ಅತ್ತೂರುಕೊಲ್ಲಿ ಹಾಡಿಯಲ್ಲಿ ಆದಿವಾಸ ಜನಾಂಗದ ಹೋರಾಟದಲ್ಲಿ ಭಾಗಿಯಾದ ನಟ ಚೇತನ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಅತ್ತೂರುಕೊಲ್ಲಿ ಹಾಡಿಯಲ್ಲಿ ಆದಿವಾಸ ಜನಾಂಗದ ಹೋರಾಟದಲ್ಲಿ ಭಾಗಿಯಾದ ನಟ ಚೇತನ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಪೊನ್ನಂಪೇಟೆ: ತಾಲ್ಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕರಡಿಕಲ್ಲು ಅತ್ತೂರುಕೊಲ್ಲಿ ಹಾಡಿಯಲ್ಲಿ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ವೈಯಕ್ತಿಕ ಹಕ್ಕು ಹಾಗೂ ಸಮುದಾಯ ಹಕ್ಕುಗಳಿಗಾಗಿ ಒತ್ತಾಯಿಸಿ ನಿರಂತರವಾಗಿ ನಡೆಯುತ್ತಿರುವ ಆದಿವಾಸಿ ಸಮುದಾಯದ 52 ಕುಟುಂಬದವರ ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ನೀಡಿದ ಐವರ ವಿರುದ್ದ ಮೊಕದ್ದಮೆ ದಾಖಲಾಗಿದೆ.

ಈ  ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ನಾಗರಹೊಳೆ ಅದಿವಾಸಿ ಜಾಮ್ಮಪಾಳೆ ಹಕ್ಕು ಸ್ಥಾಪನ ಸಮಿತಿಯ ಕಾರ್ಯದರ್ಶಿ ಶಿವು ಅವರು, ಮಾತನಾಡಿ, ದಿನಾಂಕ 8 ರಂದು ನಾಗರಹೊಳೆ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ ಅನನ್ಯ ಕುಮಾರ್ ಅವರು ಅತ್ತೂರು ಕೊಲ್ಲಿಹಾಡಿ ನಿವಾಸಿಗಳ ಹೋರಾಟಕ್ಕೆ ಬೆಂಬಲ ನೀಡಿದ ಹೋರಾಟಗಾರರಿಗೆ, ಪತ್ರಕರ್ತರಿಗೆ, ಸಂಘಟನೆಗಾರರಿಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂಬ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಹೋರಾಟಕ್ಕೆ ಬೆಂಬಲಿಸಿದ ಚೇತನ್ ಅಹಿಂಸಾ, ನ್ಯಾಷನಲ್ ಆದಿವಾಸಿ ಅಲಯನ್ಸ್ನ ಮುಖ್ಯಸ್ಥರಾದ ರಾಯ್ ಡೇವಿಡ್, ರಾಜಾರಾಮ್, ನಿಖಿತ ಜೈನ್ ಪತ್ರಕರ್ತೆ, ಸರ್ತ ಜಾಲಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇವರೆಲ್ಲರೂ ಯಾವುದೇ ರೀತಿಯ ಸ್ವಇಚ್ಚೆಯಿಂದ ಬಂದಿರುವುದಿಲ್ಲ ಹಾಡಿ ನಿವಾಸಿಗಳ ಹಕ್ಕುಗಳ ಸ್ಥಾಪನೆಯ ದಿನದಂದು ಮಾಧ್ಯಮದವರ ಬೆಂಬಲ ಹಾಗೂ ಸಂಘಟನೆಗಳ ಬೆಂಬಲ ಬೇಕಿರುವುದರಿಂದ ನಾವೇ ಸ್ವತಹ ಅವರನ್ನು ಬರಮಾಡಿಕೊಂಡಿದ್ದು, ಇವರ ವಿರುದ್ದ ಉದ್ದೇಶಪೂರ್ವಕವಾಗಿ ಹಾಗೂ ಹೋರಾಟಕ್ಕೆ ಬೆಂಬಲ ಸೂಚಿಸದಿರಲು ಪ್ರಕರಣವನ್ನು ದಾಖಲಿಸಿರುವುದು ಖಂಡನಿಯ ಎಂದರು.

ಪ್ರಗತಿಪರ ಚಿಂತಕ ಹಾಗೂ ಚಲನಚಿತ್ರ ನಟ ಚೇತನ್ ಅವರು ಮಾತನಾಡಿ, ಅದಿವಾಸಿ ಜನರು ಮೂಲ ಜನಾಂಗ. 10-12 ಸಾವಿರ ವರ್ಷಗಳಿಂದ ಹಿಂದೆ ಕೃಷಿ ಆರಂಭವಾಗುವ ಮೊದಲು ನಾವೆಲ್ಲ ಅದಿವಾಸಿಗಳೇ ಹಾಡಿ ನಿವಾಸಿಗಳಿಗೆ ಅರಣ್ಯದಲ್ಲಿ ಎಲ್ಲಾ ತರಹದ ಹಕ್ಕು ಇರಬೇಕೆಂಬುದು 2006ರ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿದೆ. ಈ ಹಕ್ಕನ್ನು ಪಡೆದುಕೊಳ್ಳಲು ನಾಗರಹೊಳೆ ಪ್ರದೇಶದ ಜೇನು ಕುರುಬರ ಹಾಡಿ ನಿವಾಸಿಗಳು ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಬೆಂಬಲ ಸೂಚಿಸಬೇಕೆಂಬ ಮನವಿ ಮಾಡಿದ ಮೇರೆಗೆ ನಾಗರಹೊಳೆಯ ಅತ್ತೂರು ಕೊಲ್ಲಿ ಹಾಡಿಯ ಹಾಡಿ ನಿವಾಸಿಗಳೊಂದಿಗೆ ಹೋರಾಟದಲ್ಲಿ ಕೈಜೋಡಿಸಿದ್ದೆವು. ಹೋರಾಟದಲ್ಲಿ ಭಾಗಿಯಾಗಿರುವುದಕ್ಕೆ ಆರ್. ಎಫ್ ಓ ಹಾಗೂ ಅರಣ್ಯ ಇಲಾಖೆಯಿಂದ ಸೂಚನಾ ಪತ್ರ ಬಂದಿದ್ದು, ಅದರ ಪ್ರಕಾರ ಅತಿಕ್ರಮ ಪ್ರವೇಶ ಹಾಗೂ ಹೋರಾಟಗಾರರಿಗೆ ಪ್ರಚೋದನೆ ನೀಡಿರುವುದಾಗಿ ತಿಳಿಸಿರುತ್ತಾರೆ. ಇದಕ್ಕೆ ಪ್ರತಿಯಾಗಿ ಇಂದು ಅರಣ್ಯಾಧಿಕಾರಿಯವರ ಕಚೇರಿಗೆ ಭೇಟಿ ನೀಡಿ ಕಾಡು ಆದಿವಾಸಿಗಳ ಹಕ್ಕು ಅದೇ ರೀತಿ ಅರಣ್ಯ ಪ್ರವೇಶಿಸಬಾರದೇಂಬ ಯಾವುದೇ ನಾಮಫಲಕವಿರಲಿಲ್ಲ. ನಾವು ಅಹಿಂಸಾ ಸಂಘಟನೆಯಲ್ಲಿ ನಂಬಿಕೆ ಇಟ್ಟು ಕಾರ್ಯನಿರ್ವಹಿಸುತ್ತಿರುವವರು ಯಾವುದೇ ಕಾರಣಕ್ಕೂ ಹಿಂಸೆ ಪ್ರಚೋದನೆ ನೀಡಿರುವುದಿಲ್ಲ. ಆದಿವಾಸಿ ಜನರ ಹಕ್ಕುಗಳನ್ನು ಎತ್ತಿ ಹಿಡಿಯಬೇಕು ಎಂಬ ಉದ್ದೇಶವಿದೆ. ಈ ಕುರಿತು ನಿಜಾಂಶವನ್ನು ಅರಣ್ಯ ಅಧಿಕಾರಿ ಅವರ ಎದುರು ಸಾಬೀತುಪಡಿಸಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ವಿಚಾರಣೆಗೆ ಕರೆದರೂ ತಪ್ಪದೆ ಬರುವುದಾಗಿ ತಿಳಿಸಿದರು.

 ರಾಷ್ಟ್ರಿಯ ಆದಿವಾಸಿ ಒಕ್ಕೂಟದ ರಾಷ್ಟ್ರೀಯ ಸಂಚಾಲಕ ಹಾಗೂ ಕೊಡಗು ಗ್ರಾಮೀಣಾಭಿವೃದ್ದಿ ಸಂಸ್ಥೆಯ ನಿರ್ದೇಶಕ ರಾಯ್ ಡೇವಿಡ್ ಅವರು ಮಾತನಾಡಿ, 1984 ರಿಂದ ಆದಿವಾಸಿ ಜನರ ಹಕ್ಕುಗಳನ್ನು ಸ್ಥಾಪಿಸಲು ಪ್ರತಿ ಬಾರಿಯೂ ಬೆಂಬಲವನ್ನು ನೀಡುತ್ತಾ ಬಂದಿದ್ದೇವೆ ಅದೇ ರೀತಿ ಅತ್ತೂರು ಕೊಲ್ಲಿ ಹಾಡಿಯಲ್ಲಿ ಹೋರಾಟ ನಡೆಯುತ್ತಿದ್ದ ಸಂದರ್ಭ ಕಾನೂನಾತ್ಮಕ ಬೆಂಬಲ ಸಿಗದೇ ಇದ್ದ ಕಾರಣ ಅದಿವಾಸಿ ಮುಖಂಡರ ಆಹ್ವಾನದ ಮೇರೆಗೆ ಹೋರಾಟದಲ್ಲಿ ಭಾಗವಹಿಸಿದೆವು. ಆ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ಯಾವುದೇ ರೀತಿಯ ಪ್ರಶ್ನೆ ಮಾಡಿರುವುದಿಲ್ಲ. ಹೋರಾಟ ನಡೆದ ಮರುದಿನ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಹೋರಾಟದಲ್ಲಿ ಭಾಗವಹಿಸಿದ್ದೆವು. ಆ ಸಂದರ್ಭದಲ್ಲಿ ತಹಶೀಲ್ದಾರ್ ಅವರು ಪಿ ಡಿ ಓ ಅವರಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮರುದಿನ ಆದಿವಾಸಿಗಳ ಗ್ರಾಮ ಸಭೆಯಲ್ಲಿ ಪಾಲ್ಗೊಂಡಿದ್ದೆವು. ಈ ಕಾರಣದಿಂದಾಗಿ ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿದ್ದೀರಾ ಎಂದು ಸೂಚನಾ ಪತ್ರವನ್ನು ನೀಡಿದ್ದಾರೆ ಈ ಕುರಿತು ಅರಣ್ಯಾಧಿಕಾರಿಯವರನ್ನು ಭೇಟಿ ಮಾಡಿ ಅರಣ್ಯ ಪ್ರವೇಶಿಸಬಾರದೆಂಬ ಯಾವುದೇ ನಾಮಫಲಕವಿರಲಿಲ್ಲ ಹಾಗೂ ಪ್ರಚೋದನೆ ನೀಡುವಂತಹ ಕೆಲಸವನ್ನಾಗಲಿ ಮಾಡಿಲ್ಲವೆಂದು ಸ್ಪಷ್ಟನೆ ನೀಡಿದ್ದೇವೆ ಎಂದರು. ಈ ಸಂದರ್ಭ ನಾಗರಹೊಳೆ ಜಮ್ಮಾಪಾಳೆ ಹಕ್ಕು ಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಕೆ ತಿಮ್ಮ, ಹಾಗೂ ಸಿ. ಎನ್. ಎ. ಪಿ. ಎ ಸಂಘಟನೆಯ ಸ್ವಯಂ ಸೇವಕ ರಾಜಾ ರಾಮ್ ಇದ್ದರು.

ವರದಿ:ಚಂಪಾ ಗಗನ, ಪೊನ್ನಂಪೇಟೆ.