ಅಖಿಲ ಭಾರತ ಅಂತರ್ ಗುಂಪು ಸೈನಿಕ ಶಾಲೆಗಳ (ಗುಂಪು-ಹೆಚ್) ಪುಟ್ಬಾಲ್ ಪಂದ್ಯಾವಳಿ: ಚಾಂಪಿಯನ್ ಪಟ್ಟ ಉಳಿಸಿಕೊಂಡ ಕೊಡಗು ಸೈನಿಕ ಶಾಲೆ

ಅಖಿಲ ಭಾರತ ಅಂತರ್ ಗುಂಪು ಸೈನಿಕ ಶಾಲೆಗಳ (ಗುಂಪು-ಹೆಚ್) ಪುಟ್ಬಾಲ್ ಪಂದ್ಯಾವಳಿ:  ಚಾಂಪಿಯನ್ ಪಟ್ಟ ಉಳಿಸಿಕೊಂಡ ಕೊಡಗು ಸೈನಿಕ ಶಾಲೆ

ಕುಶಾಲನಗರ ಏಪ್ರಿಲ್ 24: ಕೂಡಿಗೆಯ ಸೈನಿಕ ಶಾಲೆ ಕೊಡಗು 2026-27ನೇ ಸಾಲಿನ ದಕ್ಷಿಣ ವಲಯದ ಅಂತರ್ ಗುಂಪು ಫುಟ್ಬಾಲ್ ಪಂದ್ಯಾವಳಿಯಲ್ಲಿ (ಗ್ರೂಪ್-ಹೆಚ್) ಸತತ ಎರಡನೇ ಬಾರಿಗೆ ಚಾಂಪಿಯನ್‌ಶಿಪ್ ಪಟ್ಟವನ್ನು ಉಳಿಸಿಕೊಳ್ಳುವ ಮೂಲಕ ನೂತನ ಇತಿಹಾಸಕ್ಕೆ ಮುನ್ನುಡಿ ಬರೆಯಿತು. 15 ವರ್ಷದೊಳಗಿನ ಬಾಲಕರು, 17 ವರ್ಷದೊಳಗಿನ ಬಾಲಕಿಯರು ಮತ್ತು 17 ವರ್ಷದೊಳಗಿನ ಬಾಲಕರು ಹೀಗೆ ಎಲ್ಲಾ ವಿಭಾಗಗಳಲ್ಲಿಯೂ ಪ್ರಾಬಲ್ಯ ಮೆರೆದ ಸೈನಿಕ ಶಾಲೆ ಕೊಡಗು ಫುಟ್ಬಾಲ್ ಕ್ರೀಡೆಯಲ್ಲಿ ತನ್ನ ಸರ್ವೋಚ್ಚ ಸ್ಥಾನವನ್ನು ಮತ್ತೊಮ್ಮೆ ಸಾಬೀತುಪಡಿಸಿತು. 

ಸೈನಿಕ ಶಾಲೆ ಕೊಡಗಿನಲ್ಲಿ ನಡೆದ ಅದ್ಧೂರಿ ಸಮಾರೋಪ ಸಮಾರಂಭದೊಂದಿಗೆ ಈ ಪಂದ್ಯಾವಳಿಯು ಮುಕ್ತಾಯಗೊಂಡಿತು. ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಮುಖ್ಯ ಅತಿಥಿಗಳಾಗಿ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದರು. ಕೆಡೆಟ್ ಲವಿಶ್ ಕಶ್ಯಪ್ ಅವರು ಸ್ವಾಗತ ಭಾಷಣ ಮಾಡಿ, ಗಣ್ಯರನ್ನು ಮತ್ತು ವಿವಿಧ ಶಾಲೆಗಳ ತಂಡಗಳನ್ನು ಸ್ವಾಗತಿಸಿದರು.

ರೋಚಕ ಅಂತಿಮ ಪಂದ್ಯ: ಸೈನಿಕ ಶಾಲೆ ಕೊಡಗು ಮತ್ತು ಸೈನಿಕ ಶಾಲೆ ಕಝಕೂಟಂ ತಂಡಗಳ ನಡುವೆ ನಡೆದ ಅಂತಿಮ ಪಂದ್ಯವು ಅತ್ಯಂತ ರೋಚಕವಾಗಿತ್ತು. ಅಂತಿಮವಾಗಿ ಕೊಡಗು ತಂಡವು 3–2 ಗೋಲುಗಳ ಅಂತರದಿಂದ ರೋಚಕ ಜಯ ಸಾಧಿಸಿತು. ಮುಖ್ಯ ಅತಿಥಿಗಳು ವಿಜೇತ ಕೆಡೆಟ್‌ಗಳಿಗೆ ಪ್ರಮಾಣಪತ್ರ, ಪದಕ ಹಾಗೂ ಪಾರಿತೋಷಕಗಳನ್ನು ವಿತರಿಸಿದರು. ವೈಯಕ್ತಿಕ ಸಾಧನೆಗಳ ವಿಭಾಗದಲ್ಲೂ ಕೊಡಗು ಸೈನಿಕ ಶಾಲೆಯ ವಿದ್ಯಾರ್ಥಿಗಳುದ್ದು ಸಿಂಹಪಾಲಾಗಿತ್ತು. ಕೆ.ಎಸ್.ಎಫ್.ಎ ಸಂಸ್ಥೆಯ ರೆಫ್ರಿ ಶ್ರೀ ಗಿರೀಶ್ ಮತ್ತು ಅವರ ತಂಡವನ್ನು ಶಾಲೆಯ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ತಮಿಳುನಾಡಿನ ಮಧುರೈ ಮೂಲದ ನೂತನ ಸೈನಿಕ ಶಾಲೆ ವಲ್ಲಭ ತಂಡದ ಕ್ರೀಡಾ ಮನೋಭಾವವನ್ನು ಗುರುತಿಸಿ ಈ ಕ್ಯೂಟ್ ವಾರಿಯರ್ಸ್ ಪ್ರಶಸ್ತಿ ನೀಡಲಾಯಿತು.

ಪಂದ್ಯಾವಳಿಯಲ್ಲಿ 17 ವರ್ಷದೊಳಗಿನ ಬಾಲಕಿರ ವಿಭಾಗದಲ್ಲಿ ಸೈನಿಕ ಶಾಲೆ ಕೊಡಗು ಪ್ರಥಮ ಸ್ಥಾನವನ್ನು ಪಡೆದರು, ಸೈನಿಕ ಶಾಲೆ ಕಲಿಕಿರಿ ದ್ವಿತೀಯ ಸ್ಥಾನವನ್ನಲಂಕರಿಸಿತು. 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸೈನಿಕ ಶಾಲೆ ಕೊಡಗು ಪ್ರಥಮ ಸ್ಥಾನವನ್ನಲಂಕರಿಸಿದರೆ, ಸೈನಿಕ ಶಾಲೆ ಕಝಕೊಟಂ ದ್ವಿತೀಯ ಸ್ಥಾನವನ್ನು ಪಡೆಯಿತು. ಹಾಗೆಯೇ 15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸೈನಿಕ ಶಾಲೆ ಕೊಡಗು ಪ್ರಥಮ ಸ್ಥಾನವನ್ನು ಪಡೆದರೆ, ಸೈನಿಕ ಶಾಲೆ ಕಝಕೊಟಂ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಒಟ್ಟಾರೆ ಆಯೋಜಿಸಲ್ಪಟ್ಟಿದ್ದ ಮೂರೂ ವಿಭಾಗಗಳಲ್ಲಿಯು ಸೈನಿಕ ಶಾಲೆ ಕೊಡಗು ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರು, "ಕ್ರೀಡೆಯಲ್ಲಿ ಶಿಸ್ತು ಮತ್ತು ಸ್ಪರ್ಧಾತ್ಮಕ ಮನೋಭಾವ ಅತ್ಯಗತ್ಯ. ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ," ಎಂದು ತಿಳಿಸಿ, ಪಂದ್ಯಾವಳಿಯು ಮುಕ್ತಾಯಗೊಂಡುದನ್ನು ಅಧಿಕೃತವಾಗಿ ಘೋಷಿಸಿದರು. ಸಮಾರೋಪದ ಅಂಗವಾಗಿ ಆಕರ್ಷಕ ಪಥಸಂಚಲನ ನಡೆಯಿತು. 

ಪ್ರಸ್ತುತ ಸಮಾರೋಪ ಸಮಾರಂಭದಲ್ಲಿ ಉಪಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರಾದ ವಿಬಿನ್ ಕುಮಾರ್, ಶ್ರೀಮತಿ ದಿವ್ಯಾ ಸಿಂಗ್, ಅಮರಾವತಿನಗರ, ಕಲಿಕಿರಿ, ಕಝಕೂಟಂ, ವಲ್ಲಭ ಮತ್ತು ವಿಕಾಸ ಸೈನಿಕ ಶಾಲೆಗಳ ಸಿಬ್ಬಂದಿ, ತರಬೇತುದಾರರು, ರೆಫರಿಗಳು, ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ, ಎನ್ ಸಿ ಸಿ, ಸಿಬ್ಬಂದಿವರ್ಗ, ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.