ಭಾಗಮಂಡಲ: ಕೆವಿಜಿ ಐಟಿಐನಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಭಾಗಮಂಡಲ: ಭಾಗಮಂಡಲದ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶನಿವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗಮಂಡಲದ ಕಾವೇರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ದಿವಾಕರ್ ಕೆ.ಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ಕಚೇರಿ ಅಧೀಕ್ಷಕ ವಿನೋದ್ ಸಿ.ಕೆ ಪ್ರಾಸ್ತಾವಿಕ ನುಡಿಗಳನ್ನಾಡಿ, ಸಂಸ್ಥೆ ಬೆಳೆದು ಬಂದ ಹಾದಿಯನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶ್ರೀಕಾಂತ್ ಕೆ.ವಿ ಮಾತನಾಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು. ಪ್ರತಿಭಾ ಪುರಸ್ಕಾರ;ಈ ಸಂದರ್ಭ ಸಂಸ್ಥೆಯ ಪ್ರತಿಯೊಂದು ವಿಭಾಗದ ಒಬ್ಬ ಅತ್ಯುತ್ತಮ ತರಬೇತಿದಾರ ವಿದ್ಯಾರ್ಥಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಮೋಕ್ಷಿತಾ, ನಾಸಿಫಾ, ಶರತ್ ಮತ್ತು ಭರತ್ ಕಾರ್ಯಕ್ರಮ ನಿರೂಪಿಸಿದರು.

