ರಾಜ್ಯ ಸರ್ಕಾರದ ಅಭಿವೃದ್ಧಿ ವೈಫಲ್ಯ, ರಸ್ತೆಗಳ ಅವ್ಯವಸ್ಥೆ ಖಂಡಿಸಿ ನಾಪೋಕ್ಲುವಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ

ರಾಜ್ಯ ಸರ್ಕಾರದ ಅಭಿವೃದ್ಧಿ ವೈಫಲ್ಯ, ರಸ್ತೆಗಳ ಅವ್ಯವಸ್ಥೆ ಖಂಡಿಸಿ ನಾಪೋಕ್ಲುವಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ

ನಾಪೋಕ್ಲು : ರಾಜ್ಯಾಧ್ಯಂತ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲವಾಗಿದ್ದು ಜಿಲ್ಲೆಯ ರಸ್ತೆಗಳು ಹದಗೆಟ್ಟು ಅವ್ಯವಸ್ಥೆಯಿಂದ ಕೂಡಿದ್ದು ವಾಹನ ಸವಾರರು ಸಾರ್ವಜನಿಕರು ಸಂಚರಿಸಲು ಭವಣೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ರಸ್ತೆಗಳನ್ನು ದುರಸ್ತಿ ಪಡಿಸಬೇಕೆಂದು ಒತ್ತಾಯಿಸಿ ಬಿಜೆಪಿ ಮಡಿಕೇರಿ ಗ್ರಾಮಾಂತರ ಮಂಡಲ, ನಾಪೋಕ್ಲು, ಬಲ್ಲಮಾವಟಿ ಶಕ್ತಿಕೇಂದ್ರದ ವತಿಯಿಂದ ನಾಪೋಕ್ಲುವಿನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ನಾಪೋಕ್ಲು ಭಾಗಮಂಡಲ ತರಲುವ ಮುಖ್ಯ ರಸ್ತೆಯಲ್ಲಿರುವ ಗುಂಡಿಗಳಲ್ಲಿ ಬಾಳೆಗಿಡಗಳನ್ನು ನೆಟ್ಟು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಶೀಘ್ರ ದುರಸ್ತಿ ಪಡಿಸುವಂತೆ ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಅವರು ಮಾತನಾಡಿ ರಾಜ್ಯಾದ್ಯಂತ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ನಾವು ಸರಿಯಾದ ಸಮಯಕ್ಕೆ ತೆರಿಗೆ ಹಣವನ್ನು ಪಾವತಿ ಮಾಡಿದರು ಸಹ ಅಭಿವೃದ್ಧಿ ಕಾರ್ಯಕ್ಕೆ ಬಳಸದೆ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಅಧಿಕಾರದಲ್ಲಿರುವವರ ಜೇಬು ತುಂಬುತ್ತಿದೆ. ವಾಲ್ಮೀಕಿ ಹಗರಣ, ಮೂಡ ಹಗರಣ ಸೇರಿದಂತೆ ಹಲವಾರು ಹಗರಣಗಳಲ್ಲಿ ನೂರಾರು ಕೋಟಿಗಳಷ್ಟು ಭ್ರಷ್ಟಾಚಾರದಿಂದ ಸೋರಿಕೆಯಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ನಡೆಯದಂತಾಗಿದೆ. ಕೊಡಗು ಜಿಲ್ಲೆಗೆ 1500 ಕೋಟಿಯ ಅಭಿವೃದ್ಧಿ ನಡೆದಿದೆ ಎಂದು ನಮ್ಮನ್ನು ಪ್ರತಿನಿಧಿಸುವ ಶಾಸಕರು ಮಾಡಿದ್ದಾರೆಂದು ಪತ್ರಿಕೆಯಲ್ಲಿ ನೋಡಿದ್ದೆ. ಎರಡು ಕ್ಷೇತ್ರವನ್ನು ಹೊಂದಿರುವ ಸಣ್ಣ ಜಿಲ್ಲೆಗೆ 1500 ಕೋಟಿ ಅನುದಾನ ಬಂದಿದ್ರೆ ಜಿಲ್ಲೆಯ ರಸ್ತೆಗಳು ಅಭಿವೃದ್ಧಿ ಕಾಣದೆ ಇದ್ದು ಈ ಅನುದಾನದ ಹಣ ಎಲ್ಲಿ ಎಂದು ರವಿ ಕಾಳಪ್ಪ ಪ್ರಶ್ನಿಸಿದರು.

ಜಿಲ್ಲೆಯ ವಿರಾಜಪೇಟೆ ನಾಪೋಕ್ಲು, ಭಾಗಮಂಡಲ, ಬೆಟ್ಟಗೇರಿ, ಮಡಿಕೇರಿ ಸೇರಿದಂತೆ ಪ್ರಮುಖ ಪಟ್ಟಣಗಳಿಗೆ ತೆರಳುವ ಪ್ರಮುಖ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದೆ. ಇದರಿಂದ ವಾಹನ ಚಾಲಕರು ಸಾರ್ವಜನಿಕರು ಸಂಚರಿಸಲು ಬವಣೆ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರ ಬಡವರಿಗೆ ಉಚಿತ ಯೋಜನೆಗಳನ್ನು ತಂದಿದ್ದೇವೆ ಎಂದು ಹೇಳಿ ಜನರಿಗೆ ಮೋಸ ಮಾಡಿದ್ದಾರೆ. ಇದುವರೆಗೂ ಇವರ ಯೋಜನೆಗಳು ಸರಿಯಾದ ರೀತಿಯಲ್ಲಿ ಜನರ ಕೈಸೇರಿಲ್ಲ. ಯೋಜನೆ ಹೆಸರಲ್ಲಿ ಪ್ರಚಾರಮಾಡುತಿದ್ದಾರೆ ಎಂದು ಆರೋಪಿಸಿದರು.

 ಜಿಲ್ಲೆಯ ರಸ್ತೆ ದುರಸ್ತಿ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಮಳೆಗಾಲದ ನೆಪಹುಡ್ಡಿ ಕೈ ತೊಳೆಯುತ್ತಿದ್ದಾರೆ. ಅಕಾಲಿಕ ಮಳೆಯಿಂದ ಬೆಳೆಗಾರರು ಫಸಲುಗಳನ್ನು ಕಳೆದು ನಷ್ಟ ಹೊಂದಿದ್ದು ಇದುವರೆಗೂ ಸರ್ಕಾರ ಪರಿಹಾರದ ಘೋಷಣೆ ಮಾಡಿಲ್ಲ. ಬಿಜೆಪಿಯಿಂದ ಪ್ರತಿಭಟನೆ ಬಳಿಕ ಸರ್ವೆ ಕಾರ್ಯಕ್ಕೆ ಮುಂದಾಗಿ ಜನರ ಕಣ್ಣೊರೆಸುವ ತಂತ್ರಮಾಡುತ್ತಿದ್ದಾರೆ. ಹದಗೆಟ್ಟ ರಸ್ತೆಗಳನ್ನು ಕಾವೇರಿ ಜಾತ್ರೆಯಯೊಳಗೆ ದುರಸ್ತಿ ಪಡಿಸದಿದ್ದರೆ ಜಿಲ್ಲಾಧ್ಯಂತ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರವಿ ಕಾಳಪ್ಪ ಎಚ್ಚರಿಕೆ ನೀಡಿದರು.

 ಬಲ್ಲಮಾವಟಿ ಶಕ್ತಿ ಕೇಂದ್ರದ ಅಧ್ಯಕ್ಷ ಕರವಂಡ ಲವ ನಾಣಯ್ಯ ಮಾತನಾಡಿ ಉಚಿತ ಯೋಜನೆಗಳ ಮೂಲಕ ಮತ ಪಡೆದು ಅಧಿಕಾರ ಉಳಿಸಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿದೆ.ಸರ್ಕಾರದ ಫ್ರಿ ಯೋಜನೆಗಗಳು ಕೆಲವರಿಗೆ ಉಪಯೋಗವಾದರೆ ಸಾರ್ವಜನಿಕವಾಗಿ, ಸಾಮಾಜಿಕವಾಗಿ, ಹಾರ್ಥಿಕವಾಗಿ ರಾಜ್ಯದ ದುಸ್ಥಿತಿಗೆ ಬಂದಿದೆ. ಮಳೆಯಿಂದ ರೈತರು ಶೇಕಡ 60ರಷ್ಟು ಬೆಳೆಗಳು ಹಾನಿಯಾಗಿದ್ದು ಸರ್ಕಾರ ಬೆಳೆ ಪರಿಹಾರ ನೀಡದೆ ನಷ್ಟ ಅನುಭವಿಸುವಂತಾಗಿದೆ.

 ರಸ್ತೆಗಳು ದುರಸ್ತಿಯಾಗದೆ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿ ವಾಹನ ಸವಾರರು ಬಿದ್ದು ಆಸ್ಪತ್ರೆ ಸೇರಿರುವ ಪರಿಸ್ಥಿತಿ ಇದೆ.ನಾಪೋಕ್ಲು ವ್ಯಾಪ್ತಿಯಲ್ಲಿ ಕಾಂಗ್ರೆಸ್ಸಿನ ಭ್ರಷ್ಟ ನೀತಿ ಇದ್ದು ರಸ್ತೆಗಳು ದುರಸ್ತಿ ಆಗಬೇಕೆಂದರೆ ಇಲ್ಲಿನ ಬ್ಲಾಕ್ ಅಧ್ಯಕ್ಷನಿಗೆ ಕಮಿಷನ್ ಕೊಟ್ಟರೆ ಮಾತ್ರ ಸಾಧ್ಯ ಎಂಬ ಜಂಗಲ್ ರಾಜ್ ನಡೆಯುತ್ತಿದೆ.

ಕಾಮಗಾರಿಗಳ ಬಿಲ್ ಆಗಬೇಕೆಂದರೆ ಬ್ಲಾಕ್ ಅಧ್ಯಕ್ಷನ ಪರ್ಮಿಷನ್ ಬೇಕೆಂಬ ಭ್ರಷ್ಟ ಪರಿಸ್ಥಿತಿ ನಡೆಯುತ್ತಿದೆ. ಇದು ನಿಲ್ಲಬೇಕೆಂದರೆ ಮುಂದೆ ಬಿಜೆಪಿ ಸರ್ಕಾರ ಬರಲೇಬೇಕು. ಕಾಂಗ್ರೆಸ್ ಸರ್ಕಾರ ಬಂದಮೇಲೆ ಧರ್ಮ, ಜಾತಿಗಳನ್ನು ತಂದು ಹೊಡೆಯುವ ಕೆಲಸ ಮಾಡುತ್ತಿದೆ. ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಶಕ್ತಿಗಳೇ ಇಲ್ಲದಂತಾಗಿದೆ. ನಾವು ಯಾವ ಧರ್ಮ ವಿರೋಧಿಯು ಅಲ್ಲ ಹಿಂದೆ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲ ಧರ್ಮದವರನ್ನು ಸಹಬಾಳ್ವೆಯಿಂದ ಕಂಡು ಸಾಮೂಹಿಕವಾಗಿ ಅರ್ಥ ವ್ಯವಸ್ಥೆಯನ್ನು ಬಳಸಿಕೊಂಡು ಸಮಗ್ರ ಅಭಿವೃದ್ಧಿಗಾಗಿ ನಿಂತಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪಾಠವನ್ನು ನೀಡಲಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ ಇಡೀ ರಾಜ್ಯದಲ್ಲಿ ರಸ್ತೆಗಳು ತೀವ್ರ ಹದಗೆಟ್ಟು ಸಂಚಾರಕ್ಕೆ ದುಸ್ತರವಾಗಿದೆ. ಜಿಲ್ಲೆಯಲ್ಲಿ ಗುಂಡಿಗಳಮೇಲೆ ವಾಹನ ಚಾಲನೆ ಮಾಡುವ ಪರಿಸ್ಥಿತಿ ತಂದೊಡ್ಡಿದೆ.ಶಾಸಕರು ಕೆಡಿಪಿ ಸಭೆನಡೆಸದೆ ಇರುವುದರಿಂದ ಅಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ನಾವಿಂದು ರಸ್ತೆಯಲ್ಲಿ ಕೇಳಬೇಕಾದ ಪರಿಸ್ಥಿತಿಬಂದಿದೆ. ಇದುವರೆಗೆ ಎನ್ ಡಿ ಆರ್ ಎಫ್ ಅನುದಾನದಲ್ಲಿ ಕಾಮಗಾರಿ ನಡೆಸಿದ್ದಾರೆ.

ಇವರಿಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಹದಗೆಟ್ಟ ರಸ್ತೆಗಳನ್ನು ದುರಸ್ತಿ ಪಡಿಸದೆ ವೈಯಕ್ತಿಕ ಮನೆಗಳಿಗೆ ತೆರಳುವ ರಸ್ತೆಯನ್ನು ಎಡಿ ಆರ್ ಎಫ್ ಅನುದಾನದಲ್ಲಿ ಮಾಡಿದ್ದಾರೆ ಎಂದು ಆರೋಪಿಸಿದರು. ಇದೇ ಸಂದರ್ಭ ಪ್ರತಿಭಟನಾಕಾರರು ಸ್ಥಳದಲ್ಲಿದ್ದ ಅಭಿಯಂತರರನ್ನು ರಸ್ತೆ ದುರಸ್ತಿ ಪಡಿಸದೆ ಇರುವ ಬಗ್ಗೆ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

 ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರರು ಅನುದಾನ ಬಿಡುಗಡೆಯಾಗಿದ್ದು ಮಳೆಗಾಲದ ಬಳಿಕ ದುರಸ್ತಿ ಪಡಿಸುವ ಬಗ್ಗೆ ವಿವರಿಸಿದರು. ಇದೇ ಸಂದರ್ಭ ಕಂದಾಯ ಪರಿವೀಕ್ಷಕ ರವಿಕುಮಾರ್ ಅವರಮುಕಾಂತರ ರಸ್ತೆ ದುರಸ್ತಿ ಪಡಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಡಕುಂಟಾಯಿತು.

ಈ ಸಂದರ್ಭ ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಾಂಗಿರ ಸತೀಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಅಂಬಿ ಕಾರ್ಯಪ್ಪ, ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿವ ಚಾಳಿಯಂಡ ಜಗದೀಶ್, ಯುವ ಮೋರ್ಚಾದ ಅಧ್ಯಕ್ಷ ಚೇತನ್ ಬಂಗೇರ, ಡಿಸಿಸಿ ಉಪಾಧ್ಯಕ್ಷ ಹರೀಶ್ ಪೂವಯ್ಯ, ಓಬಿಸಿ ಮಂಡಲ ಅಧ್ಯಕ್ಷ ಪ್ರದೀಪ್,ಮಡಿಕೇರಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಮನು ಮಹೇಶ್,ಜಿಲ್ಲಾ ಸಾಮಾಜಿಕ ಜಾಲತಾಣದ ಕರವಂಡ ಅಪ್ಪಣ್ಣ, ದವಸಬಂಢಾರದ ಉಪಾಧ್ಯಕ್ಷ ಕಿಶೋರ್ ಬೋಪಣ್ಣ ಸೇರಿದಂತೆ ಬಿಜೆಪಿ ಪಕ್ಷದ ಪ್ರಮುಖಂಡರು,ಬೂತ್ ಮಟ್ಟದ ಕಾರ್ಯಕರ್ತರು,ವಾಹನ ಚಾಲಕರು, ಸಾರ್ವಜನಿಕರು ಹಾಜರಿದ್ದರು.ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತು ಕಲ್ಪಿಸಿದ್ದರು.