎಲ್ ಗೆ
(ವಿಶೇಷ ವರದಿ:ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ:ಕುಟುಂಬದ ವಾರ್ಷಿಕ ಆದಾಯ ನಿಗದಿಗಿಂತ ಹೆಚ್ಚಾಗಿದ್ದರೂ ಮಾನದಂಡಗಳನ್ನು ಉಲ್ಲಂಘಿಸಿ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ )ಕಾರ್ಡ್ ಗಳನ್ನು ಪಡೆದಿದ್ದ ಕೊಡಗು ಜಿಲ್ಲೆಯ 4512 ಕುಟುಂಬಗಳ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಗೆ(ಆದ್ಯತಾ ರಹಿತ ಕುಟುಂಬ-ಎನ್.ಪಿಎಚ್.ಎಚ್) ವರ್ಗಾಯಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ 2025ರ ಸೆಪ್ಟೆಂಬರ್ ತಿಂಗಳನಿಂದ ಎರಡು ತಿಂಗಳ ಕಾಲ ನಡೆದ ಪಡಿತರ ಚೀಟಿ ಪರಿಷ್ಕರಣಾ ಚೀಟಿ ಕಾರ್ಯದಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಪಡೆದವರನ್ನು ಪತ್ತೆಹಚ್ಚಲಾಗಿದೆ. ವಾರ್ಷಿಕವಾಗಿ 1.20 ಲಕ್ಷ ರೂ ಗಿಂತ ಹೆಚ್ಚು ಆದಾಯವಿರುವ, ಜಿಎಸ್ ಟಿ ,ಕಂಪನಿ ತೆರಿಗೆ ಪಾವತಿಸುತ್ತಿರುವ ಆಧಾರದ ಮೇಲೆ ಕಾರ್ಡ್ ಗಳ ಪರಿವರ್ತನೆಗೆ ಆಹಾರ ಇಲಾಖಾ ಅಧಿಕಾರಿಗಳು ಕ್ರಮವಹಿಸಿದ್ದಾರೆ.
ಕೊಡಗು ಜಿಲ್ಲೆಯಾದ್ಯಂತ ನಡೆದ ಪಡಿತರ ಚೀಟಿ ಪರಿಷ್ಕರಣಾ ಕಾರ್ಯದಲ್ಲಿ ಒಟ್ಟು 4869 ಕುಟುಂಬಗಳು ನಿಯಮ ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಪಡೆದಿರುವುದು ಪತ್ತೆಯಾಗಿತ್ತು.ಅದರಲ್ಲಿ 4512 ಬಿಪಿಎಲ್ ಕಾರ್ಡ್ ಗಳು ಇದೀಗ ಎಪಿಎಲ್ ಗೆ ಬದಲಾಯಿಸಲಾಗಿದೆ.ಉಳಿದ 357 ಬಿಪಿಎಲ್ ಕಾರ್ಡ್ ಕುಟುಂಬಗಳ ದಾಖಲೆಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ.
ಆಹಾರಾ ಇಲಾಖಾ ಅಧಿಕಾರಿಗಳು ಕೊಡಗು ಜಿಲ್ಲೆಯಾದ್ಯಂತ ಪಡಿತರ ಚೀಟಿ ಪರಿಷ್ಕರಣೆ ಮತ್ತು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಡಿಕೇರಿ ತಾಲ್ಲೂಕಿನ 936,ಸೋಮವಾರಪೇಟೆ 1026,ವಿರಾಜಪೇಟೆ 993, ಕುಶಾಲನಗರ 1138 ಹಾಗೂ ಪೊನ್ನಂಪೇಟೆ ತಾಲ್ಲೂಕಿನಲ್ಲಿ 749 ಬಿಪಿಎಲ್ ಕಾರ್ಡ್‌ಗಳು ಅನರ್ಹರ ಪಾಲಾಗಿತ್ತು. ಇದೀಗ 2025ರ ಡಿಸೆಂಬರ್ ತಿಂಗಳ ಅಂತ್ಯಕ್ಕೆ,ಮಡಿಕೇರಿ ತಾಲ್ಲೂಕಿನಲ್ಲಿ 936,ಸೋಮವಾರಪೇಟೆ 936,ವಿರಾಜಪೇಟೆ 883,ಕುಶಾಲನಗರ 1050, ಹಾಗೂ ಪೊನ್ನಂಪೇಟೆ ತಾಲ್ಲೂಕಿನಲ್ಲಿ 707 ಕುಟುಂಬಗಳ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಬದಲಾಯಿಸಲಾಗಿದೆ.ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ 9019(ಎಎವೈ),99405 (ಬಿಪಿಎಲ್) ಹಾಗೂ 39,147(ಎಪಿಎಲ್) ಕಾರ್ಡ್ ಗಳು ಸೇರಿ ಒಟ್ಟು 1,47,571 ಪಡಿತರ ಚೀಟಿಗಳಿವೆ.
ಕೊಡಗು ಜಿಲ್ಲೆಯಲ್ಲಿ ಡಿಸೆಂಬರ್2025ರವರೆಗೆ ಪಡಿತರ ಚೀಟಿ ಹೊಂದಿರುವವರ ವಿವರ:
ಮಡಿಕೇರಿ: ಎಎವೈ(ಅಂತ್ಯೋದಯ):1964 ಬಿಪಿಎಲ್;22,522 ಎಪಿಎಲ್;13,894 ಒಟ್ಟು:38,380
ಸೋಮವಾರಪೇಟೆ: ಎಎವೈ(ಅಂತ್ಯೋದಯ):1217 ಬಿಪಿಎಲ್:22,795 ಎಪಿಎಲ್:5023 ಒಟ್ಟು:29,035
ವಿರಾಜಪೇಟೆ: ಎಎವೈ(ಅಂತ್ಯೋದಯ):2095 ಬಿಪಿಎಲ್:17,598 ಎಪಿಎಲ್:6791 ಒಟ್ಟು:26,484
ಕುಶಾಲನಗರ: ಎಎವೈ(ಅಂತ್ಯೋದಯ):1530 ಬಿಪಿಎಲ್:21,070 ಎಪಿಎಲ್:5239 ಒಟ್ಟು:27,839
ಪೊನ್ನಂಪೇಟೆ: ಎಎವೈ(ಅಂತ್ಯೋದಯ):2213 ಬಿಪಿಎಲ್:15,420 ಎಪಿಎಲ್:8200 ಒಟ್ಟು:25,833 ಒಟ್ಟು: ಎಎವೈ(ಅಂತ್ಯೋದಯ):9019 ಬಿಪಿಎಲ್:99,405 ಎಪಿಎಲ್:39,147 ಒಟ್ಟು:1,47,571
ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಪಡಿತರ ಚೀಟಿ ಕುಟುಂಬ ಸದಸ್ಯರ ವಿವರ:
ಮಡಿಕೇರಿ: ಎಎವೈ(ಅಂತ್ಯೋದಯ):7,592 ಬಿಪಿಎಲ್: 70,300 ಎಪಿಎಲ್:43,211 ಒಟ್ಟು:1,21,103
ಸೋಮವಾರಪೇಟೆ: ಎಎವೈ(ಅಂತ್ಯೋದಯ):4,105 ಬಿಪಿಎಲ್:67,274, ಎಪಿಎಲ್:16,111 ಒಟ್ಟು:87,490
ವಿರಾಜಪೇಟೆ: ಎಎವೈ(ಅಂತ್ಯೋದಯ):6,282 ಬಿಪಿಎಲ್:52,583 ಎಪಿಎಲ್:21,083 ಒಟ್ಟು:79,948
ಕುಶಾಲನಗರ: ಎಎವೈ(ಅಂತ್ಯೋದಯ):5,092 ಬಿಪಿಎಲ್: 64,476 ಎಪಿಎಲ್:18,387 ಒಟ್ಟು:87,955
ಪೊನ್ನಂಪೇಟೆ: ಎಎವೈ(ಅಂತ್ಯೋದಯ):5,607 ಬಿಪಿಎಲ್: 41,318 ಎಪಿಎಲ್:22,172 ಒಟ್ಟು:69,097 ಒಟ್ಟು: ಎಎವೈ(ಅಂತ್ಯೋದಯ):28,678 ಬಿಪಿಎಲ್: 2,95,951 ಎಪಿಎಲ್:1,20,964 ಒಟ್ಟು:4,45,593
: ಮಾನದಂಡಗಳೇನು! ಸಾರ್ವಜನಿಕ ಪಡಿತರ ವಿತರಣಾ ಪದ್ಧತಿಯಡಿ ಆದ್ಯತೇತರ ಕುಟುಂಬಗಳನ್ನು (ಎಪಿಎಲ್) ಗುರುತಿಸಲು, ಪ್ರಸ್ತುತ ಇರುವ ಹೊರಗಿಡುವ ಮಾನದಂಡಗಳನ್ನು ಅನುಸರಿಸಲಾಗಿದೆ. ಅನರ್ಹರು ಪಡೆದಿದ್ದ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಈ ಮಾನದಂಡಗಳ ಅನುಸಾರ ಪತ್ತೆ ಮಾಡಲಾಗಿದೆ. ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಸರಕಾರದ ಅಥವಾ ಸರಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರಕಾರಿ ಪ್ರಾಯೋಜಿತ, ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಎಪಿಎಲ್ ಕುಟುಂಬಗಳಾಗಿರಲಿವೆ.
ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯ ಸ್ವಂತವಾಗಿ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿ ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನ ಹೊಂದಿರುವ ಎಲ್ಲ ಕುಟುಂಬಗಳನ್ನು ಎಪಿಎಲ್ ಪಟ್ಟಿಗೆ ಸೇರಿಸಲಾಗಿದೆ.
ಜಿಲ್ಲೆಯಲ್ಲಿ ಪಡಿತರ ಚೀಟಿಗಳ ಪರಿಷ್ಕರಣಾ ಕಾರ್ಯಕೈಗೊಂಡು,4512 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಗೆ ಪರಿವರ್ತಿಸಲಾಗಿದೆ. ಸರ್ಕಾರದ ನಿಯಮ ಉಲ್ಲಂಘಿಸಿ ಪಡಿತರ ಚೀಟಿ ಪಡೆದವರನ್ನು ಇಲಾಖೆ ಪತ್ತೆಹಚ್ಚುವ ಕೆಲಸ ಮಾಡುತ್ತಿದೆ. ಅನರ್ಹರ ಕೈಗೆ ಬಿಪಿಎಲ್ ಕಾರ್ಡ್ ಸಿಗದಾಗೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಮಂಟೆಸ್ವಾಮಿ, ಆಹಾರ ಇಲಾಖೆ ಜಂಟಿ ನಿರ್ದೇಶಕ